ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಬೆಂಕಿ ಬಿಸಿಲಿಗೆ ಐವರ ಸಾವು, ಕಾರಿಗೆ ಬೆಂಕಿ

ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಆತಂಕ
Published 4 ಮೇ 2024, 15:33 IST
Last Updated 4 ಮೇ 2024, 15:33 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಬೆಂಕಿ ಬಿಸಿಲು ಆವರಿಸಿಕೊಂಡಿದ್ದು, ಬಿಸಿಲಿನ ಝಳಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಶಕ್ತಿನಗರದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿದಿದೆ.

ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಡಾ ಗ್ರಾಮದಲ್ಲಿ ಗರಿಷ್ಠ ಉಷ್ಠಾಂಶ 45 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಪ್ರಖರ ಬಿಸಿಲು ಹಾಗೂ ನಿರ್ಜಲೀಕರಣದಿಂದ ನಾಲ್ವರು ಮೃಟ್ಟಿರುವುದನ್ನು ಗ್ರಾಮಸ್ಥರು ದೃಢಪಡಿಸಿದ್ದಾರೆ..

ವೀರೇಶ ಕನಕಪ್ಪ(70) ಹಳ್ಳಕ್ಕೆ ಬಟ್ಟೆ ತೊಳೆಯಲು ಹೋದಾಗ ಸಂಜೆ ಅಲ್ಲಿಯೇ ಬಿದ್ದು ಮೃತಪಟ್ಟರೆ, ಕ್ಯಾನ್ಸರ್‌ ಇದ್ದ ಗಂಗಮ್ಮ ಹನುಮಂತ(57) ಹಾಗೂ ಉಸಿರಾಟ ಸಮಸ್ಯೆ ಇದ್ದ ಅಂಗವಿಕಲ ಪ್ರದೀಪ ತಿಮ್ಮಣ್ಣ ಪೂಜಾರಿ (19) ಹಾಸಿಗೆಯಲ್ಲೇ ನಿಧನರಾಗಿದ್ದಾರೆ. ದುರ್ಗಮ್ಮ ಹನುಮಂತಪ್ಪ ಉಪ್ಪಾರ್ (69) ಮಗಳನ್ನು ಭೇಟಿಯಾಗಲು ಹೋದಾಗ ಸುಂಕಾಪುರದಲ್ಲಿ ಕೊನೆಯುಸಿರೆಳೆದಿದ್ದಾರೆ.

ರಾಯಚೂರು ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಮನೆಗೆ ಬರುತ್ತಿದ್ದ ಹನುಮಂತ (45) ಮೃತಪಟ್ಟಿದ್ದಾರೆ. ಬೆಳಿಗ್ಗೆ ಹೊಲದಿಂದ ಬರುವಾಗ ದಾರಿಯಲ್ಲೇ ಇದ್ದ ಮಂದಿರದಲ್ಲಿ ಕೈ ಮುಗಿದು ಮನೆಗೆ ಬಂದಿದ್ದಾರೆ. ಬಿಸಿಲಿನ ಧಗೆಯಿಂದ ಸುಸ್ತಾಗಿದ್ದ ಅವರು ನೀರು ಕುಡಿಯುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

‘ಸಿಂಧನೂರು ಹಾಗೂ ರಾಯಚೂರು ತಾಲ್ಲೂಕಿನಲ್ಲಿ ಮೃತಪಟ್ಟವರ ಸಾವಿಗೆ ಪ್ರಖರ ಬಿಸಿಲೊಂದೇ ಅಲ್ಲ, ಮೂವರು ಅನಾರೋಗ್ಯದಿಂದಲೂ ಬಳಲುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇಬ್ಬರು ನಿರ್ಜಲೀಕರಣದಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ವೈದ್ಯಕೀಯ ತಂಡ ಪರಿಶೀಲನೆ ನಡೆಸುತ್ತಿದೆ‘ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಶ ಬಾಬು ತಿಳಿಸಿದ್ದಾರೆ.

ರಾಯಚೂರು ತಾಲ್ಲೂಕಿನ ಶಕ್ತಿನಗರದ ವೈಟಿಪಿಎಸ್‌ ಮುಂಭಾಗ ರಾಯಚೂರು–ಹೈದರಾಬಾದ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಚಾಲಕ ರಸ್ತೆ ಬದಿಗೆ ಕಾರು ನಿಲ್ಲಿಸಿ ಹೊರಗೆ ಬಂದಿದ್ದಾರೆ. ಹಾರು ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

‘ಜಿಲ್ಲೆಯಲ್ಲಿ ಒಂದು ವಾರ ಪ್ರಖರ ಬಿಸಿಲು ಇದೆ. ಮೇ 4ರಂದು 45 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು. ಮೇ 8ರ ವರೆಗೂ ಬಿಸಿಲಿನ ತಾಪ ಹಾಗೂ ಬಿಸಿಗಾಳಿ ಮುಂದುವರಿಯಲಿದೆ. ರೈತರು ಹೊಲಗಳಿಗೆ ತೆರಳಬಾರದು. ಸಾರ್ವಜನಿಕರು ಮಧ್ಯಾಹ್ನ ಮನೆಯಲ್ಲೇ ಇರಬೇಕು. ಬಿಸಿಲಲ್ಲಿ ತಿರುಗಾಡಬಾರದು‘ ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹವಾಮಾನ ಘಟಕದ ಶಾಂತಪ್ಪ ದುತ್ತರಗಾಂವಿ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಅಧಿಕ ಬಿಸಿಲು ಹಾಗೂ ಬಿಸಿ ಗಾಳಿ ಬೀಸುತ್ತಿರುವ ಕಾರಣ ಸಾರ್ವಜನಿಕರು ಅನಗತ್ಯವಾಗಿ ಮನೆಗಳಿಂದ ಹೊರಗೆ ಬರಬಾರದು. ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳಬೇಕು. ಹಿರಿಯರು, ಮಕ್ಕಳು ಹಾಗೂ ಅನಾರೋಗ್ಯ ಪೀಡಿತರು ತೆಳುವಾದ ಬಟ್ಟೆ ಧರಿಸಬೇಕು. ಬಿಸಿಲಲ್ಲಿ ಹೋಗಿ ಬಂದಿದ್ದರೆ ತಕ್ಷಣ ಓಆರ್‌ಎಸ್‌ ಮಿಶ್ರಿತ ನೀರು ಕುಡಿಯುಬೇಕು‘ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ಸಲಹೆ ನೀಡಿದ್ದಾರೆ.

ಹನುಮಂತ
ಹನುಮಂತ
ವೀರೇಶ
ವೀರೇಶ
ಗಂಗಮ್ಮ
ಗಂಗಮ್ಮ
ಪ್ರದೀಪ ಪೂಜಾರಿ
ಪ್ರದೀಪ ಪೂಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT