ಮಂಗಳವಾರ, ಮಾರ್ಚ್ 2, 2021
29 °C

ರಾಯಚೂರು: ತಂತ್ರಜ್ಞಾನ ಬಳಸಿ ಲಾಭ ಪಡೆದ ತೋಟಗಾರಿಕೆ ರೈತರು

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಲಾಕ್‌ಡೌನ್‌ನಿಂದ ಸಂಷಕ್ಟಕ್ಕೆ ಸಿಲುಕಿದ್ದ ತೋಟಗಾರಿಕೆ ಬೆಳೆ ಬೆಳೆದಿರುವ ರೈತರನ್ನು ನಷ್ಟದಿಂದ ಪಾರು ಮಾಡುವುದಕ್ಕಾಗಿ ದೇವುಸೂಗೂರಿನ ‘ಪರಿಸರ ಪ್ರೇಮಿ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿ’ಯು ಮೊಬೈಲ್‌ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿರುವುದು ಗಮನ ಸೆಳೆಯುತ್ತಿದೆ.

ಅಕ್ಷಯ ತೃತೀಯ ನಿಮಿತ್ತ ಏಪ್ರಿಲ್‌ 26 ರಂದು ಆ್ಯಪ್‌ ಕಾರ್ಯಾರಂಭಿಸಿದ್ದು, ಶಕ್ತಿನಗರವೊಂದರಲ್ಲೇ ಇದುವರೆಗೂ 600 ಕ್ಕೂ ಹೆಚ್ಚು ಜನರು ₹500 ಮೌಲ್ಯದ ಹಣ್ಣುಗಳನ್ನು ಬುಕಿಂಗ್‌ ಮಾಡಿಕೊಂಡು ಮನೆಗಳಿಗೆ ಹಣ್ಣಿನ ಪೊಟ್ಟಣ ತಂದುಕೊಂಡಿದ್ದಾರೆ. ಶಿವಕುಮಾರ್‌ ಎನ್ನುವವರು ಈ ಮೊಬೈಲ್‌ ಅ್ಯಪ್‌ ಅಭಿವೃದ್ಧಿ ಮಾಡಿಕೊಟ್ಟಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತಿದೆ. ಕುಳಿತಲ್ಲಿಯೇ ಹಣ್ಣುಗಳನ್ನು ಮಾರಾಟ ಮಾಡುವುದಕ್ಕೆ ರೈತರ ಕಂಪೆನಿಗೆ ಸಾಧ್ಯವಾಗಿದ್ದರೆ, ಗ್ರಾಹಕರು ಮನೆಯಲ್ಲಿದ್ದುಕೊಂಡು ರಿಯಾಯ್ತಿ ದರದಲ್ಲಿ ಹಣ್ಣುಗಳನ್ನು ಖರೀದಿಸಿದ ಸಂತೃಪ್ತಿ ಮೂಡಿದೆ.

ಇದೀಗ ಲಾಕ್‌ಡೌನ್‌ ಸಡಿಲಿಕೆ ಮಾಡಿರುವುದರಿಂದ ಹಣ್ಣುಗಳ ಖರೀದಿಗಾಗಿ ಪ್ರತಿನಿತ್ಯ ಜನರು ಧಾವಿಸುತ್ತಿದ್ದಾರೆ. ಅಂತರ ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಕಂಪೆನಿಯಿಂದ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಆನ್‌ಲೈನ್‌ ಬುಕಿಂಗ್‌ ಪಡೆದುಕೊಂಡು ಪ್ರತಿ ಬುಧವಾರ ಮತ್ತು ಭಾನುವಾರ ‘ಹೋಂ ಡೆಲಿವರಿ’ ಕೂಡಾ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಯಚೂರು ನಗರಕ್ಕೂ ಬುಕಿಂಗ್‌ ವಿಸ್ತರಿಸುವ ಯೋಜನೆಯನ್ನು ಕಂಪೆನಿ ಹೊಂದಿದೆ.

ರೈತರಿಂದ ಹಣ್ಣುಗಳನ್ನು ಖರೀದಿಸಿ, ಗ್ರಾಹಕರಿಗೆ ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸದ್ಯಕ್ಕೆ ₹50 ಕ್ಕೆ ಒಂದು ಕೆಜಿ ಅಂಜೂರ, ₹60 ಕ್ಕೆ ಒಂದು ಕೆಜಿ ಮಾವು, ₹50 ಕ್ಕೆ ಒಂದು ಕೆಜಿ ದ್ರಾಕ್ಷಿ, ₹30ಕ್ಕೆ ಒಂದು ಕೆಜಿ ಮೊಸಂಬಿ ಹಾಗೂ ₹15ಕ್ಕೆ ಒಂದು ಕೆಜಿ ಕಲ್ಲಂಗಡಿ ಹಣ್ಣು ಮಾರಾಟ ಆಗುತ್ತಿದೆ. ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಸಂಚಾರಿ ವಾಹನದಲ್ಲಿ ತರಕಾರಿ ಮಾರಾಟ ಕೂಡಾ ನಡೆಯುತ್ತಿದೆ. ಇದಕ್ಕಾಗಿ ದೇವಸುಗೂರು ಹೋಬಳಿಯಲ್ಲಿ ಐದು ಸಂಚಾರಿ ವಾಹನಗಳು ಕಾರ್ಯನಿರತವಾಗಿವೆ.

‘ಹಣ್ಣುಗಳನ್ನು ಬೆಳೆದಿರುವ ರೈತರು ನಷ್ಟ ಅನುಭವಿಸಬಾರದು ಎನ್ನುವ ಉದ್ದೇಶ ಕಂಪೆನಿಯದ್ದು. ಲಾಕ್‌ಡೌನ್‌ ಸಮಯದಲ್ಲಿ ಮೊಬೈಲ್ ನೆರವಿಗೆ ಬಂದಿದ್ದು, ವೇಗವಾಗಿ ಹಣ್ಣುಗಳ ಮಾರಾಟ ಮಾಡುವುದಕ್ಕೆ ಸಾಧ್ಯವಾಗಿದೆ’ ಎಂದು ಕಂಪೆನಿಯ ಅಧ್ಯಕ್ಷ ಸರ್ವೆಶ ರಾಯ್ಡು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರಿಸರ ಪ್ರೇಮಿ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿಯಲ್ಲಿ ದೇವಸುಗೂರು ಮತ್ತು ಚಂದ್ರಬಂಡಾ ಹೋಬಳಿಯ 1,011 ರೈತರು ಸದಸ್ಯರಿದ್ದಾರೆ. ಅವರು ಬೆಳೆಯುವ ಹಣ್ಣುಗಳನ್ನು ಕಂಪೆನಿ ಮೂಲಕ ಮಾರಾಟ ಮಾಡುತ್ತಿದ್ದು, ಇಡೀ ರಾಜ್ಯಕ್ಕೆ ಇದು ಮಾದರಿಯಾಗಿದೆ’ ಎಂದು ರಾಯಚೂರು ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹೇಶ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು