ಗುರುವಾರ , ಮಾರ್ಚ್ 30, 2023
22 °C
ಕುಡಿಯುವ ನೀರು, ರಸ್ತೆ, ವಿದ್ಯುತ್, ಅಂಗನವಾಡಿ ಕೇಂದ್ರದ ಸೌಲಭ್ಯವಿಲ್ಲ

ಹಟ್ಟಿ ಚಿನ್ನದಗಣಿ: ಮೂಲಸೌಕರ್ಯ ವಂಚಿತ ಏಳು ಮಡಿಕೆ ದೊಡ್ಡಿ

ಅಮರೇಶ ನಾಯಕ Updated:

ಅಕ್ಷರ ಗಾತ್ರ : | |

Prajavani

ಹಟ್ಟಿ ಚಿನ್ನದಗಣಿ: ರಸ್ತೆ, ಕುಡಿಯುವ ನೀರು, ವಿದ್ಯುತ್, ಶಾಲೆ, ವಸತಿ ಮನೆ ಸೇರಿದಂತೆ ಯಾವ ಮೂಲಸೌಲಭ್ಯಗಳೂ ಇಲ್ಲದೆ ಜೀವನ ಸಾಗಿಸುತ್ತಿರುವ ಇಲ್ಲಿನ ಏಳು ಮಡಿಕೆ ದೊಡ್ಡಿ ಜನರ ಅಳಲನ್ನು ಯಾರೂ ಆಲಿಸುತ್ತಿಲ್ಲ!

ಪೈಡೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಜಂತಿ ಸಮೀಪದ ಏಳು ಮಡಿಕೆ ದೊಡ್ಡಿ ಜನರು ಸಂಕಷ್ಟದ ಜೀವನ ನಡೆಸುತ್ತಿದ್ದರೂ ಇಲ್ಲಿನ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳು ಅವರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ.

‘ರಸ್ತೆ, ಕುಡಿಯುವ ನೀರು, ವಿದ್ಯುತ್ ಸಾರಿಗೆ ಸೇರಿದಂತೆ ಇತರೆ ಯಾವ ಸೌಲಭ್ಯಗಳು ಇಂದಿಗೂ ಇಲ್ಲಿನ ಜನರಿಗೆ ದೊರೆತಿಲ್ಲ‘ ಎನ್ನುತ್ತಾರೆ ದೊಡ್ಡಿಯ ನಿವಾಸಿಗಳಾದ ಅಮರಯ್ಯ, ಶಿವಣ್ಣ, ಹನುಮಂತಿ ಅವರು.

‘ಏಳು ಮಡಿಕೆ ದೊಡ್ಡಿಯಲ್ಲಿ 25 ರಿಂದ 35 ಮನೆಗಳಿದ್ದು, 200 ಅಧಿಕ ಜನರು ವಾಸ ಮಾಡುತ್ತಿದ್ದಾರೆ. ಅಗತ್ಯ ರಸ್ತೆ ಇಲ್ಲದೆ, ಗುಡ್ಡಗಾಡಿನಲ್ಲಿ ಇಂದಿಗೂ ಕಾಲು ನಡುಗೆಯಲ್ಲಿ ನಡೆದುಕೊಂಡು ಯರಜಂತಿ ಗ್ರಾಮಕ್ಕೆ ಬರಬೇಕು. ರಸ್ತೆ ನಿರ್ಮಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ರಸ್ತೆ ನಿರ್ಮಿಸುತ್ತಿಲ್ಲ‘ ಎಂದು ಗ್ರಾಮಸ್ಧರು ಆರೋಪ ಮಾಡುತ್ತಾರೆ.

‘ಇಲ್ಲಿನ ದೊಡ್ಡಿ ಜನರು ಹಳ್ಳದಲ್ಲಿ ಗುಂಡಿ ಅಗೆದು ಅದರಲ್ಲಿ ಬರುವ ಕಲುಷಿತ ನೀರು ಕುಡಿಯುತ್ತಾರೆ. ಕೆಲವರು ಕಲುಷಿತ ನೀರು ಕುಡಿದು ಪರಿಣಾಮ ಸಾಂಕ್ರಾಮಿಕ ರೋಗಗಳು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಸಮರ್ಪಕವಾದ ರಸ್ತೆ ಇಲ್ಲದೆ ಪರದಾಡುವ ಸ್ಧಿತಿ ಇದೆ‘ ಎಂದು ಅವರು ಅಳಲು ತೋಡಿಕೊಂಡರು.

ದೊಡ್ಡಿಯಲ್ಲಿ 30 ಮಕ್ಕಳಿದ್ದಾರೆ. ಅಂಗನವಾಡಿ ಕೇಂದ್ರ, ಶಾಲೆ ಇಲ್ಲ. ಗರ್ಭಿಣಿಯರಿಗೆ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಚುಚುಮದ್ದುಗಳು ಸಿಗುತ್ತಿಲ್ಲ. ಶಿಶು ಅಭಿವೃದ್ಧಿ ಇಲಾಖೆ, ಶಿಕ್ಷಣ ಆರೋಗ್ಯ ಪಶುಪಾಲನೆ, ಮಹಿಳೆಯರ ಪೋಷಣೆಗಳಿಗೆ ಸೌಕರ್ಯಗಳು ಸಿಕಿಲ್ಲವೆಂದು ದೂರುತ್ತಾರೆ.

ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿ ಬದುಕು ಸಾಗಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಧರು ದೂರುತ್ತಾರೆ.

**

ಏಳು ಮಡಿಕೆ ದೊಡ್ಡಿಯಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು.
ಲಕ್ಷ್ಮಿದೇವಿ ತಾ.ಪಂ ಇ.ಒ ಲಿಂಗಸಗೂರು.

ಏಳು ಮಡಿಕೆ ದೊಡ್ಡಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ, ಮೂಲಸೌಕರ್ಯ ಒದಗಿಸಿಕೊಡಬೇಕು
ತಿಮ್ಮಯ್ಯ , ಏಳು ಮಡಿಕೆ ದೊಡ್ಡಿ ನಿವಾಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು