ಗುರುವಾರ , ಅಕ್ಟೋಬರ್ 21, 2021
27 °C
ರಾಯಚೂರು ತಾಲ್ಲೂಕಿನಾದ್ಯಂತ ಸುರಿದ ಭಾರಿಮಳೆ

ಸಂಕಷ್ಟದಲ್ಲಿ 300 ಕ್ಕೂ ಹೆಚ್ಚು ಕುಟುಂಬಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಶುಕ್ರವಾರ ರಾತ್ರಿಯಿಡೀ ಸುರಿದ ಮಳೆರಾಯನ ಆರ್ಭಟಕ್ಕೆ ರಾಯಚೂರು ನಗರದ ರಾಜಕಾಲುವೆ ಹಾಗೂ ಚರಂಡಿ ಸಮಸ್ಯೆಗಳು ಬಾಯಿ ತೆರೆದುಕೊಂಡಿವೆ. ಸರಾಗವಾಗಿ ಹರಿದುಹೋಗಬೇಕಿದ್ದ ಮಳೆನೀರು ಬಡಾವಣೆಗಳಿಗೆ ನುಗ್ಗಿದ್ದರಿಂದ 300 ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಸಿಯಾತಾಲಾಬ್‌, ಬಂದರ್‌ಗಲ್ಲಿ, ಸುಖಾಣಿ ಕಾಲೋನಿ, ಎಲ್‌ಬಿಎಸ್‌ ನಗರ ಸೇರಿದಂತೆ ಕೊಳೆಗೇರಿ ಪ್ರದೇಶಗಳಲ್ಲಿ ಜನಜೀವನವು ಅಸ್ತವ್ಯಸ್ತವಾಗಿದೆ. ರಾಜಕಾಲುವೆಯಲ್ಲಿ ಸರಾಗವಾಗಿ ಮಳೆನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಬೇಕಿದ್ದ ನಗರಸಭೆ ನಿರ್ಲಕ್ಷ್ಯ ವಹಿಸಿದ್ದರಿಂದ ಪ್ರತಿವರ್ಷವೂ ಸಮಸ್ಯೆ ಮರುಕಳಿಸುತ್ತಿದೆ.

ಮಧ್ಯರಾತ್ರಿಯಲ್ಲೇ ಮಳೆನೀರು ನುಗ್ಗಿದ್ದರಿಂದ ಆತಂಕಕ್ಕೊಳಗಾದ ಜನರು ನಿದ್ರೆಯಿಲ್ಲದೆ ಕಾಲ ಕಳೆಯುವಂತಾಯಿತು. ಎರಡರಿಂದ ಮೂರು ಅಡಿಗಳಷ್ಟು ನೀರಿನಲ್ಲೇ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರು ಸಂಕಷ್ಟ ಅನುಭವಿಸಿದ್ದಾರೆ. ಮನೆ ಹೊರಗೂ ನೀರು, ಒಳಗಡೆಯೂ ನೀರು ತುಂಬಿಕೊಂಡಿದ್ದರಿಂದ ಎಲ್ಲಿಯೂ ಸುರಕ್ಷಿತ ಜಾಗವಿಲ್ಲದೆ ತೊಂದರೆ ಅನುಭವಿಸಿದ ಪ್ರಸಂಗ ನಡೆದಿದೆ.

ಶನಿವಾರ ಬೆಳಗಿನ ಜಾವ ಮಳೆ ಸ್ಥಗಿತವಾಗಿತ್ತು. ಆದರೆ ಮನೆಯಿಂದ ನೀರು ಹೊರಗೆ ಹಾಕುವುದಕ್ಕೆ ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಕುಡಿಯುವುದಕ್ಕೆ ನೀರು, ಆಹಾರವಿಲ್ಲದೆ ಮಧ್ಯಾಹ್ನದವರೆಗೂ ತೊಂದರೆ ಅನುಭವಿಸುತ್ತಿರುವುದು ಕಂಡುಬಂತು. ಸಮಸ್ಯೆಗಳನ್ನು ಆಲಿಸುವುದಕ್ಕೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿದರು. ಕಳೆದ ವರ್ಷವೂ ಇದೇ ಸಾಮಾಧಾನದ ಮಾತುಗಳನ್ನು ಕೇಳಿದ್ದ ಜನರು, ಒಳಗೊಳಗೆ ಹಿಡಿಶಾಪ ಹಾಕಿದರು.

‘ಈ ಪ್ರದೇಶದಲ್ಲಿ ಸಮಸ್ಯೆ ಏನಿದೆ ಎಂಬುದು ಮೊದಲೇ ಗೊತ್ತಿದೆ. ಇದಕ್ಕೆ ಪರಿಹಾರ ಒದಗಿಸಿದ್ದರೆ ಈ ವರ್ಷ ಮಳೆನೀರು ಮನೆಗೆ ನುಗ್ಗುತ್ತಿರಲಿಲ್ಲ. ಮತ್ತೆ ಸಮಸ್ಯೆ ಕೇಳುವುದಕ್ಕೆ ಏನಿದೆ ಅದರಲ್ಲಿ. ರಾಜಕಾಲುವೆ ದೊಡ್ಡದು ಮಾಡಬೇಕು. ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವು ಮಾಡಬೇಕಿತ್ತು. ನೂರಾರು ಮಹಿಳೆಯರು, ಮಕ್ಕಳು, ವೃದ್ಧರು ತೊಂದರೆಯಲ್ಲಿ ಸಿಲುಕಿದ್ದಾರೆ. ಅನಾರೋಗ್ಯ ಪೀಡಿತರು ತುಂಬಾ ತೊಂದರೆಗೆ ಸಿಲುಕಿದ್ದಾರೆ. ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಬಡವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’ ಬಂದರ್‌ಗಲ್ಲಿಯ ವೆಂಕಟೇಶ ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.