ಮಂಗಳವಾರ, ಆಗಸ್ಟ್ 16, 2022
21 °C

ಗುಣಮಟ್ಟದ ಆಹಾರ ನೀಡದ ಅಧಿಕಾರಿ: ಅಂಗವಿಕಲರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಕನ್ನಡ ಭವನದಲ್ಲಿ ಡಿಸೆಂಬರ್‌ 3 ರಂದು ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಸಮಾರಂಭದಲ್ಲಿ ಅಧಿಕಾರಿಗಳು ಗುಣಮಟ್ಟದ ಆಹಾರ ನೀಡಿಲ್ಲ ಎಂದು ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಅಂಗವಿಕಲರು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಪೂರ್ವತಯಾರಿ ಸಭೆಯಲ್ಲಿ ಹೇಳಿದಂತೆ ಕಾರ್ಯಕ್ರಮದ ಕೊನೆಯಲ್ಲಿ ಆಹಾರ ಕೊಟ್ಟಿಲ್ಲ. ಮೂರು ರೀತಿಯ ಸಿಹಿ ಕೊಡಲಾಗುವುದು ಎಂದು ತಿಳಿಸಿದ್ದರು. ಸೊನಾ ಪಾಪಡಿಯನ್ನು ಸಿಹಿ ಆಹಾರ ಎಂದು ಕೊಟ್ಟಿದ್ದಾರೆ. ವರ್ಷಕ್ಕೊಮ್ಮೆ ಏರ್ಪಡಿಸುವ ಕಾರ್ಯಕ್ರಮದಲ್ಲೂ ಅಧಿಕಾರಿಗಳು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮ ಆಯೋಜಿಸಲು ಸರ್ಕಾರದಿಂದ ಅನುದಾನ ಬಂದಿದೆ. ಇದಲ್ಲದೆ, ರಾಯಚೂರು ನಗರದ ನಾಲ್ಕು ವಿಶೇಷ ಶಾಲೆಗಳಿಂದ ಅಧಿಕಾರಿಗಳು ಹಣ ಸಂಗ್ರಹಿಸಿದ್ದಾರೆ. ಆದರೆ, ವ್ಯವಸ್ಥಿತ ಕಾರ್ಯಕ್ರಮ ಮಾಡಿಲ್ಲ. ಜಿಲ್ಲೆಯ ವಿವಿಧ ಭಾಗಗಳಿಂದ ಕಷ್ಟಪಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಅಂಗವಿಕಲರಿಗೆ ಒಣ ಅನ್ನ ಕೊಟ್ಟಿದ್ದಾರೆ. ಕನಿಷ್ಠ ಅದಕ್ಕೊಂದು ಸಾಂಬಾರು, ಚಟ್ನಿಯನ್ನೂ ನೀಡಿಲ್ಲ. ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಶರಣಪ್ಪ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಕಾರ್ಯಕ್ರಮ ಅಯೋಜಿಸಲು ₹40 ಸಾವಿರ ಬಂದಿದೆ. ಒಟ್ಟು 150 ಅಂಗವಿಕಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲರಿಗೂ ಅನ್ನ ಮತ್ತು ಸೊನಾ ಪಾಪಡಿ ಸಿಹಿ ಊಟ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಭವನದ ಹೊರಗೆ ಪೆಂಡಾಲ್‌ ಹಾಕಿಸಲಾಗಿದೆ’ ಎಂದು ಹೇಳಿದರು.

ಆದರೆ, ಈ ಕಾರ್ಯಕ್ರಮ ಆಯೋಜನೆಗೆ ₹15 ಸಾವಿರಕ್ಕಿಂತ ಹೆಚ್ಚು ವೆಚ್ಚವಾಗಿಲ್ಲ ಎನ್ನುವುದು ಮೇಲ್ನೊಟದಲ್ಲೇ ಕಾಣುತ್ತಿತ್ತು. ಕನ್ನಡಭವನ ಬಾಡಿಗೆ ಕಡಿಮೆ ಇದ್ದು, ಧ್ವನಿವರ್ಧಕ, ಬ್ಯಾನರ್‌ ಬಾಡಿಗೆ ಹಾಗೂ ₹3 ಸಾವಿರ ವೆಚ್ಚದ ಪೆಂಡಾಲ್‌ ಹಾಕಲಾಗಿತ್ತು. ಊಟ ಮತ್ತು ನೀರಿನ ವ್ಯವಸ್ಥೆಗಾಗಿ ಗರಿಷ್ಠ ₹7 ಸಾವಿರ ವೆಚ್ಚವಾಗಿರುವುದು ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು