ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಎಂಟು ಜನ ರೈತರ ಅಮಾನುಷ ಸಾವಿಗೆ ವ್ಯಾಪಕ ಆಕ್ರೋಶ

ಉತ್ತರ ಪ್ರದೇಶದಲ್ಲಿ ರೈತರ ಮೇಲೆ ವಾಹನ ಹರಿಸಿದ ಪ್ರಕರಣ: ಜಿಲ್ಲೆಯ ವಿವಿಧೆಡೆ ರೈತ ಸಂಘ, ಎಡ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ
Last Updated 5 ಅಕ್ಟೋಬರ್ 2021, 2:55 IST
ಅಕ್ಷರ ಗಾತ್ರ

ರಾಯಚೂರು: ಉತ್ತರ ಪ್ರದೇಶದಲ್ಲಿ ಶಾಂತಿಯುತವಾಗಿ ಚಳವಳಿ ನಡೆಸುತ್ತಿದ್ದ ರೈತರ ಮೇಲೆ ಅಮಾನುಷವಾಗಿ ವಾಹನ ಚಲಾಯಿಸಿ ಸಾವಿಗೆ ಕಾರಣರಾದವರನ್ನು ಬಂಧಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಸಚಿವನ ಪುತ್ರ ಮತ್ತು ಸಹಚರರು ವಾಹನ ಚಲಾಯಿಸಿ ಹತ್ಯೆ ಮಾಡಿರುವುದುಖಂಡನೀಯ. ಈ ಕೃತ್ಯದ ಹೊಣೆ ಸರ್ಕಾರ ಮತ್ತು ಸಚಿವರು ಹೊರಬೇಕು. ಅಲ್ಲಿನ ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಹಾಗೂ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಅವರನ್ನು ಸಂಪುಟದಿಂದ ಕೈಬಿಡಬೇಕು. ಈ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹೇಳಿದರು.

ಮೃತ ರೈತರ ಕುಟುಂಬಕ್ಕೆ ಸೂಕ್ತ‌ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ‌ ಮಾಲಿಪಾಟೀಲ, ದೊಡ್ಡಬಸನಗೌಡ, ಅಬ್ದುಲ್‌ ಮಜೀದ್, ಸೂಗೂರಯ್ಯ ಆರ್.ಎಸ್.ಮಠ, ಯಂಕಪ್ಪ ಕಾರಬಾರಿ, ಜಾನ್ ವೆಸ್ಲಿ, ಎಂ.ಆರ್.ಭೇರಿ, ದೇವರಾಜ ಘಂಟೆ ಹಾಗೂ ಅಂಜಿನಯ್ಯ ಕುರುಬದೊಡ್ಡಿ ಇದ್ದರು.

‘ನ್ಯಾಯಾಂಗ ತನಿಖೆ ನಡೆಯಲಿ’

ಸಿಂಧನೂರು: ಉತ್ತರಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ವಾಹನ ಹತ್ತಿಸಿ ಎಂಟು ಮಂದಿ ರೈತರನ್ನು ಬಲಿ ತೆಗೆದುಕೊಂಡಿರುವ ಘಟನೆಯಿಂದ ದೇಶದ ಪ್ರತಿಯೊಬ್ಬ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಕರ್ನಾಟಕ ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ಆಗ್ರಹಿಸಿದ್ದಾರೆ.

ಸೋಮವಾರ ಹೇಳಿಕೆ ನೀಡಿರುವ ಅವರು,‘ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರ ಭೇಟಿ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನಾ ಸಂದರ್ಭದಲ್ಲಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಪಡೆಯ ಎರಡು ಎಸ್‍ಯುವಿಗಳನ್ನು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹತ್ತಿಸಿ 8 ಜನ ರೈತರನ್ನು ಕೊಲೆ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಕನಿಷ್ಠ ಸೌಜನ್ಯಕ್ಕಾದರೂ ಪ್ರಧಾನಿ ನರೇಂದ್ರ ಮೋದಿ ಸ್ಥಳಕ್ಕೆ ಭೇಟಿ ನೀಡದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ’ ಎಂದು ದೂರಿದ್ದಾರೆ.

ಈ ಘಟನೆಗ ಕಾರಣರಾದ ಸಚಿವರನ್ನು ಕೂಡಲೇ ವಜಾಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮೃತರ ಕುಟುಂಬಕ್ಕೆ ತಲಾ ₹50 ಲಕ್ಷ ಪರಿಹಾರ ಘೋಷಣೆ ಮಾಡಬೇಕು ಎಂದಿದ್ದಾರೆ.

ಕ್ರಮಕ್ಕೆ ಆಗ್ರಹ

ಸಿಂಧನೂರು: ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ವಾಹನ ಹತ್ತಿಸಿ ಹಲವಾರು ರೈತರ ಕಗ್ಗೊಲೆಗೆ ಕಾರಣರಾದ ಕೇಂದ್ರ ಸಚಿವರ ಪುತ್ರ ಹಾಗೂ ಆತನ ಸಹಚರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಿಪಿಐ ಮತ್ತು ಸಿಪಿಐಎಂಎಲ್ ಲಿಬರೇಶನ್ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ಸ್ಥಳೀಯ ಮಿನಿವಿಧಾನಸೌಧದ ಮುಂದೆ ಪ್ರತಿಭಟಿಸಲಾಯಿತು.

ಈ ಘಟನೆಯ ಬಗ್ಗೆ ಕೇಂದ್ರ ಸರ್ಕಾರ ಮೌನ ವಹಿಸಿರುವುದು ರೈತವಿರೋಧಿ ಧೋರಣೆಯಾಗಿದೆ ಎಂದು ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಬಾಷುಮಿಯಾ ಆಪಾದಿಸಿದರು. ಕೇಂದ್ರದ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ತೇನಿಯ ಮೇಲೂ ಕೊಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಹಾಗೂ ಆತನನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ಮೂಲಕ ಇಡೀ ಪ್ರಕರಣದ ತನಿಖೆಗೆ ಆದೇಶಿಸಬೇಕು ಎಂದರು.

ಉಪ ತಹಶೀಲ್ದಾರ್ ಚಂದ್ರಶೇಖರ ಮನವಿ ಪತ್ರ ಸ್ವೀಕರಿಸಿದರು. ಮುಖಂಡರಾದ ಜಗದೀಶ ಸುಕಾಲಪೇಟೆ, ಬಸವರಾಜ ಕೊಂಡೆ, ರಾಘವೇಂದ್ರ, ಬಸವರಾಜ ಬೆಳಗುರ್ಕಿ, ಮಹಾದೇವ, ವಿರುಪಣ್ಣ, ಯಮನೂರು, ಪರಶುರಾಮ ತಿಡಿಗೋಳ ಹಾಗೂ ಎಂ.ಎಸ್.ರಾಜಶೇಖರ ಸೇರಿ ಹಲವರು
ಇದ್ದರು.

‘ಕ್ರಿಮಿನಲ್‌ ಪ್ರಕರಣ ದಾಖಲಿಸಿ’

ಮಾನ್ವಿ: ಉತ್ತರ ಪ್ರದೇಶ ರಾಜ್ಯದಲ್ಲಿ ಪ್ರತಿಭಟನಾನಿರತ ರೈತರ ಹತ್ಯೆ ಘಟನೆ ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ತಾಲ್ಲೂಕು ಘಟಕದ ಸದಸ್ಯರು ಸೋಮವಾರ ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಪಡೆ ವಾಹನ ಪ್ರತಿಭಟನಾನಿರತ ರೈತರ ಮೇಲೆ ದಾಳಿ ನಡೆಸಿ ಮಾರಣಹೋಮ ನಡೆಸಿರುವುದು ಖಂಡನೀಯ. ಈಚೆಗೆ ಪ್ರತಿಭಟನಾನಿರತ ರೈತರ ಕುರಿತು ಸಚಿವ ಅಜಯ್ ಮಿಶ್ರಾ ಕಟುವಾಗಿ ಟೀಕಿಸಿದ್ದರು. ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಬೆದರಿಕೆ ಹಾಕಿದ್ದರು. ಕಾರಣ ರೈತರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಚಿವ ಅಜಯ್ ಮಿಶ್ರಾ ಸೇರಿದಂತೆ ರೈತರ ಹತ್ಯೆ ಘಟನೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ರಾಷ್ಟ್ರಪತಿಗೆ ಬರೆದ ಮನವಿ ಪತ್ರದಲ್ಲಿ ಹೇಳಿದರು.

ಸಮಿತಿಯ ಮುಖಂಡರಾದ ಅಶೋಕ ನಿಲೋಗಲ್, ಎಚ್.ಶರ್ಪುದ್ದೀನ್ ಪೋತ್ನಾಳ, ಡಿ.ವೀರನಗೌಡ, ವಿ.ಮುದುಕಪ್ಪ ನಾಯಕ, ಮಾರೆಪ್ಪ ಹರವಿ, ಲಕ್ಷ್ಮಣಜಾನೇಕಲ್, ಬುಡ್ಡಪ್ಪನಾಯಕ, ದೇವಣ್ಣ ಕೆ.ಗುಡದಿನ್ನಿ, ಬಸವರಾಜ ಯಡಿವಾಳ, ಅಯ್ಯಪ್ಪ ನಾಯಕ, ಸಿದ್ದಪ್ಪ ಅಮರಾವತಿ ಹಾಗೂ ಖಾಜಾ ಮೋಹಿನುದ್ದೀನ್ ಅವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT