ಶುಕ್ರವಾರ, ಮಾರ್ಚ್ 24, 2023
31 °C
ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಭಾಗದ ರೈತರಿಂದ ರಸ್ತೆ ತಡೆದು ಪ್ರತಿಭಟನೆ

ಕಾಲುವೆಗೆ ಸಮರ್ಪಕ ನೀರು ಹರಿಸಿ: ತುಂಗಭದ್ರಾ ಎಡದಂಡೆ ಭಾಗದ ರೈತರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಭಾಗಕ್ಕೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಕೆಳಭಾಗದ ರೈತರು ಸೋಮವಾರ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಜೊತೆಗೆ ಇಲ್ಲಿನ ಲಿಂಗಸೂಗೂರು–ರಾಯಚೂರು ಮುಖ್ಯ ರಸ್ತೆ ತಡೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಜೆ. ಶರಣಪ್ಪಗೌಡ ಮಾತನಾಡಿ, ‘ತುಂಗಭದ್ರಾ ಅಣೆಕಟ್ಟೆಯಲ್ಲಿ ಅಗತ್ಯ ನೀರು ಸಂಗ್ರಹವಿದ್ದು, ಮೇಲ್ಭಾಗದಲ್ಲಿ ಮಾತ್ರ ಸಮರ್ಪಕವಾಗಿ ಹರಿಯುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಮೇಲ್ಭಾಗದ ರೈತರಿಂದ ಅಕ್ರಮ ನೀರು ಬಳಕೆ ಯಿಂದಾಗಿ ಕೊನೆಯ ಭಾಗಕ್ಕೆ ನೀರು ಬರುತ್ತಿಲ್ಲ’ ಎಂದು ಆರೋಪಿಸಿದರು.

‘ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಹಾರ ಕಲ್ಪಿಸುವವರೆಗೆ ಧರಣಿ ಮುಂದುವರಿಸುತ್ತೇವೆ’ ಎಂದು ರೈತರು ಪಟ್ಟು ಹಿಡಿದರು. ಎರಡು ಗಂಟೆಗೂ ಅಧಿಕ ರಸ್ತೆ ಸಂಚಾರ ಬಂದ್ ಆಗಿತ್ತು.

ನಂತರ ಧರಣಿ ನಿರತ ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಅವರು ದೂರವಾಣಿ ಮೂಲಕ ಮಾತನಾಡಿ, 144 ಸೆಕ್ಷನ್ ಜಾರಿ ಮಾಡಿ 3000 ಕ್ಯೂಸೆಕ್‌ ನೀರನ್ನು ಸತತವಾಗಿ ಒದಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮಿ, ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಅವರಿಗೆ ಮನವಿಪತ್ರ ಸಲ್ಲಿಸಿದ ರೈತರು,
‘ಈ ಪ್ರತಿಭಟನೆಯು ಕೇವಲ ಸಾಂಕೇತಿಕವಾಗಿದ್ದು, ಎರಡು ದಿನಗಳಲ್ಲಿ ನೀರು ಹರಿಸದಿದ್ದರೆ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಂಚಾರ ಅಸ್ತವ್ಯಸ್ತ:

ತರು ಲಿಂಗಸೂಗೂರು– ರಾಯಚೂರು ಮುಖ್ಯರಸ್ತೆ ಸಂಚಾರವನ್ನು ಕೆಲ ಕಾಲ ಬಂದ್ ಮಾಡಿದ್ದರು. ಸೋಮವಾರ ವಾರದ ಸಂತೆ ಇದ್ದರಿಂದ ಸಂತೆಗೆ ಬಂದ ಹಳ್ಳಿಗರು, ವ್ಯಾಪಾರಸ್ಥರು, ಪ್ರಯಾ ಣಿಕರಿಗೆ ತೊಂದರೆ ಉಂಟಾಯಿತು.

ಮಾಜಿ ಶಾಸಕರಾದ ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ್, ರೈತ ಮುಖಂಡರಾದ ಶಂಕರಗೌಡ ಹರವಿ, ಚುಕ್ಕಿ ಸೂಗಪ್ಪ ಸಾಹುಕಾರ, ಎಂ.ಸೂರ್ಯರಾವ್ ಜಾಲಾಪುರ ಕ್ಯಾಂಪ್, ರೈತ ಸಂಘದ ಅಮರೇಶ ಪನ್ನೂರು, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಅಯ್ಯನಗೌಡ ಜಂಬಲದಿನ್ನಿ, ಜೆ.ದೇವರಾಜ ಗೌಡ, ಎಂ.ಶ್ರೀನಿವಾಸ ಜಾಲಾಪುರ ಕ್ಯಾಂಪ್, ರೈತ ಸಂಘದ ಜಿಲ್ಲಾಧ್ಯಕ್ಷೆ ಅನಿತಾ ಮಂತ್ರಿ, ರಮೇಶ ದರ್ಶನಕರ್, ಕಲ್ಲೂರು ಬಸವರಾಜ, ಶಿವಶರಣಪ್ಪಗೌಡ ಖಾನಾಪುರ, ಬೈನೇರ ರಾಮಯ್ಯ, ಎಂ.ಉದಯಕುಮಾರ ಚಾಗಭಾವಿ, ನಾಗರಾಜ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು