ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | 5 ತಿಂಗಳಿಂದ ಗುತ್ತಿಗೆ ಕಾರ್ಮಿಕರಿಗಿಲ್ಲ ಸಂಬಳ

Published 20 ಡಿಸೆಂಬರ್ 2023, 6:11 IST
Last Updated 20 ಡಿಸೆಂಬರ್ 2023, 6:11 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ‘ಡಿ’ ಗ್ರೂಪ್ ಕಾರ್ಮಿಕರಿಗೆ ಕಳೆದ ಐದು ತಿಂಗಳಿಂದ ವೇತನ ಪಾವತಿಯಾಗಿಲ್ಲ.

ಅವಿಭಜಿತ ಮಾನ್ವಿ ತಾಲ್ಲೂಕು ವ್ಯಾಪ್ತಿಯ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅಂದಾಜು 30 ಕಾರ್ಮಿಕರು ವೇತನ ಇಲ್ಲದೆ ದಿಕ್ಕೆಟ್ಟಿದ್ದಾರೆ. ಮನೆ ನಿರ್ವಹಣೆ, ಮಕ್ಕಳ ಓದಿನ ಖರ್ಚು ಸೇರಿದಂತೆ ವಿವಿಧ ರೀತಿಯ ವೆಚ್ಚಗಳನ್ನು ಭರಿಸಲಾಗದೆ ಪರದಾಡುತ್ತಿದ್ದಾರೆ.

‘ಕವಿತಾಳ ಆಸ್ಪತ್ರೆಯಲ್ಲಿ ಗ್ರೂಪ್ ‘ಡಿ’ ಮತ್ತು ನಾನ್ ಕ್ಲಿನಿಕ್ ಕಾರ್ಮಿಕರಾಗಿ ಏಳು ಮಂದಿ ಕೆಲಸ ಮಾಡುತ್ತಿದ್ದೇವೆ. ನಮಗೆ ತಿಂಗಳಿಗೆ ₹11,500 ವೇತನವಿದೆ. ಅದನ್ನೂ ಐದು ತಿಂಗಳಿಂದ ಪಾವತಿಸಿಲ್ಲ. ಹೀಗಾದರೆ ನಾವು ಜೀವನ ನಡೆಸುವುದಾದರೂ ಹೇಗೆ? ಈಗ ಮೂರು ತಿಂಗಳಿಂದ ಕೆಲಸದಿಂದ ತೆಗೆದು ಹಾಕಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.

‘ಮನೆಯಲ್ಲಿ ವಯಸ್ಸಾದ ಅಪ್ಪ, ಅಮ್ಮ ಇದ್ದಾರೆ. ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಪತ್ನಿಗೆ ಆರೋಗ್ಯ ಸಮಸ್ಯೆ. ಹೀಗಾಗಿ ನನ್ನ ಮೇಲೆಯೇ ಹೆಚ್ಚಿನ ಜವಾಬ್ದಾರಿ ಇದೆ. ನಮಗಿರುವುದು ಇದೊಂದೇ ಸಂಬಳ. ಬೇರೆ ಆದಾಯದ ಮೂಲಗಳಿಲ್ಲ. ಬರುವ ಸಂಬಳದಲ್ಲೇ ಪ್ರತಿ ತಿಂಗಳು ಮನೆಗೆ ದಿನಸಿ, ಅಪ್ಪ-ಅಮ್ಮನ ಔಷಧ, ಮಕ್ಕಳ ಶಿಕ್ಷಣದ ಖರ್ಚು ನಿಭಾಯಿಸಬೇಕಿದೆ. ಗುತ್ತಿಗೆ ಏಜೆನ್ಸಿ ಬದಲಾವಣೆ ಹಿನ್ನೆಲೆಯಲ್ಲಿ ನಮ್ಮನ್ನು ಕೆಲಸದಿಂದ ತೆಗೆಯಲಾಗಿದೆ ಎನ್ನಲಾಗುತ್ತಿದೆ. ಹಿಂದೆ ಕೆಲಸ ಮಾಡಿದ ಐದು ತಿಂಗಳ ವೇತನವಾದರೂ ಪಾವತಿಸಿದರೆ ಅನುಕೂಲವಾಗುತ್ತದೆ’ ಎಂದು ಮತ್ತೊಬ್ಬ ಕಾರ್ಮಿಕ ಹೇಳುತ್ತಾರೆ.

‘ಪ್ರತಿನಿತ್ಯ 200ಕ್ಕೂ ಅಧಿಕ ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಯಲ್ಲಿ ಸ್ವಚ್ಛತೆ ಕೈಗೊಳ್ಳಲು ಮತ್ತು ರೋಗಿಗಳನ್ನು ನಿಭಾಯಿಸಲು ಸಮಸ್ಯೆಯಾಗುತ್ತಿದೆ’ ಎನ್ನುತ್ತಾರೆ ಸಮುದಾಯ ಆರೋಗ್ಯ ಕೇಂದ್ರ ವೈದ್ಯ ಪ್ರವೀಣಕುಮಾರ.

ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ದಾಖಲೆಗಳನ್ನು ಸಲ್ಲಿಸಲಾಗಿದೆ ಶೀಘ್ರದಲ್ಲಿಯೇ ವೇತನ ಪಾವತಿಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ವಿಶ್ವಾಸವಿದೆ
ಡಾ.ಶರಣಬಸವ, ತಾಲ್ಲೂಕು ಆರೋಗ್ಯಾಧಿಕಾರಿ, ಮಾನ್ವಿ
ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಪಾವತಿಸಲು ಅಧಿಕಾರಿಗಳು ಕಾಳಜಿ ವಹಿಸಬೇಕು. ಏಜೆನ್ಸಿ ಪರವಾನಗಿ ನವೀಕರಣ ವಿಚಾರದಲ್ಲಿ ಪದೇ ಪದೇ ಈ ರೀತಿ ಸಮಸ್ಯೆಯಾಗುತ್ತಿದೆ.
ಎಂ.ಡಿ.ಮೆಹಬೂಬ್, ಕಾರ್ಮಿಕ ಸಂಘಟನೆ ಮುಖಂಡ
ಕವಿತಾಳದ ಸಮುದಾಯ ಆರೋಗ್ಯ ಕೇಂದ್ರದ ಹೊರನೋಟ
ಕವಿತಾಳದ ಸಮುದಾಯ ಆರೋಗ್ಯ ಕೇಂದ್ರದ ಹೊರನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT