ರಾಯಚೂರು: ಗಣೇಶ ಚೌತಿಗೆ ಇನ್ನು ಐದು ದಿನಗಳು ಮಾತ್ರ ಬಾಕಿ ಇವೆ. ಆಗಲೇ ಮನೆ ಮನಗಳಲ್ಲಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಮಂಟಪಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಏಕದಂತನ ಭಕ್ತರು ಈ ಬಾರಿ ಹಬ್ಬವನ್ನು ಇನ್ನೂ ಆಕರ್ಷಕ ಹಾಗೂ ವಿಶೇಷ ಮಾಡಬೇಕು ಎನ್ನುವ ತಯಾರಿಯಲ್ಲಿ ತೊಡಗಿದ್ದಾರೆ. ಈ ನಡುವೆ ಹೈದರಾಬಾದ್, ಕೋಲ್ಕತ್ತ, ಸೋಲಾಪುರ ಗಣಪತಿ ಮೂರ್ತಿಗಳು ರಾಯಚೂರು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಹೊರ ರಾಜ್ಯಗಳಿಂದ ಬಂದಿರುವ ಏಕದಂತನ ಮೂರ್ತಿಗಳು ಒಂದಕ್ಕಿಂತ ಇನ್ನೊಂದು ಅಂದವಾಗಿರುವ ಕಾರಣ ಗ್ರಾಹಕರು ಯಾವ ಮೂರ್ತಿಗಳನ್ನು ಖರೀದಿಸಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಕಡಿಮೆ ಬಜೆಟ್ ಇರುವ ಮಂಡಳಿಗಳವರು ಇರುವುದರಲ್ಲೇ ಅತ್ಯುತ್ತಮ ಮೂರ್ತಿಗಳನ್ನು ಆಯ್ಕೆ ಮಾಡಿ ವ್ಯಾಪಾರಸ್ಥರಿಗೆ ಮುಂಗಡ ಹಣ ಕೊಟ್ಟು ಹೋಗುತ್ತಿದ್ದಾರೆ.
ರೈಲು ನಿಲ್ದಾಣ ರಸ್ತೆ, ಗೋಲ್ ಮಾರ್ಕೆಟ್, ಚಂದ್ರಮೌಳಿ ವೃತ್ತ, ಮಕ್ಕಲ್‌ಪೇಟೆ, ಬಸವೇಶ್ವರ ವೃತ್ತ, ವೈಟಿಪಿಎಸ್ ರಸ್ತೆ ಬದಿಯ ಗೋದಾಮು ಹಾಗೂ ಮಳಿಗೆಗಳಲ್ಲಿ ಲಂಬೋದರನ ಆಕರ್ಷಕ ಮೂರ್ತಿಗಳನ್ನು ಪ್ರದರ್ಶನಕ್ಕೆ ಇಟ್ಟು ಮಾರಾಟ ಮಾಡಲಾಗುತ್ತಿದೆ. ಹಿರಿಯರು, ಯುವಕರು ಹಾಗೂ ಮಕ್ಕಳು ಗುಂಪಿನಲ್ಲಿ ತೆರಳಿ ತಾವು ಮನೆಗಳಲ್ಲಿ ಪ್ರತಿಷ್ಠಾಪಿಸಲಿರುವ ಗಣಪತಿಗಳನ್ನು ಆಯ್ಕೆ ಮಾಡುತ್ತಿದ್ದಾರೆ.
‘ಹೈದರಾಬಾದ್‌ನಿಂದ ಗಣಪತಿ ಮೂರ್ತಿಗಳನ್ನು ರಾಯಚೂರಿಗೆ ತಂದು ಮಾರಾಟ ಮಾಡುತ್ತಿದ್ದೇವೆ. ನಮ್ಮ ಬಳಿ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಮನೆ ಗಣಪನ ಮೂರ್ತಿಗಳು ಲಭ್ಯ ಇವೆ. ಕೆಲವು ದೊಡ್ಡ ಹಾಗೂ ಚಿಕ್ಕ ಗಣಪತಿಗಳನ್ನು ಗ್ರಾಹಕರು ಈಗಾಗಲೇ ಬುಕ್ ಮಾಡಿ ಹೋಗಿದ್ದಾರೆ. ಎರಡು ದಿನಗಳಲ್ಲಿ ಎಲ್ಲ ಗಣಪತಿಗಳು ಮಾರಾಟವಾಗಲಿವೆ’ ಎಂದು ಸ್ಟೇಷನ್ ರೋಡ್ ಕಟ್ಟಡದಲ್ಲಿ ಗಣಪತಿ ಮಾರಾಟಕ್ಕಿಟ್ಟಿರುವ ವ್ಯಾಪಾರಸ್ಥ ವಿಶ್ವಾಸ ವ್ಯಕ್ತಪಡಿಸಿದರು.
‘ರಾಯಚೂರು ಹಾಗೂ ಹೈದರಾಬಾದ್‌ನಲ್ಲಿ ಸಿದ್ಧಪಡಿಸಲಾಗುವ ಗಣೇಶ ಮೂರ್ತಿಗಳಿಗಿಂತಲೂ ಮಹಾರಾಷ್ಟ್ರದ ಸೋಲಾಪುರದಲ್ಲಿ ಸಿದ್ಧಪಡಿಸಿದ ಗಣೇಶನ ಮೂರ್ತಿಗಳು ಹೆಚ್ಚು ಆಕರ್ಷಕ ಹಾಗೂ ಕಲಾತ್ಮಕವಾಗಿವೆ. ಭಕ್ತರು ಮೂರ್ತಿಗಳನ್ನು ವೀಕ್ಷಿಸುತ್ತಲೇ ಬುಕ್ ಮಾಡಿ ಹೋಗುತ್ತಿದ್ದಾರೆ ಎಂದು ವ್ಯಾಪಾರಿ ಚರಣಕುಮಾರ ತಿಳಿಸಿದರು.
‘ಸೋಲಾಪುರದ ಕಲಾವಿದರು ಮೂರ್ತಿಗಳಲ್ಲಿ ಕಲೆಯ ಮೂಲಕ ಜೀವ ತುಂಬಿದ್ದಾರೆ. ಮಧ್ಯಮ ಗಾತ್ರದ ಗಣಪತಿ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಅವುಗಳನ್ನೇ ಖರೀದಿಸಿ ತಂದಿದ್ದೇವೆ. ಸೋಲಾಪುರದಿಂದ ತಂದಿರುವ ಕಾರಣ ಸಾಗಣೆ ವೆಚ್ಚ ಸೇರಿಸಿ ಮಾರಾಟ ಮಾಡುತ್ತಿರುವ ಕಾರಣ ಮೂರ್ತಿಗಳ ಬೆಲೆ ಸ್ವಲ್ಪ ಹೆಚ್ಚಾಗಿದೆ’ ಎಂದು ಹೇಳಿದರು.
‘ಸೋಲಾಪುರದ ಗಣಪತಿಗಳಿಗೆ ರಾಯಚೂರಲ್ಲಿ ಹೆಚ್ಚಿನ ಬೇಡಿಕೆ ಇದೆ. 1.5 ಅಡಿಯಿಂದ ಐದು ಅಡಿ ಎತ್ತರದ ಗಣಪತಿಗಳಿಗೆ ₹ 1,500ರಿಂದ ₹ 12 ಸಾವಿರದವರೆಗೆ ಬೆಲೆ ನಿಗದಿಪಡಿಸಲಾಗಿದೆ. ಸೋಲಾಪುರದಿಂದ 250 ಚಿಕ್ಕ ಗಣಪತಿ ಮೂರ್ತಿಗಳನ್ನು ಮಾರಾಟಕ್ಕೆ ತಂದಿದ್ದೇವೆ’ ಎಂದರು.
ಬಂಗಾಲಿ ಕಲೆಯ ಮಣ್ಣಿನ ಗಣಪತಿ ಮೂರ್ತಿಗಳು
‘ಬಹುತೇಕ ಎಲ್ಲೆಡೆ ಪಿಒಪಿ ಗಣಪತಿಗಳೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನಾನು ಕೋಲ್ಕತ್ತದಿಂದ ಗಣಪತಿಯ ಮಣ್ಣಿನ ಮೂರ್ತಿಗಳನ್ನು ತರಿಸಿದ್ದೇನೆ. ಇವು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಮೂರ್ತಿಗಳನ್ನು ಸಿದ್ಧಪಡಿಸಿದ ನಂತರ ಅವುಗಳನ್ನು ಯಂತ್ರದಲ್ಲಿ ಬಿಸಿ ಮಾಡಲಾಗಿದೆ. ಹೀಗಾಗಿ ಅವುಗಳಲ್ಲಿ ಬಿರುಕು ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಸಂಪ್ರದಾಯಸ್ಥರು ಮಣ್ಣಿನ ಮೂರ್ತಿಗಳನ್ನು ಹೆಚ್ಚು ಇಷ್ಟುಪಡುತ್ತಾರೆ’ ಎಂದು ಕೋಲ್ಕತ್ತದ ಮಣ್ಣಿನ ಮೂರ್ತಿಗಳ ಮಾರಾಟಗಾರ ಹಂಸರಾಜ ಜೈನ್ ತಿಳಿಸಿದರು. ‘ನಾಲ್ಕು ವರ್ಷಗಳಿಂದ ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡುತ್ತಿರುವೆ. ಕಳೆದ ವರ್ಷವೂ 150 ಮಣ್ಣಿನ ಮೂರ್ತಿಗಳನ್ನು ಕೋಲ್ಕತ್ತದಿಂದ ಖರೀದಿಸಿ ತಂದಿದ್ದೆ. ಎಲ್ಲ ಮೂರ್ತಿಗಳು ಮಾರಾಟವಾಗಿದ್ದವು. ಈ ವರ್ಷವೂ ಮಾರಾಟವಾಗುವ ವಿಶ್ವಾಸವಿದೆ. ಸ್ಥಳೀಯ ಮೂರ್ತಿಕಾರರು ಸಿದ್ಧಪಡಿಸಿದ ಮೂರ್ತಿಗಳಿಗಿಂತ ಭಿನ್ನವಾಗಿದೆ. ಇವು ಬಂಗಾಲಿ ಕಲೆಯಲ್ಲಿ ಅರಳಿವೆ’ ಎಂದು ಹೇಳಿದರು. ‘ಕನಿಷ್ಠ ₹ 700ರಿಂದ ₹ 10 ಸಾವಿರ ಮೌಲ್ಯದ ಮೂರ್ತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಗ್ರಾಹಕರು ತಮಗೆ ಇಷ್ಟ ಬಂದ ಗಣಪತಿಗಳನ್ನು ಗುರುತಿಸಿ ಮುಂಗಡ ಹಣ ಪಾವತಿಸುತ್ತಿದ್ದಾರೆ’ ಎಂದರು.
ಮಹಾರಾಷ್ಟ್ರದ ಆಕರ್ಷಕ ಗಣಪತಿ
‘ಹೊಸ ಬಗೆಯ ಮೂರ್ತಿ ವಿನ್ಯಾಸ ಪರಿಕಲ್ಪನೆಗೆ ಮಹಾರಾಷ್ಟ್ರದ ಸೋಲಾಪುರದ ಮೂರ್ತಿಕಾರರು ಖ್ಯಾತಿ ಪಡೆದಿದ್ದಾರೆ. ಅವರು ನಿಯಮಿತವಾಗಿ ವಿಶಿಷ್ಟವಾದ ಮೂರ್ತಿಗಳನ್ನೇ ರೂಪಿಸುತ್ತಾರೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಬಾಲರಾಮನ ಮೂರ್ತಿ ಹೋಲುವ ಗಣೇಶ ಈ ಬಾರಿಯ ಆಕರ್ಷಣೆಯಾಗಿದೆ’ ಎಂದು ನಗರದ ಮಕ್ಕಲ್‌ಪೇಟೆಯಲ್ಲಿ ಮಳಿಗೆ ಆರಂಭಿಸಿರುವ ಅಯ್ಯಪ್ಪ ಗಣೇಶ ಮೂರ್ತಿಗಳ ಮಾರಾಟಗಾರ ನರಸಪ್ಪ ಹೇಳಿದರು. ‘ಸೋಲಾಪುರದಿಂದ 70 ದೊಡ್ಡ ಗಣಪತಿಗಳು 50 ಮಧ್ಯಮ ಗಾತ್ರದ ಗಣಪತಿಗಳು ಸೇರಿ ಒಟ್ಟು 1500 ಗಣಪತಿಗಳನ್ನು ರಾಯಚೂರಿಗೆ ತರಿಸಿಕೊಂಡಿದ್ದೇವೆ. ಅಂದದ ಲಂಬೋದರನ ಮೂರ್ತಿಗಳಿಗೆ ಮಾರು ಹೋಗಿರುವ ಗ್ರಾಹಕರು ಈಗಾಗಲೇ ಶೇ 70ರಷ್ಟು ಮೂರ್ತಿಗಳಿಗೆ ಮುಂಗಡ ಹಣ ನೀಡಿ ಬುಕ್ ಮಾಡಿದ್ದಾರೆ’ ಎಂದು ಖುಷಿಯಿಂದ ವಿವರಿಸಿದರು.
ಬೃಹತ್ ಮೂರ್ತಿಗಳಿಗೆ
ಅಂತಿಮ ಸ್ಪರ್ಶ ರಾಯಚೂರಿನ ಶಕ್ತಿನಗರ ನಗರ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ‘ಪುನಾ ಗಣೇಶ ಮೂರ್ತಿ ತಯಾರಕರು’ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಪ್ರತಿಷ್ಠಾಪಿಸುವ ಬೃಹತ್ ಗಣಪತಿಗಳನ್ನು ನಿರ್ಮಿಸಿದ್ದಾರೆ. ಕನಿಷ್ಠ 5 ಅಡಿಯಿಂದ ಗರಿಷ್ಠ 15 ಅಡಿ ವರೆಗಿನ ಗಣಪತಿಗಳು ಇಲ್ಲಿ ಮಾರಾಟಕ್ಕೆ ಲಭ್ಯ ಇವೆ. 15 ಅಡಿಯ ವಿಘ್ನೇಶ್ವರನ ಮೂರ್ತಿ ಈಗಾಗಲೇ ₹ 1.20 ಲಕ್ಷಕ್ಕೆ ಬುಕ್ ಆಗಿದೆ. ಗಣೇಶ ಉತ್ಸವ ಮಂಡಳಿಗಳ ಪದಾಧಿಕಾರಿಗಳು ತಂಡೋಪ ತಂಡವಾಗಿ ಇಲ್ಲಿಗೆ ಬಂದು ಬುಕ್ ಮಾಡುತ್ತಿದ್ದಾರೆ. ಹಬ್ಬ ಎರಡು ತಿಂಗಳು ಬಾಕಿ ಇರುವಾಗಲೇ ನಮ್ಮ ಮೂರ್ತಿ ತಯಾರಿಕೆಯ ಕೆಲಸ ಆರಂಭವಾಗುತ್ತದೆ. 2009ರಲ್ಲಿ 18 ಅಡಿ ಎತ್ತರದ ದೊಡ್ಡ ಗಣಪತಿ ಮಾಡಿದ್ದು ನಮ್ಮ ದಾಖಲೆಯಾಗಿದೆ. ಜಿಲ್ಲಾಡಳಿತ ಕಡಿಮೆ ಎತ್ತರದ ಗಣಪತಿ ನಿರ್ಮಿಸಬೇಕು ಎಂದು ಸೂಚಿಸಿದ್ದರಿಂದ ಈಗ 15 ಅಡಿಗಿಂತ ಕಡಿಮೆ ಎತ್ತರದ ಪ್ರತಿಮೆಗಳನ್ನು ತಯಾರಿಸುತ್ತಿದ್ದೇವೆ’ ಎಂದು ಮೂರ್ತಿಕಾರ ಪುನಿತ್ ಶರ್ಮಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.