ಗುರುವಾರ , ಡಿಸೆಂಬರ್ 3, 2020
20 °C

ರಾಯಚೂರು: ಉಪನ್ಯಾಸಕರಿಗೆ ನೇಮಕಾತಿ ಆದೇಶ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಪದವಿ ಪೂರ್ವ ಕಾಲೇಜುಗಳ ಖಾಲಿ ಇರುವ ಉಪನ್ಯಾಸಕ ಹುದ್ದೆಗಳ ನೇಮಕಾತಿ ನಡೆದಿದ್ದು, ಕೂಡಲೇ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕ  ರಜಾಕ್ ಉಸ್ತಾದ್ ಒತ್ತಾಯಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ಹುದ್ದೆಗಳಿಗೆ 2015ರಿಂದ 1206 ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡು ಬರುತ್ತಿದೆ. ಈ ಪ್ರಕ್ರಿಯೆ ಐದು ವರ್ಷಗಳಾದರೂ ಪೂರ್ಣಗೊಂಡಿಲ್ಲ.

1206 ಉಪನ್ಯಾಸಕ ಹುದ್ದೆಗಳಲ್ಲಿ 594 ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು 371(ಜೆ)ಯಡಿ ಮೇರಿಟ್ ಆಧಾರದ ಮೇಲೆ 98 ಹುದ್ದೆಗಳು ಹಾಗೂ ಉಳಿದ ವೃಂದದಲ್ಲಿ ಆಯ್ಕೆಯಾಗಿದ್ದಾರೆ. ಉಳಿದ ವೃಂದದ ಹುದ್ದೆಗಳಿಗೆ ಆಯ್ಕೆಯಾದ ಕ.ಕ ಭಾಗದ ಅಭ್ಯರ್ಥಿಗಳ ವಿರುದ್ದ ಇನ್ನಿತರೆ ಪ್ರದೇಶದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯಲ್ಲಿ ದೂರು ದಾಖಲಿಸಿ ತಡೆಯಾಜ್ಞೆ ಪಡೆಯಲಾಗಿತ್ತು ಎಂದು ಹೇಳಿದರು.

ನ್ಯಾಯಮಂಡಳಿ ನೀಡಿದ ತಡೆಯಾಜ್ಞೆ ತೆರುವುಗೊಳಿಸಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ಮೆರಿಟ್ ಆಧಾರದಲ್ಲಿ ಮಿಕ್ಕುಳಿದ ವೃಂದದಲ್ಲಿ ಆಯ್ಕೆಯಾಗಬಹುದು ಎಂದು ಆದೇಶಿಸಿದೆ. ಆದರೆ, ಸರ್ಕಾರ ಶೀಘ್ರವಾಗಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ನೇಮಕಾತಿ ಆದೇಶ ನೀಡಿದರೆ, ಪ್ರಕ್ರಿಯೆ ಪೂರ್ಣವಾಗುತ್ತಿತ್ತು ಎಂದರು.

ಸರ್ಕಾರದ ವಿಳಂಬ ನೀತಿಯಿಂದ ಇತರ ಪ್ರದೇಶದ ಅಭ್ಯರ್ಥಿಗಳು ಕ.ಕ ಪ್ರದೇಶದ ಅಭ್ಯರ್ಥಿಗಳ ವಿರುದ್ಧ ಹೈಕೋರ್ಟ್‍ನಲ್ಲಿ ದೂರು ಸಲ್ಲಿಸಿದ್ದಾರೆ. ನ್ಯಾಯಾಲಯವು ಇಡೀ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದರೆ ಈ ಭಾಗದ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂಥಹ ಪ್ರಕರಣದಲ್ಲಿ ನ್ಯಾಯಾಲಯವು ಪದವಿ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಕ.ಕ ಭಾಗದ ಅಭ್ಯರ್ಥಿಗಳ ಮೆರಿಟ್ ಆಧಾರದಲ್ಲಿ ಉಳಿದ ವೃಂದದಲ್ಲಿ ಆಯ್ಕೆಯಾಗಿರುವದು ಸರಿಯಾಗಿದೆ ಎಂದು ತಿಳಿಸಿದೆ ಎಂದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ನಿರ್ಲಕ್ಷ್ಯತನದಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಆತಂಕ ಎದುರಾಗಿದ್ದು ಈಗಾಗಲೇ ಜುಲೈ- ಆಗಸ್ಟ್ ತಿಂಗಳಲ್ಲಿ ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ಪ್ರಕ್ರಿಯೆ ಕೈಗೊಂಡಿರುವ ಸರ್ಕಾರ ನೇಮಕಾತಿ ಆದೇಶ ನೀಡಿದೇ ಆರ್ಥಿಕದ ನೆಪ ಹೇಳಿ ಮುಂದೂಡುತ್ತಿದೆ ಎಂದು ದೂರಿದರು.

ವಿಳಂಬ ಮಾಡದೇ ಕೂಡಲೇ ಕ.ಕ ಪ್ರದೇಶದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.ಎಸ್.ಶಿವಕುಮಾರ ಯಾದವ ಮಹಮ್ಮದ್ ರಫೀಕ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.