ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಗಣೇಶೋತ್ಸವದ ಸಂಭ್ರಮ

ವಿಘ್ನವಿನಾಶಕನ ತರಹೇವಾರಿ ಮೂರ್ತಿಗಳ ಪ್ರತಿಷ್ಠಾಪನೆ
Last Updated 1 ಸೆಪ್ಟೆಂಬರ್ 2022, 16:54 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಗಣೇಶೋತ್ಸವವನ್ನು ಜನರು ಸಂಭ್ರಮ, ಸಡಗರದಿಂದ ಆಚರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಮರೆಯಾಗಿದ್ದ ಗಜಾನನ ಸಮಿತಿಗಳು ಮತ್ತು ಗೆಳೆಯರ ಬಳಗದ ಉತ್ಸಾಹ ಮರಳಿದೆ.

ಚೌತಿ ದಿನದಂದು ಬುಧವಾರ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿಸಲಾಗಿದೆ. ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲು ಕುಟುಂಬದ ಸದಸ್ಯರೊಂದಿಗೆ ಮಾರುಕಟ್ಟೆಗೆ ಬಂದು ಗಣಪತಿ ವಿಗ್ರಹಗಳನ್ನು ತೆಗೆದುಕೊಂಡು ಹೋಗುವುದು ವಿಶೇಷವಾಗಿ ಗಮನ ಸೆಳೆಯಿತು. ರಾಯಚೂರು ನಗರದ ಭಂಗಿಕುಂಟಾ ರಸ್ತೆ, ಸರಾಫ್‌ ಬಜಾರ್‌, ಬಟ್ಟೆ ಬಜಾರ್‌, ಚಂದ್ರಮೌಳೇಶ್ವರ ವೃತ್ತ, ಮಹಾವೀರ ವೃತ್ತ, ಭಾಂಡೆ ಬಜಾರ್‌ ಉದ್ದಕ್ಕೂ ಗಣೇಶ ಮೂರ್ತಿಗಳ ಮಾರಾಟ, ಖರೀದಿ ಜೋರಾಗಿತ್ತು.

ನಿಸರ್ಗಸ್ನೇಹಿ ಮಣ್ಣಿನ ಗಣಪತಿಮೂರ್ತಿಗಳು, ಪಿಒಪಿ ಮೂರ್ತಿಗಳು ಮಾರಾಟಕ್ಕೆ ಲಭ್ಯವಿದ್ದವು. ಜನರು ತಮಗೆ ಇಷ್ಟವಾದ ಮೂರ್ತಿಯನ್ನು ಖರೀದಿಸಿ ಮನೆಗಳಿಗೆ ತೆಗೆದುಕೊಂಡು ಹೋಗುವುದು ವಿಶೇಷವಾಗಿತ್ತು. ಜೊತೆಯಲ್ಲಿ ಬಾಳೆಗಿಡ, ಫಲಪುಷ್ಪ ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಭರಾಟೆಯೂ ನಡೆದಿತ್ತು. ಗಣೇಶನಿಗೆ ವಿಶೇಷ ಅಲಂಕಾರ ಮಾಡುವುದು ಸಾಮಾನ್ಯ. ಹೀಗಾಗಿ ಅಲಂಕಾರದ ವಸ್ತುಗಳಿಗೂ ಬೇಡಿಕೆ ಹೆಚ್ಚಾಗಿತ್ತು. ಕೇಸರಿ ವರ್ಣದ ರಿಬ್ಬನ್‌, ಶಾಲು ಧರಿಸಿದ್ದ ಜನರು ಮಾರುಕಟ್ಟೆಯುದ್ದಕ್ಕೂ ’ಗಣಪತಿ ಬಪ್ಪಾ; ಮೊರಯಾ‘ ಗಟ್ಟಿಯಾದ ಧ್ವನಿ ಮೊಳಗಿಸಿದ್ದರು.

ರಾಯಚೂರು ನಗರದ ಪ್ರಮುಖ ರಸ್ತೆಗಳು, ಬಡಾವಣೆ ರಸ್ತೆಗಳಲ್ಲಿ ಬೃಹದಾಕಾರದ ಗಣೇಶ ವಿಗ್ರಹಗಳನ್ನು ಬುಧವಾರವೇ ಪ್ರತಿಷ್ಠಾಪಿಸಲಾಗಿದೆ. ಧ್ವನಿವರ್ಧಕಗಳ ಸದ್ದು ಹಾಗೂ ವಾದ್ಯಮೇಳ ಸಮೇತ ವಿಶೇಷ ಮೆರವಣಿಗೆಗಳಲ್ಲಿ ಗಣೇಶ ವಿಗ್ರಹಗಳನ್ನು ತೆರೆದ ವಾಹನದಲ್ಲಿ ತೆಗೆದುಕೊಂಡು ಹೋಗುವುದು ಚಿತ್ತಾಕರ್ಷಕವಾಗಿತ್ತು.

ತೀನ್‌ ಕಂದಿಲ್‌ನಲ್ಲಿ ಶ್ರೀ ಕಲ್ಲಾನೆ ಗಜಾನನ ಸಮಿತಿಯವರು ಈ ವರ್ಷ ಶೇಷರೂಢನಾಗಿರುವ ಬೃಹತ್‌ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದು, ವೇದಮಂತ್ರೋಚ್ಛಾರ, ವಿಶೇಷ ಪೂಜೆಗಳನ್ನು ಆಯೋಜಿಸಿದ್ದರು. ವ್ಯಾಪಾರಿಗಳು, ರಾಜಕೀಯ ಮುಖಂಡರು, ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು. ಒಂಭತ್ತನೆ ದಿನದಂದು ಸೆಪ್ಟೆಂಬರ್‌ 8 ರಂದು ಗಣೇಶ ವಿಸರ್ಜನೆ ನೆರವೇರಿಸಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.

ನಗರದ ಗಣೇಶ ಕಟ್ಟೆಯಲ್ಲಿ ಶ್ರೀರಾಮ ಗಜಾನನ ಮಿತ್ರಮಂಡಳಿ, ಮಡಿವಾಳ ನಗರದಲ್ಲಿ ಶ್ರೀ ಗಜಾನನ ನವಯುವಕ ಯುವಕ ಸಂಘ, ಪೆಟ್ಲಾಬುರ್ಜ್‌ ಗಜಾನನ ಮಿತ್ರ ಮಂಡಳಿ, ಶ್ರೀರಾಮನಗರದಲ್ಲಿ ಕೋದಂಡರಾಮ ದೇವಸ್ಥಾನ ಆವರಣದಲ್ಲಿ ಮಯೂರ ಅಲಂಕಾರದಲ್ಲಿ.. ಹೀಗೆ ಅನೇಕ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ಸಂಜೆಯಿಂದ ರಾತ್ರಿ 10 ಗಂಟೆವರೆಗೂ ಗಣೇಶ ವಿಗ್ರಹಗಳನ್ನು ಕಣ್ತುಂಬಿಕೊಂಡು ನಮಿಸುವುದಕ್ಕೆ ಜನರು ಕುಟುಂಬ ಸಮೇತ ಭೇಟಿ ನೀಡುವುದು ಗಮನ ಸೆಳೆಯುತ್ತಿದೆ.

ಕೋವಿಡ್‌ ಮಹಾಮಾರಿಯಿಂದ ಕಳೆಗುಂದಿದ್ದ ಹಬ್ಬವು, ಈ ಸಲ ಎಲ್ಲೆಡೆಯಲ್ಲೂ ಗಣೇಶೋತ್ಸವ ಆಚರಣೆಯ ಸಂಭ್ರಮ ಎದ್ದು ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT