ಮಂಗಳವಾರ, ಜೂನ್ 28, 2022
21 °C

‘ಜಾನಪದ ಕನ್ನಡ ಸಾಹಿತ್ಯದ ಮೂಲ ಬೇರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವದುರ್ಗ: ಕನ್ನಡ ಸಾಹಿತ್ಯ ಅಭಿವೃದ್ಧಿ ಪಡಿಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದು ಅಕ್ಷರ ದಾಸೋಹ ಯೋಜನೆ ನಿರ್ದೇಶಕ ಬಂದವಲಿ ಹೇಳಿದರು.

ಪಟ್ಟಣದ ಸರಕಾರಿ ಬಾಲಕಿಯರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಮರಿಲಿಂಗಪ್ಪ ಕೋಳೂರ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಭಾಷಾ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

‘ಉತ್ತಮ ಸಾಹಿತ್ಯವಿರುವ ಪಠ್ಯಪುಸ್ತಕದಲ್ಲಿಯೂ ರಾಜಕೀಯ ಮಾಡುತ್ತಿರುವುದು ನೋಡಿದರೆ ಮುಂದೊಂದು ದಿನ ಸಾಹಿತ್ಯಕ್ಕೆ ಬಹುದೊಡ್ಡ ಆಪತ್ತು ಎದುರಾಗಬಹುದು’ ಎಂದು ಕಳವಳ ವ್ಯಕ್ತಪಡಿಸಿದರು.

ಜಾನಪದ ಸಾಹಿತ್ಯ ಕುರಿತು ಮಾತನಾಡಿದ ರೇವಣಸಿದ್ದಪ್ಪ ಪೂಜಾರಿ ಅವರು, ಜನರ ಬಾಯಿಂದ ಬಂದ ಪದಗಳೆ ಜಾನಪದ. ಬಳಪ ಹಿಡಿದು ಬರೆದಿಲ್ಲ, ಗುರು ಕಲಿಸಿಲ್ಲ, ಅಂತಹ ಸಾಹಿತ್ಯ ಗ್ರಾಮೀಣ ಸೊಗಡು ಹೊಂದಿರುವ ಜಾನಪದ ಕನ್ನಡ ಸಾಹಿತ್ಯದ ಮೂಲ ಬೇರು ಆಗಿದೆ ಎಂದರು. 

‘ಜಾನಪದ ಸಾಹಿತಿಗಳು ಅಕ್ಷರವಂತರಲ್ಲ ಆದರೂ ವಿದ್ಯಾವಂತರು. ಗರ್ಭದಿಂದ ಗೋರಿ ಅವರಿಗೆ ನಡೆಯುವುದೇ ಜಾನಪದ. ಉತ್ತರ ಕರ್ನಾಟಕದ ಭಜನೆ ಪದ, ತತ್ವ ಪದ, ಅಲಾಯಿ ಹಾಡು, ತತ್ವ ಲಾವಣಿ, ಸೋಬಾನ ಹೀಗೆ ಹತ್ತು ಹಲವಾರು ಗ್ರಾಮೀಣ ಸೊಗಡು ಪದಗಳು ಸೌಹಾರ್ದತೆಯ ಸಂದೇಶವನ್ನು ಸಾರುತ್ತ ಕೋಮುಗಲಭೆಗಳ ಆಗದಂತೆ ತಡೆಯುತ್ತಿವೆ. ಉತ್ತರ ಕರ್ನಾಟಕದ ಹಿಂದೂ-ಮುಸ್ಲಿಮರ ಸೌಹಾರ್ಧದಿಂದ ನಡೆಸುವ ಮೊಹರಂ ಹಬ್ಬ ಕೂಡ ಒಂದು ಬಹುದೊಡ್ಡ ಸಾಕ್ಷಿ ಎಂದರು.

ಶರಣ ಸಾಹಿತ್ಯ ಮತ್ತು ಹೈದರಾಬಾದ್ ಕರ್ನಾಟಕ ವಿಮೋಚನೆ ಕುರಿತು ಮಾತನಾಡಿದ ಡಾ.ಸುವರ್ಣ ಮಾಶ್ಯಾಳ  ಅವರು, ಶರಣ ಸಾಹಿತ್ಯವು ಸಮಸಮಾಜದ ಕುರಿತು ಸಾಕಷ್ಟು ವಚನಗಳು ರಚಿಸುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಸಂವಿಧಾನದಲ್ಲಿನ ಬಹುತೇಕ ಅಂಶಗಳಾದ ಸಮಾನತೆ ಅಸ್ಪೃಶ್ಯತೆ ನಿವಾರಣೆ, ಬಡವ ಬಲ್ಲಿದ ಹೀಗೆ ಹತ್ತು ಹಲವಾರು ಅಂಶಗಳನ್ನು ವಚನಸಾಹಿತ್ಯದಲ್ಲಿ ನಾವು ಕಾಣುತ್ತೇವೆ ಎಂದರು. 

ಅಭಿವೃದ್ಧಿಯಲ್ಲಿ ಹೈದರಾಬಾದ್-ಕರ್ನಾಟಕ ಹಿಂದುಳಿದಿರಬಹುದು. ಆದರೆ, 12ನೇ ಶತಮಾನದಲ್ಲಿ ವಿಶ್ವಕ್ಕೆ ಪ್ರಜಾಪ್ರಭುತ್ವದ ಸಂದೇಶವನ್ನು ನೀಡಿರುವುದು ಕಲ್ಯಾಣ ಕರ್ನಾಟಕದಲ್ಲಿನ ಶರಣರ ಅನುಭವ ಮಂಟಪ ವಿಶ್ವಕ್ಕೆ ಮಾದರಿ ಎಂದು ಹೇಳಿದರು.

ಶಿಕ್ಷಣ ಸಂಯೋಜಕ ನರಸಪ್ಪ ಪಾಟೀಲ್, ದತ್ತಿ ದಾನಿಗಳಾದ ಗಂಗಮ್ಮ ನಿವೃತ್ತ ಶಿಕ್ಷಕಿ, ರೂಪ ನನಿರಂಜ ಬಳೆ, ಭೋಜರಾಜ ಮಿಣಜಗಿ, ಗೌರವ ಕಾರ್ಯದರ್ಶಿಗಳಾದ ರಂಗಣ್ಣ ಪಾಟೀಲ್ ಕಮತಗಿ, ಬಸವರಾಜ ಮಡಿವಾಳ, ಸಹ ಶಿಕ್ಷಕ ದೇವರಾಜ ಸೇರಿದಂತೆ ಶಾಲೆಯ ಮಕ್ಕಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು