ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ದಂಧೆಗೆ ಕುಮ್ಮಕ್ಕು: ಪ್ರಭುರಾಜ ಕೊಡ್ಲಿ ಆರೋಪ

ಆರೋಪಿಗಳ ಅಣಕು ಶವಯಾತ್ರೆಗೆ ನಿರ್ಧಾರ
Last Updated 31 ಮಾರ್ಚ್ 2022, 12:32 IST
ಅಕ್ಷರ ಗಾತ್ರ

ಮಾನ್ವಿ:‘ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಮರಳು ಸಂಗ್ರಹಣೆ ಮಾಡಿದ್ದ ಆರೋಪಿಗಳು ಹಾಗೂ ಅಧಿಕಾರಿಗಳ ಶವಯಾತ್ರೆ ಮಾಡಲು ನಿರ್ಧರಿಸಲಾಗಿದೆ’ ಎಂದು ಜನಶಕ್ತಿ ಕೇಂದ್ರ ಸಂಘಟನೆಯ ಸಂಚಾಲಕ ಪ್ರಭುರಾಜ ಕೊಡ್ಲಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾರ್ಚ್ 24ರಂದು ಚೀಕಲಪರ್ವಿ ಗ್ರಾಮದಲ್ಲಿ ಸರ್ವೆ ನಂ.23ರ ಜಮೀನಿನಲ್ಲಿ ಅನಧಿಕೃತವಾಗಿ ಅಪಾರ ಪ್ರಮಾಣದ ಮರಳು ಸಂಗ್ರಹ ಮಾಡಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಘಟನೆ ವತಿಯಿಂದ ಧರಣಿ ನಡೆಸಲಾಗಿತ್ತು.

ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಅಕ್ರಮವಾಗಿ ಮರಳು ಸಂಗ್ರಹಿಸಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಈ ಅಕ್ರಮದ ಕುರಿತು ತಹಶೀಲ್ದಾರ್ ಅವರು ಸಂಬಂಧಿಸಿದ ಮೇಲಧಿಕಾರಿಗಳಿಗೆ ನೈಜ ವರದಿ ನೀಡಿದ್ದರು. ಆದರೆ ಅಕ್ರಮವಾಗಿ ಮರಳು ಸಂಗ್ರಹಿಸಿದ್ದ ಜಮೀನಿನ ಮಾಲೀಕ ವೀರೇಶಪ್ಪ ಹಾಗೂ ಈ ಅಕ್ರಮ ಮರಳನ್ನು ರಾತ್ರೋರಾತ್ರಿ ಬೇರೆಡೆಗೆ ಸಾಗಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಎಂ.ವಿಶ್ವನಾಥ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.

‘ಏಪ್ರಿಲ್ 16ರಂದು ಈ ಅಕ್ರಮ ಮರಳು ಸಾಗಣೆ ದಂಧೆಯಲ್ಲಿ ಭಾಗಿಯಾದ ತಪ್ಪಿತಸ್ಥರು, ಮರಳು ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಶವಯಾತ್ರೆ ಮಾಡಿ ಪ್ರತಿಭಟಿಸಲಾಗುವುದು. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.

ಜನಶಕ್ತಿ ಕೇಂದ್ರದ ಇತರ ಪದಾಧಿಕಾರಿಗಳಾದ ಅಬ್ರಾಹಂ ಪನ್ನೂರು, ಈಶಪ್ಪ ಸಂಗಾಪುರ, ರಾಮಣ್ಣ ಸಂಗಾಪುರ, ಬುಡ್ಡಪ್ಪ ಹಿರೇಕೊಟ್ನೇಕಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT