ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿಚಿನ್ನದಗಣಿ | ಟ್ರೈನಿ ಹುದ್ದೆಗಳಿಗೆ ಅನರ್ಹರ ನೇಮಕ: ಆರೋಪ

Published 31 ಡಿಸೆಂಬರ್ 2023, 6:10 IST
Last Updated 31 ಡಿಸೆಂಬರ್ 2023, 6:10 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿಯ ಆಡಳಿತ ಮಂಡಳಿಯು ಟ್ರೈನಿ ಹುದ್ದೆಗಳ ನೇಮಕಾತಿಯಲ್ಲಿ ಅನರ್ಹರನ್ನು ಆಯ್ಕೆ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

ಗಣಿ ಕಂಪನಿಯ ಇತ್ತೀಚಿನ ಕೆಲ ನಿರ್ಧಾರಗಳು ಅನುಮಾನಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ನೊಂದ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ.

ಕಂಪನಿ 2023 ಫೆಬ್ರುವರಿ 15ರಂದು 29 ಸ್ಧಳೀಯ ಹುದ್ದೆ ಹಾಗೂ 9 ಸ್ಧಳೀಯೇತರ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಅದರಂತೆ 800ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪರೀಕ್ಷೆ ನಡೆಸಲು ದೆಹಲಿ ಮೂಲದ ಟಿಸಿಐಎಲ್ ಎಂಬ ಸಂಸ್ಧೆಗೆ ವಹಿಸಲಾಗಿತ್ತು.

ಕಂಪನಿಯ ನಿರ್ದೇಶಕ ಮಂಡಳಿಯ 381ನೇ ವಾರ್ಷಿಕ ಸಭೆಯಲ್ಲಿ ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆಗಳ ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಿ ಅಭ್ಯರ್ಥಿಯ ಶೈಕ್ಷಣಿಕ ಸಾಧನೆಯ ಶೇಕಡ 60 ರಷ್ಟು ಅಂಕ. ಕಂಪ್ಯೂಟರ್ ಬೇಸ್ಡ್‌ ಟೆಸ್ಟ್ (ಸಿಬಿಟಿ)ನ ಶೇಕಡ 30 ಹಾಗೂ ಸಂದರ್ಶನದ ಮೂಲಕ 10 ಅಂಕಗಳನ್ನು ಪರಿಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲು ನಿರ್ಧರಿಸಿತ್ತು. ಅದರಂತೆ ಅಭ್ಯರ್ಥಿ ಪಡೆದ ಅಂಕಗಳನ್ನು ಕ್ರೋಢೀಕರಿಸಿ ಅಂಕ ನೀಡಲಾಗಿದೆ. ಎಲ್ಲ ಅಭ್ಯರ್ಥಿಯ ಲಾಗಿನ್‌ನಲ್ಲಿ ಅವರು ಪಡೆದ ಮಾಹಿತಿ ಲಭ್ಯವಿದೆ ಎಂದು ಟಿಸಿಐಎಲ್ ಸಂಸ್ಧೆ ಅಧಿಕಾರಿಗಳು ಹೇಳುತ್ತಾರೆ.

ಆದರೆ, ಲಾಗಿನ್‌ನಲ್ಲಿ ಅಂಕಗಳ ಮಾಹಿತಿ ತೋರಿಸುತ್ತಿಲ್ಲ. ಕಡಿಮೆ ಅಂಕ ಪಡೆದ, ಅರ್ಹತೆ ಇಲ್ಲದವರು ಹಾಗೂ ಶೇ 60 ಅಂಕಗಳನ್ನು ಪಡೆಯದೇ ಇರುವ ಅಭ್ಯರ್ಥಿಗಳು ತಮ್ಮ ಹೆಸರನ್ನೇ ಬರೆಯಲು ಬಾರದಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅಲ್ಲದೇ, ನಕಲಿ ಅಂಕ ಪಟ್ಟಿ ನೀಡಿ ನೌಕರಿ ಪಡೆಯುತ್ತಿದ್ದೇವೆ ಎಂದು ಸಿಹಿ ಹಂಚುತ್ತಿದ್ದಾರೆ ಎಂದು ನೊಂದ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಅಕ್ರಮ ನೇಮಕದ ಬಗ್ಗೆ ಶಾಸಕ ಛಲವಾದಿ ಟಿ.ನಾರಾಯಣಸ್ವಾಮಿ ಅವರು ಕೇಳಿದ ಪ್ರಶ್ನೆಗೆ ‘ಅಕ್ರಮ ನಡೆದಿಲ್ಲ. ನೇಮಕಾತಿ ಫಲಿತಾಂಶ ಅಭ್ಯರ್ಥಿಗಳ ಲಾಗಿನ್‌ನಲ್ಲಿ ಲಭ್ಯವಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವರು ಉತ್ತರ ನೀಡಿದ್ದರು. ‘ಆದರೆ, ಅಭ್ಯರ್ಥಿಗಳ ಲಾಗಿನ್‌ನಲ್ಲಿ ಮಾಹಿತಿ ತೋರಿಸುತ್ತಿಲ್ಲ. ಇದು ಮೇಲ್ನೋಟಕ್ಕೆ ಅಕ್ರಮ ನಡೆದಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸದನಕ್ಕೆ ಸಚಿವರು ತಪ್ಪು ಉತ್ತರ ನೀಡಿದ್ದಾರೆ’ ಎಂದು ಕೆಲ ಅಭ್ಯರ್ಥಿಗಳು ಆರೋಪಿಸಿದ್ದಾರೆ.

‘ನೇಮಕಾತಿಯ ನಿಯಮಗಳನ್ನು ಕಂಪನಿ ಗಾಳಿಗೆ ತೂರಿದ್ದು, ನಿಯಮ ಬಾಹಿರ ನಡೆದ ನೇಮಕಾತಿ ರದ್ದುಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT