ಸೋಮವಾರ, ಮಾರ್ಚ್ 1, 2021
30 °C
ಸ್ಲಂ ಜನರ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬದಲ್ಲಿ ನಿವೃತ್ತ ಶಿಕ್ಷಕ ಕೆ.ಕರಿಯಪ್ಪ ಕಳವಳ

ಕೊಳಚೆ ಪ್ರದೇಶದ ನಿವಾಸಿಗಳ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ, ಸಾಂಸ್ಕೃತಿಕವಾಗಿ ಅಪಾರ ಕೊಡುಗೆ ನೀಡಿರುವ ಕೊಳಚೆ ಪ್ರದೇಶದ ನಿವಾಸಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ ಎಂದು ನಿವೃತ್ತ ಶಿಕ್ಷಕ ಕೆ.ಕರಿಯಪ್ಪ ಮಾಸ್ತರ ಕಳವಳ ವ್ಯಕ್ತಪಡಿಸಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಶನಿವಾರ ಆಯೋಜಿಸಿದ್ದ ಸ್ಲಂ ಜನರ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಇದುವರೆಗೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ಕೊಳಚೆ ಪ್ರದೇಶದ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿವೆ. ಕೊಳಚೆ ಪ್ರದೇಶದ ಜನರು ಸಂವಿಧಾನ ಬದ್ಧ ಹಕ್ಕುಗಳಿಂದಲೂ ವಂಚಿತರಾಗಿದ್ದಾರೆ ಎಂದರು.

ಸಮಾಜದಲ್ಲಿನ ಸಮುದಾಯಗಳು ಆಯಾ ಸಮುದಾಯದ ಸಂಪ್ರದಾಯದ ಪ್ರಕಾರ ಹಬ್ಬದ ಆಚರಣೆ ಮಾಡುತ್ತವೆ. ಆದರೆ, ಕೊಳಚೆ ಪ್ರದೇಶದ ಜನರ ಕಲೆ ಪ್ರೋತ್ಸಾಹಿಸುವ ಇಂತಹ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವುದು ವಿರಳವಾಗಿದೆ. ಆದರೂ, ಇಂತಹ ಹಬ್ಬದ ಆಚರಣೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಕೊಳಚೆ ಪ್ರದೇಶಗಳೆಂದರೆ ಎಲ್ಲ ಸಮುದಾಯದ ಜನರು ವಾಸ ಮಾಡುವಂತಹ ಪ್ರದೇಶವಾಗಿದ್ದು, ಇಲ್ಲಿನ ಜನರನ್ನು ಒಂದೆಡೆ ಸೇರಿಸಿ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟವನ್ನು ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿ, ಸಂವಿಧಾನದ ಆಶಯದಂತೆ ಕೊಳಚೆ ಪ್ರದೇಶದ ಜನರಿಗೆ ಸಾಮಾಜಿಕ ನ್ಯಾಯ ದೊರೆಯುತ್ತಿಲ್ಲ. ಉಳ್ಳವರಿಗೊಂದು ಇಲ್ಲದವರಿಗೊಂದು ನ್ಯಾಯ ಮಾಡಲಾಗುತ್ತದೆ ಎಂದು ದೂಷಿಸಿದರು.

ಕೊಳಚೆ ಪ್ರದೇಶದ ಮಾನವ ಸಂಪನ್ಮೂಲವೂ ದೇಶಕ್ಕೆ ಕೊಡುಗೆ ನೀಡಿದೆ. ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಯ ಹಿತದೃಷ್ಟಿಯಿಂದ ಯೋಜನೆಗಳನ್ನು ರೂಪಿಸಬೇಕು. ಕೊಳಚೆ ಪ್ರದೇಶದವರು ಹೋರಾಟ ಮಾಡುವುದು ನಿವೇಶನಕ್ಕಾಗಿ ಮಾತ್ರವಲ್ಲ. ಬದುಕಿನ ಅಳಿವು ಉಳಿವಿಗಾಗಿ ಹೋರಾಟ ಮಾಡಲಾಗುತ್ತಿದ್ದಾರೆ ಎಂದರು.

ಪತ್ರಕರ್ತ ಬಿ.ವೆಂಕಟಸಿಂಗ್ ಮಾತನಾಡಿ, ವಿದೇಶಗಳಲ್ಲಿ ಕೊಳಚೆ ಪ್ರದೇಶ ಎಂಬುವುದೇ ಇಲ್ಲ. ಅಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಅಭಿವೃದ್ಧಿ ವಿಷಯದಲ್ಲೂ ನಗರ ಹಾಗೂ ಗ್ರಾಮೀಣ ಪ್ರದೇಶವೆಂಬ ತಾರತಮ್ಯವೂ ಇಲ್ಲ ಎಂದು ಹೇಳಿದರು.

ಆರೋಗ್ಯ, ಶಿಕ್ಷಣ ಹಾಗೂ ವಸತಿ ಸೌಕರ್ಯವನ್ನು ಒದಗಿಸುವುದು ಸರ್ಕಾರದ ಮುಖ್ಯ ಕರ್ತವ್ಯವಾಗಬೇಕು. ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.

ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯ ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ ಅಧ್ಯಕ್ಷತೆ ವಹಿಸಿದ್ದರು. ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಅಂಬಣ್ಣ ಆರೋಲಿ, ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಎಂ.ಆರ್.ಬೇರಿ, ಸಿಐಟಿಯು ಅಧ್ಯಕ್ಷೆ ಎಚ್.ಪದ್ಮಾ, ಶೃತಿ ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷ ಡಿಂಗ್ರಿ ನರಸಪ್ಪ, ರೇಣುಕಾ ಸರಡಗಿ, ನೂರಜಾನ್, ಕೆ.ಪಿ.ಅನಿಲಕುಮಾರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು