ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌: ರಾಯಚೂರಿಗೆ ಅನ್ಯಾಯ

Published 11 ಮಾರ್ಚ್ 2024, 5:59 IST
Last Updated 11 ಮಾರ್ಚ್ 2024, 5:59 IST
ಅಕ್ಷರ ಗಾತ್ರ

ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರಾಯಚೂರು ಜಿಲ್ಲೆಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಕೇಂದ್ರದಲ್ಲಿ ಸಂಸದರು ಹಾಗೂ ರಾಜ್ಯದಲ್ಲಿ ಜಿಲ್ಲೆಯ ಶಾಸಕರು ಸರ್ಕಾರಗಳಿಗೆ ಸರಿಯಾಗಿ ಮನವರಿಕೆ ಮಾಡುವಲ್ಲಿ ವಿಫಲವಾಗಿರುವ ಕಾರಣ ಹಲವು ಯೋಜನೆಗಳು ರಾಯಚೂರಿಗೆ ಕೈತಪ್ಪುತ್ತಿವೆ.

ಸಂಸದರು ಹಾಗೂ ಶಾಸಕರು ಸಂಸತ್ತು ಹಾಗೂ ವಿಧಾನಸಭೆಯಲ್ಲಿ ಜಿಲ್ಲೆಯನ್ನು ಸರಿಯಾಗಿ ‍ಪ್ರತಿನಿಧಿಸುತ್ತಿಲ್ಲ. ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಅಧಿಕಾರಿಗಳು ಸಹ ಹವಾನಿಯಂತ್ರಿತ ಕೊಠಡಿಗಳಿಂದ ಹೊರಬಂದು ಸರಿಯಾಗಿ ಸಮೀಕ್ಷೆ ನಡೆಸುತ್ತಿಲ್ಲ. ದೆಹಲಿ ಹಾಗೂ ಬೆಂಗಳೂರಿನ ಕಚೇರಿಗಳಲ್ಲೇ ಅಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಿರುವ ಕಾರಣ ಜಿಲ್ಲೆಗೆ ಅನ್ಯಾಯವಾಗುತ್ತಿದೆ.

ಜಿಲ್ಲೆಯ ಉದ್ಯಮಿಗಳು, ಸಂಘ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತ ಬಂದರೂ ಸರ್ಕಾರ ರಾಯಚೂರು ಜಿಲ್ಲೆಯ ವಿಷಯದಲ್ಲಿ ಮಾತ್ರ ಗಂಭೀರವಾಗಿಲ್ಲ. ಬಂಡವಾಳ ಹೂಡಿಕೆಗೆ ಅವಕಾಶಗಳಿದ್ದರೂ ಸರ್ಕಾರಗಳು ಅದಕ್ಕೆ ದಾರಿ ಮಾಡಿಕೊಡುತ್ತಿಲ್ಲ. ಸರ್ಕಾರದ ತಪ್ಪು ನಿರ್ಧಾರದಿಂದಾಗಿಯೇ ಜನ ಸಾಮಾನ್ಯರು, ಕಾರ್ಮಿಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ದಶಕದ ಸಮಸ್ಯೆಗಳಿಗೂ ಮುಕ್ತಿ ದೊರಕಿಲ್ಲ.

ಮೆಗಾ ಟೆಕ್ಸ್‌ಟೈಲ್‌ ಪಾರ್ಕ್

2022ರಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಒಟ್ಟು 7 ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆ ಮಾಡಲು ತೀರ್ಮಾನಿಸಿದೆ. ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ–ಪಂಜಾಬ್, ತೆಲಂಗಾಣ, ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಮೆಗಾ ಟೆಕ್ಸ್‌ಟೈಲ್‌ ಸ್ಥಾಪನೆ ಉದ್ದೇಶವಿದೆ. ಬೇರೆ ರಾಜ್ಯಗಳಲ್ಲಿ ಸರಿಯಾದ ಜಾಗ ಆಯ್ಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಮಾತ್ರ ಸ್ಥಳ ಆಯ್ಕೆ ಮಾಡುವಲ್ಲೇ ಎಡವಿದೆ.

ರಾಯಚೂರು ಜಿಲ್ಲೆಯಲ್ಲಿ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗೆ ಪೂರಕ ವಾತಾವರಣ ಇದೆ. ಸರ್ಕಾರ ಹೆಚ್ಚು ಬಂಡವಾಳ ತೊಡಗಿಸುವ ಅಗತ್ಯವೂ ಇಲ್ಲ. ಮೂಲಸೌಕರ್ಯ ಒದಗಿಸಿದರೂ ಸಾಕು ಜವಳಿ ಉದ್ಯಮ ಕೋಟ್ಯಂತರ ರೂಪಾಯಿ ವಹಿವಾಟು ಮಾಡಲು ಸಾಧ್ಯವಾಗಲಿದೆ.

ಸಾಧಕ ಬಾಧಕಗಳನ್ನು ಪರಿಶೀಲನೆ ನಡೆಸದೇ ಕೇಂದ್ರ ಸರ್ಕಾರ ಕಲಬುರಗಿಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆ ಮಾಡಲು ತೀರ್ಮಾನಿಸಿದೆ. ರಾಜಕೀಯ ಕಾರಣಕ್ಕೆ ಕಲಬುರಗಿಯಲ್ಲಿ ಪಾರ್ಕ್‌ ನಿರ್ಮಾಣವಾದರೆ ಯೋಜನೆ ವಿಫಲವಾಗಲಿದೆ. ಜನರ ತೆರಿಗೆ ಹಣ ಸಹ ಪೋಲಾಗಲಿದೆ. ಹತ್ತಿ ಬೆಳೆಗಾರರ ಮೇಲೆ ಇನ್ನಷ್ಟು ಹೊರೆಯಾಗಲಿದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜಕೀಯ ವೈಫಲ್ಯ

ಜಿಲ್ಲೆಯ ರಾಜಕೀಯ ನಾಯಕರು ಮೊದಲು ಜಿಲ್ಲೆಯನ್ನು ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಳಕೆ ಹಾಗೂ ಅಭಿವೃದ್ಧಿಯ ಆಸಕ್ತಿ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಜಿಲ್ಲೆ ಅಭಿವೃದ್ಧಿ ಕಾಣುವುದು ಅಸಾಧ್ಯ ಎಂದು ಜಿನ್ನಿಂಗ್‌ ಫ್ಯಾಕ್ಟರಿಗಳ ಮಾಲೀಕರೇ ಹೇಳುತ್ತಾರೆ. ಆದರೆ ಸಂಸದರು ಲೋಕಸಭೆಯಲ್ಲಿ ಈ ವಿಷಯವಾಗಿ ಒಮ್ಮೆಯೂ ಪ್ರಸ್ತಾಪ ಮಾಡಿಲ್ಲ ಎನ್ನುವ ದೂರು ಸಹ ಇದೆ.

ರಾಯಚೂರಿನಲ್ಲಿ ವಿದ್ಯುತ್, ನೀರು, ಉತ್ತಮ ಸಾರಿಗೆ ಸಂಪರ್ಕ, ರೈಲು ಮಾರ್ಗ ಹಾಗೂ ಫಲವತ್ತಾದ ಭೂಮಿ ಇದ್ದರೂ ಕೇಂದ್ರ ಸರ್ಕಾರ ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗೆ ಮಂಜೂರಾತಿ ನೀಡಿದೆ. ಅಲ್ಲಿ ಸಿಮೆಂಟ್‌ ಕಾರ್ಖಾನೆಗಳು ಇರುವುದರಿಂದ ಜಿನ್ನಿಂಗ್‌ ಫ್ಯಾಕ್ಟರಿ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಬಂಡವಾಳ ಹೂಡುವವರು ಹಿಂದೇಟು ಹಾಕಲಿದ್ದಾರೆ ಎಂದು ಮಿಲ್‌ ಮಾಲೀಕರು ಹೇಳುತ್ತಾರೆ.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿ ಸಮಿತಿಯೊಂದನ್ನು ರಚಿಸಿ ಸಾಧಕ ಬಾಧಕಗಳ ಅಧ್ಯಯನ ಮಾಡಿದ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎನ್ನುವುದು ಜಿನ್ನಿಂಗ್‌ ಮಿಲ್‌ ಮಾಲೀಕರ ಮನವಿಯಾಗಿದೆ.

‘ಕಲಬುರಗಿಯಲ್ಲಿ ಒಂದು ಸಾವಿರ ಎಕರೆ ಜಾಗ ಕೊಡಲು ಒಪ್ಪಿಕೊಳ್ಳಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಅಷ್ಟುದೊಡ್ಡದಾದ ಜಾಗ ಲಭ್ಯವಿಲ್ಲ. ಹೀಗಾಗಿ ಸಹಜವಾಗಿಯೇ ಕೇಂದ್ರ ಸರ್ಕಾರ ಕಲಬುರಗಿಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗೆ ಮುಂದಾಗಿದೆ’ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಸಮರ್ಥಿಸಿಕೊಳ್ಳುತ್ತಾರೆ.

‘ಮಾನ್ವಿ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರತಿ ವರ್ಷ ಸುಮಾರು 25 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಹತ್ತಿ ಬೆಳೆಯಲಾಗುತ್ತದೆ. ರಾಯಚೂರಿನಲ್ಲಿ ಜವಳಿ ಪಾರ್ಕ್ ಸ್ಥಾಪನೆಯಿಂದ ಹತ್ತಿ ಬೆಳೆಯಲು ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಮಾನ್ವಿ ಸೇರಿದಂತೆ ಜಿಲ್ಲೆಯ ಇತರ ತಾಲ್ಲೂಕಿನ ಹತ್ತಿ ಬೆಳೆಗಾರರಿಗೆ ಸಾಗಾಣಿಕೆ ವೆಚ್ಚ ಕಡಿಮೆಯಾಗುತ್ತದೆ. ಉತ್ತಮ ಬೆಲೆ ದೊರೆತು ರೈತರಿಗೆ ಆದಾಯ ಹೆಚ್ಚಾಗಬಹುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಿ.ಲಿಂಗಾರೆಡ್ಡಿ ಪಾಟೀಲ ಹೇಳುತ್ತಾರೆ.

ರಾಯಚೂರಲ್ಲಿ ಇರುವ ಸೌಲಭ್ಯಗಳು

ರಾಯಚೂರಲ್ಲಿ 65 ಜಿನ್ನಿಂಗ್ ಪ್ರೆಸಿಂಗ್‌ ಮಿಲ್‌ಗಳು ಇವೆ. ಜಿಲ್ಲೆಯಲ್ಲಿ ಒಟ್ಟು 118 ಫ್ಯಾಕ್ಟರಿಗಳಿರುವುದರಿಂದ 10 ಲಕ್ಷ ವರೆಗೆ ಹತ್ತಿ ಬೇಲ್‌ಗಳನ್ನು ತಯಾರಿಸಲಾಗುತ್ತಿದೆ. ವರ್ಷದಲ್ಲಿ ಒಟ್ಟು 14 ಲಕ್ಷ ಬೇಲ್‌ಗಳನ್ನು ಸಿದ್ಧಪಡಿಸಲಾಗುತ್ತದೆ.

ಜಿಲ್ಲೆಯಲ್ಲಿ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆ ಮಾಡಿದರೆ ಸಾಗಣೆ ವೆಚ್ಚ ಕಡಿಮೆಯಾಗಲಿದೆ. ರೈತರ ಹತ್ತಿಗೂ ಉತ್ತಮ ಬೆಲೆ ಕೊಡಬಹುದು. ಜಿಲ್ಲೆಯಲ್ಲಿ ಪರಿಸರ ಮಾಲಿನ್ಯವಿಲ್ಲ. ಉತ್ಕೃಷ್ಟವಾದ ಬೇಲ್‌ಗಳನ್ನು ತಯಾರಿಸಬಹುದು. ಅಲ್ಲದೇ 15 ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಅನುಕೂಲವಾಗಲಿದೆ.

‘ವ್ಯಾಪಾರ ವಹಿವಾಟು, ವಿದ್ಯುತ್, ಸಾರಿಗೆ ಸಂಪರ್ಕ, ಹತ್ತಿ ಉತ್ಪಾದನೆ ಸೇರಿದಂತೆ ಎಲ್ಲ ರೀತಿಯಿಂದಲೂ ಅನುಕೂಲವಿರುವ ರಾಯಚೂರಲ್ಲೇ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆ ಮಾಡಬೇಕು’ ಎಂದು ರಾಯಚೂರು ಕಾಟನ್‌ ಮಿಲ್ಲರ್ಸ್‌ ಅಸೋಸಿಯೇಷನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಒತ್ತಾಯಿಸುತ್ತಾರೆ.

ರಾಯಚೂರಿನ ಕಾಟನ್‌ ಮಾರ್ಕೆಟ್‌ನಲ್ಲಿ ಲಾರಿಯಲ್ಲಿ ತಂದ ಹತ್ತಿ ಅಂಡಿಗೆಗಳನ್ನು ಇಳಿಸುತ್ತಿರುವುದು
ರಾಯಚೂರಿನ ಕಾಟನ್‌ ಮಾರ್ಕೆಟ್‌ನಲ್ಲಿ ಲಾರಿಯಲ್ಲಿ ತಂದ ಹತ್ತಿ ಅಂಡಿಗೆಗಳನ್ನು ಇಳಿಸುತ್ತಿರುವುದು
ರಾಯಚೂರಿನ ಕಾಟನ್‌ ಮಾರ್ಕೆಟ್‌ನಲ್ಲಿ ಹತ್ತಿ ತೆಗೆದುಕೊಂಡು ಬಂದ ಗೂಡ್ಸ್‌ವಾಹನಗಳು ಸರತಿ ಸಾಲಿನಲ್ಲಿ ನಿಂತಿವೆ
ರಾಯಚೂರಿನ ಕಾಟನ್‌ ಮಾರ್ಕೆಟ್‌ನಲ್ಲಿ ಹತ್ತಿ ತೆಗೆದುಕೊಂಡು ಬಂದ ಗೂಡ್ಸ್‌ವಾಹನಗಳು ಸರತಿ ಸಾಲಿನಲ್ಲಿ ನಿಂತಿವೆ
ರಾಯಚೂರಿನ ಕಾಟನ್‌ ಮಾರ್ಕೆಟ್‌ನಲ್ಲಿ ಸಂಗ್ರಹಿಸಲಾದ ಹತ್ತಿ
ರಾಯಚೂರಿನ ಕಾಟನ್‌ ಮಾರ್ಕೆಟ್‌ನಲ್ಲಿ ಸಂಗ್ರಹಿಸಲಾದ ಹತ್ತಿ
ರಾಯಚೂರು ಹತ್ತಿ ಮಾರುಕಟ್ಟೆಗೆ ವಾಹನದಲ್ಲಿ ರೈತರು ತೆಗೆದುಕೊಂಡು ಬಂದಿರುವ ಹತ್ತಿಯನ್ನು ವರ್ತಕರು ಪರೀಕ್ಷಿಸುತ್ತಿರುವುದು
ರಾಯಚೂರು ಹತ್ತಿ ಮಾರುಕಟ್ಟೆಗೆ ವಾಹನದಲ್ಲಿ ರೈತರು ತೆಗೆದುಕೊಂಡು ಬಂದಿರುವ ಹತ್ತಿಯನ್ನು ವರ್ತಕರು ಪರೀಕ್ಷಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT