ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಎಲ್ಲೆಡೆ ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನತೆ

Published 26 ಮಾರ್ಚ್ 2024, 15:59 IST
Last Updated 26 ಮಾರ್ಚ್ 2024, 15:59 IST
ಅಕ್ಷರ ಗಾತ್ರ

ಸಿಂಧನೂರು: ಹೋಳಿ ಹಬ್ಬದ ನಿಮಿತ್ತ ನಗರದೆಲ್ಲೆಡೆ ಬಣ್ಣದ ಓಕುಳಿಯಾಟದಲ್ಲಿ ಜನತೆ ಮಂಗಳವಾರ ಮಿಂದೆದ್ದು ಸಂಭ್ರಮಿಸಿದರು.

ಹೋಳಿ ಹುಣ್ಣಿಮೆಯ ದಿನವಾದ ಸೋಮವಾರ ರಾತ್ರಿ ನಗರದ ಲೋಕೋಪಯೋಗಿ ಇಲಾಖೆ ಕಚೇರಿಯ ಮುಂದಿನ ಆವರಣ, ದೇವರಾಜ ಅರಸು ಮಾರುಕಟ್ಟೆ, ಟಿಎಪಿಎಂಸಿಎಸ್ ಮೈದಾನ, ಹಿರೇಹಳ್ಳದ ದಂಡೆ ಮತ್ತಿತರ ಖಾಲಿ ಮೈದಾನಗಳಲ್ಲಿ ಕಾಮಣ್ಣನ ಪ್ರತಿಕೃತಿಯನ್ನು ಇಟ್ಟು ಪೂಜೆ ಸಲ್ಲಿಸಿ, ದೊಡ್ಡ ದೊಡ್ಡ ಕಟ್ಟಿಗೆಗಳನ್ನು ಸುತ್ತ ಇಟ್ಟು ಬೆಂಕಿ ಹಚ್ಚಿ ದಹಿಸಿದರು. ಅದರ ಸುತ್ತಲೂ ಬೊಬ್ಬೆ ಹೊಡೆಯುತ್ತ ‘ಕಾಮಣ್ಣ ಮಕ್ಕಳೋ...’ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಕೆಲವರು ಕಾಮಣ್ಣ ಸುಟ್ಟ ಬೂದಿಯನ್ನು ಮನೆಗೆ ತೆಗೆದುಕೊಂಡು ಹೋದ ದೃಶ್ಯ ಕಂಡುಬಂದಿತು.

ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದಲೇ ಹೋಳಿ ಹಬ್ಬದ ನಿಮಿತ್ತ ಬಣ್ಣದಾಟ ನಗರದೆಲ್ಲೆಡೆ ಆರಂಭಗೊಂಡಿತು. ಚಿಕ್ಕ ಮಕ್ಕಳು, ಯುವತಿಯರು, ಮಹಿಳೆಯರು ಮನೆಗಳ ಮುಂದೆ ಗುಲಾಲು, ಹಸಿರು ಬಣ್ಣಗಳನ್ನು ಪರಸ್ಪರ ಎರಚಿ ಸಂಭ್ರಮಿಸಿದರೆ, ಯುವಕರು ಗುಂಪು ಗುಂಪಾಗಿ ಸ್ನೇಹಿತರ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ ಮುಖ ಸೇರಿದಂತೆ ಮೈತುಂಬ ಬಣ್ಣ ಹಚ್ಚಿದರು.

ಕೆಲ ಯುವಕರು ಬಣ್ಣ ಹಚ್ಚುವ ಜೊತೆಗೆ ಬಟ್ಟೆ ಹರಿದು, ತಲೆಗೆ ಮೊಟ್ಟೆ ಹೊಡೆದು, ಕೇಕೇ, ಸಿಳ್ಳೆ ಹಾಕಿ ಸಂತಸಪಟ್ಟರು. ಸೀರೆಯನ್ನುಟ್ಟು ಮನೆಗಳಿಗೆ ತೆರಳಿ ಪಟ್ಟಿ ಕೊಡಿ, ಇಲ್ಲ ಬಣ್ಣ ಹಚ್ಚುತ್ತೀವಿ ಎಂಬ ಹಾಸ್ಯಭರಿತ ಪ್ರಸಂಗವು ನೋಡುಗರನ್ನು ಆಕರ್ಷಿಸಿತು.

ಸಿಂಧನೂರಿನ ಶರಣಬಸವೇಶ್ವರ ಕಾಲೋನಿಯಲ್ಲಿ ಮಂಗಳವಾರ ಯುವಕ ಯುವತಿಯರು ಓಕುಳಿ ಆಟವಾಡಿ ಸಂಭ್ರಮಿಸಿದರು.
ಸಿಂಧನೂರಿನ ಶರಣಬಸವೇಶ್ವರ ಕಾಲೋನಿಯಲ್ಲಿ ಮಂಗಳವಾರ ಯುವಕ ಯುವತಿಯರು ಓಕುಳಿ ಆಟವಾಡಿ ಸಂಭ್ರಮಿಸಿದರು.

ಮಧ್ಯಾಹ್ನ 2 ಗಂಟೆಯವರೆಗೆ ಯುವಕರು ಗುಂಪು ಗುಂಪಾಗಿ ನಗರದ ವಿವಿಧ ಓಣಿಗಳಲ್ಲಿ ಬೈಕ್‌ಗಳ ಸೈಲೆನ್ಸರ್ ಕಿತ್ತಿ ಸಂಚಾರ ನಡೆಸಿದರು. ನಂತರ ಮೈತೊಳೆದುಕೊಳ್ಳಲು ಹಳ್ಳ, ಕಾಲುವೆ, ಹೊಳೆಗಳತ್ತ ಸಾಗಿದರು. ಅವುಗಳಲ್ಲೂ ನೀರಿಲ್ಲದ ವಿಷಯ ತಿಳಿದು ಬಹುತೇಕರು ಮನೆಗಳಲ್ಲಿಯೇ ಮೈತೊಳೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT