ಸಿಂಧನೂರು: ಪಂಚಮಸಾಲಿ ಸಮಾಜಕ್ಕೆ ‘2ಎ’ ಮೀಸಲಾತಿ ಅತ್ಯಂತ ಅಗತ್ಯವಾಗಿರುವುದರಿಂದ ಪಕ್ಷಾತೀತವಾಗಿ ಹೋರಾಟಕ್ಕೆ ಸಿದ್ಧರಾಗುವಂತೆ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಅಶೋಕಭವನದ ಬಳಿ ಕಿತ್ತೂರುರಾಣಿ ಚನ್ನಮ್ಮ ಕಂಚಿನ ಪುತ್ಥಳಿ ಅನಾವರಣ ಹಾಗೂ ಚನ್ನಮ್ಮ ವೃತ್ತದ ಉದ್ಘಾಟನೆಯ ನಂತರ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿಂದಿನ ಸರ್ಕಾರದಲ್ಲಿ ಶಾಸಕರೇ ‘2ಎ’ ಮೀಸಲಾತಿ ಹೋರಾಟಕ್ಕೆ ನಮ್ಮನ್ನು ಕರೆಯಲು ಬರುತ್ತಿದ್ದರು. ಪ್ರಸ್ತುತ ಸರ್ಕಾರದಲ್ಲಿ ನಾನೇ ಹೋಗಿ ಶಾಸಕರನ್ನು ಕರೆಯಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಪಂಚಮಸಾಲಿ ಸಮಾಜದ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಜನಪ್ರತಿನಿಧಿಗಳು ಮತ್ತು ಮುಖಂಡರು ವೈಯಕ್ತಿಕ ಸ್ವಾರ್ಥ ಬದಿಗಿಟ್ಟು ರಾಜೀರಹಿತ ಚಳವಳಿಗೆ ಮುಂದಾಗಬೇಕಾದ ಅನಿವಾರ್ಯತೆಯಿದೆ’ ಎಂದು ಹೇಳಿದರು.
‘ಲಿಂಗಾಯತ ಸಮಾಜದ ಉಪಪಂಗಡಗಳು ಪ್ರತ್ಯೇಕವಾಗಿ ತಮ್ಮ ಸಮುದಾಯಗಳ ದಾರ್ಶನಿಕರನ್ನು ಗುರುತಿಸಿ ಸರ್ಕಾರದಿಂದ ಜಯಂತಿ ಆಚರಣೆ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾದ ನಂತರ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟದ ರಾಣಿ ಚನ್ನಮ್ಮ ಜಯಂತಿಯನ್ನು ಸಮಾಜದ ಒತ್ತಡದಿಂದ ಜಾರಿಗೆ ತರಲಾಗಿದೆ’ ಎಂದರು.
‘ರಾಣಾ ಪ್ರತಾಪಸಿಂಹ, ಛತ್ರಪತಿ ಶಿವಾಜಿ ಅವರ ಜಯಂತಿಯಂತೆ ರಾಣಿ ಚನ್ನಮ್ಮ ಜಯಂತಿಯ ಆಚರಣೆ ಪ್ರಧಾನಮಂತ್ರಿ ಸಮ್ಮುಖದಲ್ಲಿ ನಡೆದರೆ ಉತ್ತರ ಭಾರತಕ್ಕೆ ಚನ್ನಮ್ಮ ಪರಿಚಯವಾಗುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರೆಂದರೆ ಝಾನ್ಸಿರಾಣಿ ಲಕ್ಷ್ಮಿಬಾಯಿ ಮತ್ತು ಮಂಗಲಪಾಂಡೆ ಅವರನ್ನು ಉತ್ತರ ಭಾರತದ ಜನ ಹೆಸರಿಸುತ್ತಾರೆ. ನಿಜಕ್ಕೂ ಮೊಟ್ಟ ಮೊದಲು ಬ್ರಿಟೀಷರೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಿತ್ತೂರು ಚನ್ನಮ ಮತ್ತು ಸಂಗೊಳ್ಳಿರಾಯಣ್ಣ ಅವರ ತ್ಯಾಗ ಮತ್ತು ಬಲಿದಾನ ಸಮಗ್ರ ಭಾರತಕ್ಕೆ ತಿಳಿಯಬೇಕಾಗಿದೆ’ ಎಂದು ವಿವರಿಸಿದರು.
ಬೆಳಗಾವಿಯಲ್ಲಿ ವಕೀಲರಿಂದ ಮನವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಲತಃ ವಕೀಲರಾಗಿರುವುದರಿಂದ ಸೆ.22ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಕರ್ನಾಟಕದ ವಕೀಲರಿಂದ ‘2ಎ’ ಮೀಸಲಾತಿಗೆ ಒತ್ತಾಯಿಸಿ ಮನವಿಪತ್ರ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ವಕೀಲರು ಭಾಗವಹಿಸುವಂತೆ ಸ್ವಾಮೀಜಿ ತಿಳಿಸಿದರು.
ದೇವರಾಜ ಅರಸರಿಂದ ಅನ್ಯಾಯ: ಹಾವನೂರ ಆಯೋಗದ ವರದಿ ಆಧಾರದ ಮೇಲೆ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿ ಮಹತ್ಕಾರ್ಯ ಮಾಡಿದರು. ಲಿಂಗಾಯತ ಸಮಾಜದ ಉಪಪಂಗಡಗಳಾದ ಕಂಬಾರ, ಕುಂಬಾರ, ಗಾಣಿಗ ಹೀಗೆ ಎಲ್ಲ ಕುಶಲ ಕರ್ಮಿಗಳಿಗೆ ‘2ಎ’ ಮೀಸಲಾತಿ ಕಲ್ಪಿಸಿದರು. ಆದರೆ ಲಿಂಗಾಯತರಿಗೆ ಭೂಮಿಯುಳ್ಳವರು, ಆರ್ಥಿಕವಾಗಿ ಸದೃಢರೆನ್ನುವ ಕಾರಣದಿಂದ ಮೀಸಲಾತಿ ಕೊಡದೆ ತಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂದರು.
ಮುಸ್ಲಿಮರು ಹಿಂದುಳಿದ ಪ್ರವರ್ಗ-1, 2ಎ ಮತ್ತು 2ಬಿ ಮೂರರಲ್ಲಿಯೂ ಮೀಸಲಾತಿ ಪಡೆಯುತ್ತಿದ್ದು, ಅವರಿಗೆ ಶೇ 23ರಷ್ಟು ಪಾಲು ಲಭಿಸುತ್ತಿತ್ತು. ಇದೇ ಕಾರಣಕ್ಕೆ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಶೇ 4 ಮೀಸಲಾತಿಯನ್ನು ರದ್ದುಪಡಿಸಿ ಇತರ ವರ್ಗಗಳಿಗೆ ನೀಡಲಾಯಿತು ಎಂದು ಸ್ಮರಿಸಿದರು.
ಮಾಜಿ ಸಂಸದ ಕರಡಿ ಸಂಗಣ್ಣ, ಸಮಾಜ ಒಗ್ಗಟ್ಟಿನಿಂದ ಹೋರಾಟಕ್ಕಿಳಿದರೆ ತಾವು ಸಹ ತನು-ಮನ-ಧನದಿಂದ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ‘ಚನ್ನಮ್ಮ ಮತ್ತು ಸಂಗೊಳ್ಳಿರಾಯಣ್ಣ ಒಂದೇ ನಾಣ್ಯದ ಎರಡು ಮುಖಗಳಂತೆ ಇದ್ದು, ಬ್ರಿಟೀಷರ ವಿರುದ್ಧ ಹೋರಾಡಿದ್ದಾರೆ. ಇಬ್ಬರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಹೋರಾಟ ಮಾಡಬೇಕಾಗಿದೆ’ ಎಂದರು.
ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ತುರುವಿಹಾಳ, ಮುಖಂಡ ಲಕ್ಷ್ಮಣ ನಿರಾಣಿ, ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಪಂಪನಗೌಡ ಮಾತನಾಡಿದರು.
ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತ ಮಠದ ಮಹಾಲಿಂಗ ಸ್ವಾಮೀಜಿ, ಬಾಳೆಹೊನ್ನೂರು ಖಾಸಾಶಾಖಾಮಠದ ಸೋಮನಾಥ ಶಿವಾಚಾರ್ಯ, ವೆಂಕಟಗಿರಿ ಕ್ಯಾಂಪಿನ ಸಿದ್ಧರಾಮೇಶ್ವರ ಶರಣರು, ಜಂಗಮರ ಹಳ್ಳಿಯ ಚಂದ್ರಮೌನೇಶ ತಾತ ಸಾನ್ನಿಧ್ಯ ವಹಿಸಿದ್ದರು.
ಡಾ.ಕೆ.ಬಸವರಾಜ ಕುಷ್ಟಗಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ, ಉದ್ಯಮಿ ಸಿದ್ರಾಮಪ್ಪ ಮಾಡಸಿರವಾರ, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ನಾಗವೇಣಿ ಪಾಟೀಲ, ಸಿದ್ದರಾಮೇಶ ಮನ್ನಾಪುರ, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ, ವೀರಭದ್ರಪ್ಪ ಗಸ್ತಿ ಉಪಸ್ಥಿತರಿದ್ದರು. ಕಲ್ಯಾಣಪ್ಪ ಹಿರೇಗೌಡರ್ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಆನೆಗುಂದಿ ನಿರೂಪಿಸಿದರು.
ಆಕರ್ಷಕ ಮೆರವಣಿಗೆ: ಎಪಿಎಂಸಿ ಗಜಾನನ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಬಸವ ವೃತ್ತ, ಬಸ್ ನಿಲ್ದಾಣ ರಸ್ತೆ, ಗಾಂಧಿವೃತ್ತ ಮತ್ತು ಕನಕವೃತ್ತದಲ್ಲಿ ಹಾದು ಕಿತ್ತೂರು ಚನ್ನಮ್ಮ ವೃತ್ತದ ಮೂಲಕ ವಾಸವಿ ಕಲ್ಯಾಣ ಮಂಟಪಕ್ಕೆ ತಲುಪಿತು. ನೂರಾರು ಜನ ಮಹಿಳೆಯರು ಕುಂಭ-ಕಳಸದೊಂದಿಗೆ ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ವೀರಗಾಸೆ ನೃತ್ಯ, ಡೊಳ್ಳು ಕುಣಿತ, ಕುದುರೆಯ ಮೇಲೆ ಕುಳಿತ ಕಿತ್ತೂರು ಚನ್ನಮ್ಮ ಛದ್ಮವೇಷಧಾರಿ ಬಸವರಾಜ ಬಲ್ಕುಂದಿ ಅವರ ನೃತ್ಯ ಸಾರ್ವಜನಿಕರ ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.