ಮಂಗಳವಾರ, ಜನವರಿ 25, 2022
25 °C
ಪ್ರಾಂತ ರೈತ ಸಂಘದ ಮುಖಂಡರ ವಿಜಯೋತ್ಸವ: ಪಟಾಕಿ ಸಿಡಿಸಿ ಸಂಭ್ರಮ

ಜಾಲಹಳ್ಳಿ: ಗ್ರಾ.ಪಂ ಚುನಾವಣೆ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಾಲಹಳ್ಳಿ: ಇಲ್ಲಿಯ ಪಟ್ಟಣ ಪಂಚಾಯಿತಿಗೆ ಡಿ.13 ರಿಂದ 31ರೊಳಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ ರಂಜಿತಾ ಅವರು ಆದೇಶ ಹೊರಡಿಸಿದ್ದು, ಪಟ್ಟಣದಲ್ಲಿ ಪ್ರಾಂತ ರೈತ ಸಂಘದ ಮುಖಂಡರು ವಿಜಯೋತ್ಸವ ಆಚರಣೆ ಮಾಡಿದರು.

ಅಂಬೇಡ್ಕರ್ ವೃತ್ತದಲ್ಲಿ ಪ್ರಾಂತ ರೈತ ಸಂಘದ ಮುಖಂಡರು ಸಿಹಿ ಹಂಚಿ, ಅಂಬೇಡ್ಕರ್ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ವಿಜಯೋತ್ಸವ ಆಚರಿಸಿದರು.

ಒಂದು ವರ್ಷದ ಹಿಂದೆ ರಾಜ್ಯ ಸರ್ಕಾರ ಇಲ್ಲಿಯ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಿತ್ತು.

ಅದನ್ನು ಪ್ರಶ್ನಿಸಿ ಇಲ್ಲಿಯ ಪ್ರಾಂತ ರೈತ ಸಂಘದ ಮುಖಂಡರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಸರ್ಕಾರದ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವಂತೆ ಆದೇಶ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೂ ಅದು ಜಾರಿಯಾಗಿರಲಿಲ್ಲ. ಸೋಮವಾರ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ.ರಂಜಿತಾ ಅವರು ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ, ಕರಡಿಗುಡ್ಡ, ಚಿಂಚೋಡಿ ಗ್ರಾಮ ಪಂಚಾಯಿತಿಗಳ ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ.

ಸಿಪಿಐಎಂ ಪಕ್ಷದ ತಾಲ್ಲೂಕು ಸಮಿತಿ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ,‘ಜನ ನಾಯಕರು ಜನ ಬಯಸುವುದನ್ನು ಮಾಡದೇ ತಮ್ಮ ಸ್ವಾರ್ಥಕ್ಕೆ ಕೆಲಸ ಮಾಡಿದರೆ, ಜನ ಪ್ರಶ್ನಿಸುವ ಸ್ಥಳದಲ್ಲಿ ಪ್ರಶ್ನಿಸಿದರೆ, ತಕ್ಕ ಉತ್ತರ ಸಿಗುತ್ತದೆ ಎನ್ನುವುದಕ್ಕೆ ಜಾಲಹಳ್ಳಿಯೇ ಉದಾಹರಣೆಯಾಗಿದೆ’ ಎಂದು ಹೇಳಿದರು.

ಸುಳ್ಳು ದಾಖಲೆ ಸೃಷ್ಟಿಸಿ ಅಭಿವೃದ್ಧಿ ಮಾಡುವ ಅವಶ್ಯಕತೆ ಇಲ್ಲ. ಗ್ರಾಮದಲ್ಲಿ ಸುಮಾರು 4000 ಜನ ನಿತ್ಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈಗ ಅವರು ಗುಳೆ ಹೋಗಿದ್ದಾರೆ. ಇದಕ್ಕೆ ಯಾರೂ ಹೊಣೆ?. ಮುಂದಿನ ದಿನಗಳಲ್ಲಿ ಸುಳ್ಳು ದಾಖಲೆ ಸಲ್ಲಿಸಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಹನುಮಂತಪ್ಪ ಮಡಿವಾಳ, ಮಕ್ತೂಮ್, ಮೌನೇಶ ಡಿ.ಆರ್ ಸೇರಿದಂತೆ ಅನೇಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು