ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು |ಅಂಕಪಟ್ಟಿ ಸಿಗದೆ ಪದವಿ ವಿದ್ಯಾರ್ಥಿಗಳ ಪರದಾಟ

ಉನ್ನತ ಶಿಕ್ಷಣ, ನೌಕರಿ ಪಡೆಯಲೂ ತೊಂದರೆ
Published 12 ನವೆಂಬರ್ 2023, 6:25 IST
Last Updated 12 ನವೆಂಬರ್ 2023, 6:25 IST
ಅಕ್ಷರ ಗಾತ್ರ

ಕವಿತಾಳ: 2021–22ನೇ ಸಾಲಿನಲ್ಲಿ ಪದವಿ ಅಂತಿಮ ವರ್ಷ ತೇರ್ಗಡೆಯಾದ ಹಲವು ವಿದ್ಯಾರ್ಥಿಗಳು 4ನೇ ಸೆಮಿಸ್ಟರ್ ಅಂಕಪಟ್ಟಿ ಸಿಗದೆ ಪರದಾಡುತ್ತಿದ್ದಾರೆ.

ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ವಿವಿಧ ಖಾಸಗಿ ಕಾಲೇಜಿನಲ್ಲಿ ಪದವಿ ಓದಿದ ಹಲವು ವಿದ್ಯಾರ್ಥಿಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಇದುವರೆಗೂ ಅಂಕ ಪಟ್ಟಿ ನೀಡಿಲ್ಲ. ಇತ್ತ ಕಾಲೇಜು ಆಡಳಿತ ಮಂಡಳಿಯೂ ಅಂಕ ಪಟ್ಟಿ ತರಿಸುವ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಕೋವಿಡ್ ಕಾರಣದಿಂದ 2021ರಲ್ಲಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿತ್ತು. ಆಗ ಖಾಸಗಿ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿಎಸ್‌ಸಿ ಪದವಿಯ 4ನೇ ಸೆಮಿಸ್ಟರ್ ಓದುತ್ತಿದ್ದ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಅರ್ಹತೆ ಪಡೆದಿದ್ದರು.

2022–23ರಲ್ಲಿ 5 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಅದರ ಅಂಕಪಟ್ಟಿ ಸಿಕ್ಕಿದೆ. ಆದರೆ, 4ನೇ ಸೆಮಿಸ್ಟರ್ ಅಂಕಪಟ್ಟಿ ಇಲ್ಲದೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಪಡೆಯಲು ಸಾಧ್ಯವಾಗದೆ ವಿದ್ಯಾರ್ಥಿಗಳು ಕಾಲೇಜು ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಅಲೆದಾಡುತ್ತಿದ್ದಾರೆ.

‘ಅಂಕಪಟ್ಟಿ ನೀಡುವಂತೆ 2023ರ ಮೇ ತಿಂಗಳಲ್ಲಿ ಖಾಸಗಿ ಕಾಲೇಜಿನವರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರೂ ಸ್ಪಂದನೆ ಸಿಕ್ಕಿಲ್ಲ. ವಿದ್ಯಾರ್ಥಿಗಳು ಪದೇ ಪದೇ ಕಾಲೇಜಿಗೆ ತೆರಳಿ ಅಂಕಪಟ್ಟಿ ಕೇಳುತ್ತಿರುವುದರಿಂದ ಬೇಸತ್ತ ಆಡಳಿತ ಮಂಡಳಿಯವರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆಯಲು ನಮ್ಮಿಂದ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ.

ಪದವಿ ತರಗತಿಗೆ ಪ್ರವೇಶ ಪಡೆಯುವಾಗ ಸಲ್ಲಿಸಿದ ದ್ವಿತೀಯ ಪಿಯು ಮೂಲ ಅಂಕಪಟ್ಟಿ ವಾಪಸ್‌ ಪಡೆದುಕೊಳ್ಳಲು ವಿದ್ಯಾರ್ಥಿಗಳು ಹೆಣಗಾಡುತ್ತಿದ್ದಾರೆ. ಪಿಯುಸಿ ಅಂಕಪಟ್ಟಿ ಮರಳಿಸಲು ಕಾಲೇಜಿನವರು ಆಸಕ್ತಿ ತೋರದ ಕಾರಣ ವಿದ್ಯಾರ್ಥಿಗಳು ಕಲಬುರಗಿಗೆ ಹೋಗಿ ತರುವಂತಾಗಿದೆ.

‘ವಿಶ್ವವಿದ್ಯಾಲಯದ ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳ ಪಿಯುಸಿ ಮೂಲ ಅಂಕಪಟ್ಟಿಗಳನ್ನು ಕಸದ ರಾಶಿಯಂತೆ ಗುಡ್ಡೆ ಹಾಕಲಾಗಿದ್ದು, ಅವುಗಳಲ್ಲಿ ತಮ್ಮದು ಯಾವುದೆಂದು ಹುಡುಕಿಕೊಂಡು ಬರುವುದು ಸವಾಲಾಗಿ ಪರಿಣಮಿಸಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿದ್ಯಾರ್ಥಿ ಅಳಲು ತೋಡಿಕೊಳ್ಳುತ್ತಾರೆ.

‘4ನೇ ಸೆಮಿಸ್ಟರ್ ಅಂಕಪಟ್ಟಿ ನೀಡದ ಕಾರಣ ಸಹಕಾರಿ ಸಂಘದಲ್ಲಿ ಕೆಲಸ ಕೊಡಲು ನಿರಾಕರಿಸಿದರು. ಪದವಿ ಪೂರೈಸಿ ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿರುವುದರಿಂದ ನನ್ನ ಫಲಿತಾಂಶದ ಬಗ್ಗೆ ಪಾಲಕರು ಅನುಮಾನ ವ್ಯಕ್ತಪಡಿಸುವಂತಾಗಿದೆ’ ಎಂದು ವಿದ್ಯಾರ್ಥಿ ಮೌನೇಶ ಬೇಸರ ವ್ಯಕ್ತಪಡಿಸಿದರು.

ದಯಾನಂದ ಅಗಸರ
ದಯಾನಂದ ಅಗಸರ
ಮಗನ ಶಿಕ್ಷಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಅಂಕಪಟ್ಟಿ ಸಿಗದಿದ್ದರಿಂದ ಕೆಲಸ ಇಲ್ಲದೆ ಮನೆಯಲ್ಲಿ ಕುಳಿತರೆ ಏನು ಪ್ರಯೋಜನ?
ಯಮನೂರಪ್ಪ ಕವಿತಾಳ ಪಾಲಕ
ಅಂಕಪಟ್ಟಿ ಸಮಸ್ಯೆ ಬಗ್ಗೆ ಕುಲಪತಿ ಗಮನಕ್ಕೆ ತರಲಾಗಿದ್ದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ತುರ್ತು ಅಗತ್ಯವಿದ್ದರೆ ವಿದ್ಯಾರ್ಥಿಗಳೇ ವಿಶ್ವವಿದ್ಯಾಲಯಕ್ಕೆ ತೆರಳಿ ಅಂಕಪಟ್ಟಿ ಪಡೆಯಬಹುದು
ಚಂದ್ರಶೇಖರ ಪಾಟೀಲ ಪ್ರಾಚಾರ್ಯ ವಿಸಿಬಿ ಕಾಲೇಜು ಲಿಂಗಸುಗೂರು
ವಿದ್ಯಾರ್ಥಿಗಳು ಕಟ್ಟಿದ ಪರೀಕ್ಷಾ ಶುಲ್ಕವನ್ನು ಕಾಲೇಜಿನವರು ವಿ.ವಿ.ಗೆ ಪಾವತಿಸದ ಪ್ರಕರಣಗಳಲ್ಲಿ ಅಂಕಪಟ್ಟಿಗಳು ವಿ.ವಿ. ಬಳಿ ಇರುತ್ತವೆ. ಹೀಗಾಗಿ ಸಂಬಂಧಪಟ್ಟ ಕಾಲೇಜಿನವರು ಶುಲ್ಕವನ್ನು ಪಾವತಿಸಿ ಅಂಕಪಟ್ಟಿ ಪಡೆಯಬೇಕು
ಪ್ರೊ.ದಯಾನಂದ ಅಗಸರ ಕುಲಪತಿ ಗುಲಬರ್ಗಾ ವಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT