ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ | ಬರಿದಾಗುತ್ತಿರುವ ಕೆರೆಗಳು: ಜನರಲ್ಲಿ ಆತಂಕ

ಪುರಸಭೆಯಿಂದ ಕೊರೆಯಿಸಿದ ಕೊಳವೆಬಾವಿಗಳು ವಿಫಲ: ನೀರು ಪೂರೈಸುವ ಸವಾಲು
Published 21 ಮೇ 2024, 5:28 IST
Last Updated 21 ಮೇ 2024, 5:28 IST
ಅಕ್ಷರ ಗಾತ್ರ

ಮಸ್ಕಿ: ಈಚೆಗೆ ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ಕುಡಿಯುವ ಉದ್ದೇಶಕ್ಕೆ ನೀರು ಹರಿಸಿದಾಗ ಭರ್ತಿಯಾಗಿದ್ದ ಪಟ್ಟಣದ ಶಾಶ್ವತ ಶುದ್ಧ ಕುಡಿಯುವ ನೀರಿನ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದ್ದು, ಸಾರ್ವಜನಿಕರ ಆತಂಕಗೊಂಡಿದ್ದಾರೆ.

28 ಹಾಗೂ 10 ಅಡಿ ಸಾಮರ್ಥ್ಯದ ಎರಡು ಕೆರೆಗಳನ್ನು ಪುರಸಭೆ ಭರ್ತಿ ಮಾಡಿಕೊಂಡಿತ್ತು. ಇದೀಗ 10 ಅಡಿಗಳಷ್ಟು ನೀರು ಲಭ್ಯ ಇದೆ. ಬರುವ ದಿನಗಳಲ್ಲಿ ನೀರಿನ ಕೊರತೆಯ ಭೀತಿ ಕಾಡುತ್ತಿದ್ದು, ನೀರು ಒದಗಿಸುವುದು ಪುರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

10 ಅಡಿ ಸಾಮರ್ಥ್ಯದ ಕೆರೆ ಖಾಲಿಯಾಗಿದೆ. 28 ಅಡಿ ಸಾಮರ್ಥ್ಯದ ಕೆರೆಯಲ್ಲಿ ಕೇವಲ 10 ಅಡಿಗಳಷ್ಟು ನೀರು ಇದ್ದು ಬರುವ 20 ದಿನಗಳವರೆಗೆ ಮಾತ್ರ ನೀರು ಪೂರೈಸಲು ಸಾಧ್ಯ ಎಂದು ಪುರಸಭೆ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

ಈಗಾಗಲೇ ಪಟ್ಟಣದ 23 ವಾರ್ಡ್‌ಗಳಿಗೆ ಸರದಿ ಮೇಲೆ ಐದು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಆದರೂ ಜೂನ್ ಅಂತ್ಯದವರೆಗೆ ನೀರು ಕೊಡುವ ಸವಾಲು ಪುರಸಭೆ ಮುಂದಿದೆ.

ಪಟ್ಟಣದಲ್ಲಿನ ಕಿರು ನೀರು ಸಬರಾಜು ಯೋಜನೆಗಳು ಅಂತರ್ಜಲ ಕುಸಿತದಿಂದ ಸಮರ್ಪಕವಾಗಿ ನೀರು ಕೊಡಲು ಸಾಧ್ಯವಾಗದೆ ವಿಫಲವಾಗಿವೆ.

ಹೆಚ್ಚಿದ ಸೋರಿಕೆ ಪ್ರಮಾಣ: ಕುಡಿಯುವ ನೀರಿನ ಎರಡು ಕೆರೆಯಲ್ಲಿ ಮಾರ್ಚ್ ಅಂತ್ಯದ ವೇಳೆಗೆ 38 ಅಡಿ ನೀರು ಸಂಗ್ರಹವಾಗಿತ್ತು. ಆದರೆ, ಕೆರೆಯಲ್ಲಿ ಸೋರಿಕೆ ಇರುವ ಕಾರಣ ಹೆಚ್ಚಿನ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರಿಂದ ನೀರು ನಿರ್ವಹಣೆ ಪುರಸಭೆ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

15 ರಿಂದ 20 ದಿನಗಳವರೆಗೆ ಮಾತ್ರ ಕೆರೆಯಲ್ಲಿನ ನೀರು ಕುಡಿಯಲು ಕೊಡಲು ಸಾಧ್ಯ. ಮುಂದಿನ ದಿನಗಳಲ್ಲಿ ಯಾವ ಮೂಲದಿಂದ ನೀರು ಕೊಡಬೇಕು ಎಂಬುದು ಪುರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಪುರಸಭೆಯಿಂದ 12 ಕೊಳವೆಬಾವಿಗಳನ್ನು ಕೊರೆಯಿಸಲಾಗಿತ್ತು. ಅದರಲ್ಲಿ 7 ಕೊಳವೆಬಾವಿಗಳಲ್ಲಿ ಒಂದರಲ್ಲಿ ಮಾತ್ರ ನೀರು ಬರುತ್ತಿದೆ. ಆದ್ದರಿಂದ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. 5 ಕೊಳವೆಬಾವಿಗಳು ವಿಫಲವಾಗಿವೆ ಎಂದು ಪುರಸಭೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುಡಿಯುವ ನೀರಿಗಾಗಿ ಕೊರೆಯಿಸಿದ ಕೊಳವೆಬಾವಿಗಳು ವಿಫಲವಾಗಿವೆ. ಬರುವ ದಿನಗಳಲ್ಲಿ ಖಾಸಗಿ ವ್ಯಕ್ತಿಗಳ ಬಾವಿ ಹಾಗೂ ಇತರ ಜಲಮೂಲಗಳಿಂದ ನೀರು ಪಡೆದು ಸಾರ್ವಜನಿಕರಿಗೆ ನೀರು ಕೊಡಲು ಕ್ರಮ ಕೈಗೊಳ್ಳಲಾಗುವುದು

-ಎಸ್‌.ಬಿ.ತೋಡಕರ್ ಮುಖ್ಯಾಧಿಕಾರಿ ಪುರಸಭೆ ಮಸ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT