ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಮಗು: ಸಮಾಜದ ತಾತ್ಸಾರ ಸಲ್ಲ -ಡಾ.ರುದ್ರಗೌಡ ಪಾಟೀಲ

ರಾಷ್ಟ್ರೀಯ ಹೆಣ್ಣು ಮಗು ದಿನ ಆಚರಣೆ
Last Updated 25 ಜನವರಿ 2022, 5:09 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಲಿಂಗ ತಾರತಮ್ಯ ಮಾಡಬಾರದು. ಹೆಣ್ಣು ಮಕ್ಕಳಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಪರಿಚಯಿಸಿದ್ದು, ಅವುಗಳ ಸದುಪಯೋಗ ಪಡೆಯಬೇಕು’ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯ ಡಾ.ರುದ್ರಗೌಡ ಪಾಟೀಲ ಮನವಿ ಮಾಡಿದರು.

ಸೋಮವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಪ್ರಯುಕ್ತ ಬಾಣಂತಿಯರಿಗೆ ಸಿಹಿ ಹಂಚಿ ಮಾತನಾಡಿ, ‘ಹೆಣ್ಣು ಹುಟ್ಟಿದರೆ ಹುಣ್ಣು ಅಂಟಿದಂತೆ ಎಂಬ ತಪ್ಪು ಕಲ್ಪನೆಯ ಕಾಲವೊಂದಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಹೆಣ್ಣು ಕುಟುಂಬದ ಕಣ್ಣು ಎಂಬ ಪರಿಕಲ್ಪನೆ ಆರಂಭಗೊಂಡಿದೆ. ಹೆಣ್ಣು ಮಗುವಿನ ಸುರಕ್ಷತೆ, ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ಅವರು ಸಲಹೆ
ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಮಾಕಾಪುರ ಮಾತನಾಡಿ, ‘ಹೆಣ್ಣು ಮಗು ಜನಿಸಿದೆ ಎಂಬ ಕೀಳರಿಮೆಗೆ ಕುಟುಂಬ ಸದಸ್ಯರು ಒಳಗಾಗಬಾರದು. ಹೆಣ್ಣು ಮಕ್ಕಳಿಗೆ ಸಿಗುತ್ತಿರುವ ಸ್ಥಾನಮಾನ, ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಬೇಟಿ ಬಚಾವೋ, ಬೇಟಿ ಪಡಾವೋ ಸೇರಿದಂತೆ ಇತರ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಸಿಹಿ ವಿತರಣೆ: ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಂದಿರಿಗೆ ಸಿಹಿ ತಿನಿಸಿನ ಪೊಟ್ಟಣ ನೀಡುವ ಜತೆಗೆ ಉಳಿದ ಬಾಣಂತಿಯರಿಗೂ ಆರೋಗ್ಯ ಇಲಾಖೆಯ ಸಿಹಿ ಹಂಚುವ ಮೂಲಕ ಅಂತರ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯ ಮಹತ್ವ ಹಾಗೂ ಜಾಗೃತಿ ಕುರಿತಂತೆ ಮಾಹಿತಿ ನೀಡಲಾಯಿತು.

ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಕುಲಕರ್ಣಿ ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.

‘ಕಾನೂನು ಅರಿವು ಪಡೆದುಕೊಳ್ಳಿ’
ಮಾನ್ವಿ:
‘ಮಹಿಳೆಯರ ಹಿತರಕ್ಷಣೆ ಹಾಗೂ ಏಳಿಗೆಗಾಗಿ ಇರುವ ಕಾನೂನು ಸೌಲತ್ತುಗಳ ಕುರಿತು ಜಾಗೃತಿ ಅಗತ್ಯ’ ಎಂದು ಸಹಾಯಕ ಸರ್ಕಾರಿ ಅಭಿಯೋಜಕಿ ಅರ್ಚನಾ ಯಾದವ ಹೇಳಿದರು.

ಸೋಮವಾರ ಪಟ್ಟಣದ ಪ್ರಗತಿ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲ್ಲೂಕು ವಕೀಲರ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲ್ಲೂಕು ಅಧಿಕಾರಿ ಸುಭದ್ರಾದೇವಿ ಮಾತನಾಡಿ, ‘ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಲಾಗುತ್ತಿದೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಅಪೌಷ್ಟಿಕ ಮಕ್ಕಳ ಆರೋಗ್ಯ ರಕ್ಷಣೆಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ’ ಎಂದು ಅವರು ತಿಳಿಸಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಹಾಗೂ ಹಿರಿಯ ವಕೀಲ ಗುಮ್ಮಾ ಬಸವರಾಜ ಮಾತನಾಡಿದರು.

ಬಸವರಡ್ಡಿ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ತಿಪ್ಪಣ್ಣ ಎಂ. ಹೊಸಮನಿ ಬಲ್ಲಟಗಿ ಅಧ್ಯಕ್ಷತೆವಹಿಸಿದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಪಾಟೀಲ, ಕಾಲೇಜಿನ ಪ್ರಾಂಶುಪಾಲ ಬಸವರಾಜ ಭೋಗಾವತಿ, ವಕೀಲರಾದ ಗುಂಡಮ್ಮ ಮೇಟಿ, ಸ್ಟೆಲ್ಲಾ ಶೆರ್ಲಟ್, ಚಂದ್ರಕಲಾ ಹಾಗೂ ಶ್ರೀನಿವಾಸ ನಂದಿಹಾಳ, ಸಹಾಯಕ ಸಿಡಿಪಿಒ ಮಹೇಶ ನಾಯಕ ಸೇರಿದಂತೆ ಹಲವರು ಈ ವೇಳೆ ಹಾಜರಿದ್ದರು.

‘ಹಕ್ಕುಗಳ ಜಾಗೃತಿ ಅಗತ್ಯ’
ಕವಿತಾಳ:
‘ಶಿಕ್ಷಣ, ಆರೋಗ್ಯ, ಸಮಾನತೆ ಮತ್ತು ಹೆಣ್ಣು ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಹೆಣ್ಣು ಭ್ರೂಣ ಹತ್ಯೆ, ಲಿಂಗ ಸಮಾನತೆ ಮತ್ತು ದೈಹಿಕ ದೌರ್ಜನ್ಯದಂಥ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗುರಿ ಹೊಂದಲಾಗಿದೆ. ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಅವರ ಶಿಕ್ಷಣ, ಆರೋಗ್ಯ, ಹಕ್ಕುಗಳು ಮತ್ತು ಪೋಷಣೆಯ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಪಯತ್ನ ಮಾಡಲಾಗುತ್ತಿದೆ’ ಎಂದರು.

ಕ್ಷಯ ರೋಗ ಘಟಕದ ಮೇಲ್ವಿಚಾರಕ ಪ್ರೇಮ್ ಪ್ರಸಾದ್ ಮಾತನಾಡಿ,‘ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಬಡತನ, ಅನಕ್ಷರತೆ ಮತ್ತು ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು’ ಎಂದರು.

ಪ್ರಾಚಾರ್ಯೆ ಶಕುಂತಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ ಕುಮಾರ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT