ಸೋಮವಾರ, ಡಿಸೆಂಬರ್ 5, 2022
22 °C

ಗಾಂಧೀಜಿಯವರ ತತ್ವಾದರ್ಶ ಪಾಲನೆ ಅಗತ್ಯ: ಬಿ.ವಿ.ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಗಾಂಧೀಜಿಯವರ ತ್ಯಾಗ, ಬಲಿದಾನ, ಅಹಿಂಸಾ ನೀತಿಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಗಾಂಧಿಜಿಯವರ ತತ್ವ ಆದರ್ಶಗಳು ನಮಗೆ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ  ತಿಳಿಸಿದರು.  

ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಾಂಧೀಜಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅವಿನಾಭಾವ ಸಂಬಂಧ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಘಟನೆ ಸದೃಢ ವಾಗಿ ಬೆಳೆದಿದೆ. ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುನ್ನೆಡೆಯಬೇಕು ಎಂದು ಹೇಳಿದರು.

ಲಾಲ್ ಬಹಾದ್ದೂರ ಶಾಸ್ತ್ರಿಯವರು ಪ್ರಧಾನಿಯಾಗಿ  ದೇಶಕ್ಕೆ ತನ್ನದೇ ಆದ ಕೊಡುಗೆಯಾಗಿ ನೀಡಿದ್ದಾರೆ. ಅವರು ಅತ್ಯಂತ ಸರಳವಾಗಿ ಜೀವನ ನಡೆಸಿ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ್ಯಕ್ಕಾಗಿ 9 ವರ್ಷ ಕಾರಾಗೃಹವಾಸ ಅನುಭವಿಸಿದರು. ದೇಶವನ್ನು ರಕ್ಷಿಸಿದ ಸೈನಿಕರು ಹಾಗೂ ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ ಮಾತನಾಡಿ, ಮಹತ್ಮಾಗಾಂಧಿ ಅವರು ಜಗತ್ತಿಗೆ ಅಹಿಂಸೆಯೆಂಬ ಶಸ್ತ್ರವನ್ನು ನೀಡಿದ ಶಾಂತಿಧೂತರು. ವಿಶ್ವದ ಅನೇಕ ನಾಯಕರುಗಳು ಗಾಂಧೀಜಿಯವರಿಂದ ಪ್ರೇರಣೆಗೊಂಡು ಅವರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು ಎಂದರು.

ಬಿಜೆಪಿ ಸರ್ಕಾರ ದೇಶದ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದ್ದು ನಾವು ಜಾಗೃತರಾಗಬೇಕು. ಗಾಂಧೀಜಿಯವರು ಅಧಿಕಾರಕ್ಕಾಗಿ ಆಸೆ ಪಟ್ಟಿದ್ದರೆ ಈ ದೇಶದ ಮೊದಲ ಪ್ರಧಾನಿಯಾಗಿರುತ್ತಿದ್ದರು. ಅವರಿಗೆ ಸ್ವಾರ್ಥ,  ಅಧಿಕಾರದ ಗುಂಗು  ಮನಸ್ಸಿನಲ್ಲಿರಲಿಲ್ಲ ಎಂದು ತಿಳಿಸಿದರು.

ಮಾಜಿ ಶಾಸಕ ಸೈಯದ್ ಯಾಸೀನ್, ಮುಖಂಡ ಕೆ. ಶಾಂತಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಜಿ.ಬಸವರಾಜರೆಡ್ಡಿ, ತಾಯಣ್ಣ ನಾಯಕ, ಅಬ್ದುಲ್ ಕರೀಂ, ಜಿ.ಶಿವಮೂರ್ತಿ, ಜಿಂದಪ್ಪ, ಆಂಜನೇಯ ಕುರುಬದೊಡ್ಡಿ, ದರೂರು ಬಸವರಾಜ, ಅಸ್ಲಂ ಪಾಷಾ, ಭೀಮನಗೌಡ ನಾಗಡದಿನ್ನಿ, ರಾಮಕೃಷ್ಣ ನಾಯಕ, ಸಿದ್ಧಪ್ಪ ಭಂಡಾರಿ, ಕೆ.ನರಸಿಂಹ ನಾಯಕ, ನಿರ್ಮಲಾ ಬೆಣ್ಣಿ, ವಂದನಾ, ಶಶಿಕಲಾ ಭೀಮರಾಯ, ರಜಿಯಾ ಪಟೇಲ್, ಪ್ರತಿಭಾರೆಡ್ಡಿ, ಸುಧೀಂದ್ರ, ಮಹ್ಮದ್ ಶಾಲಂ, ಇಲ್ಲೂರು ಗೋಪಾಲಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.