ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಜಡಿಶಂಕರಲಿಂಗ ದೇವಸ್ಥಾನ ಉದ್ಘಾಟನೆ ಇಂದು

ಐತಿಹಾಸಿಕ ನವಲಿ ಜಡಿಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಭಾಗಶಃ ಪೂರ್ಣ
ಬಿ.ಎ. ನಂದಿಕೋಲಮಠ
Published 19 ಫೆಬ್ರುವರಿ 2024, 6:12 IST
Last Updated 19 ಫೆಬ್ರುವರಿ 2024, 6:12 IST
ಅಕ್ಷರ ಗಾತ್ರ

ಲಿಂಗಸುಗೂರು: ನಾರಾಯಣಪುರ ಅಣೆಕಟ್ಟೆ ಹಿನ್ನೀರಲ್ಲಿ ಮುಳುಗಡೆಯಾಗಿದ್ದ ಐತಿಹಾಸಿಕ ನವಲಿ ಜಡಿಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಭಾಗಶಃ ಪೂರ್ಣಗೊಂಡಿದೆ. ನವಲಿ ಗ್ರಾಮಸ್ಥರ ಹಾಗೂ ಭಕ್ತರ ಅವಿರತ ಹೋರಾಟದ ಫಲವಾಗಿ ಹೊಸ ವಿನ್ಯಾಸದಲ್ಲಿ ನಿರ್ಮಾಣಗೊಂಡ ದೇವಸ್ಥಾನ ಫೆ.19ರಂದು ಉದ್ಘಾಟನೆಗೊಳ್ಳಲಿದೆ.

ಈ ದೇವಸ್ಥಾನವು ಕಲ್ಯಾಣ ಚಾಲುಕ್ಯರ ಚಕ್ರವರ್ತಿ 5ನೇ ವಿಕ್ರಮಾದಿತ್ಯ (ತ್ರಿಭುವನ ಮಲ್ಲದೇವ) ಆಳ್ವಿಕೆಯಲ್ಲಿ ಕ್ರಿ.ಶ. 1012ರಲ್ಲಿ ನಿರ್ಮಾಣಗೊಂಡಿದೆ ಎಂಬುದು ಐತಿಹ್ಯ. ಕ್ರಿ.ಶ.1019ರಲ್ಲಿ ಚಾಲುಕ್ಯ ವಿಕ್ರಮಾದಿತ್ಯ ಚಿನ್ನದ ಕಳಸಾರೋಹಣ ಮಾಡಿದ್ದ ಎಂಬುದು ದೇವಸ್ಥಾನ ಬಳಿಯ ಶಿಲಾಶಾಸನದಿಂದ ತಿಳಿದು ಬರುತ್ತದೆ.

12ನೇ ಶತಮಾನಕ್ಕೂ ಪೂರ್ವದಲ್ಲಿ ಆಗಿ ಹೋದ ವಚನಕಾರ ಶಂಕರ ದಾಸಿಮಯ್ಯ ಆರಾಧ್ಯ ದೈವ ಜಡಿಶಂಕರಲಿಂಗ ದೇವಸ್ಥಾನದಲ್ಲಿಯೆ ವಚನಗಳನ್ನು ರಚಿಸಿದ ಎಂಬುದನ್ನು ಸಾಹಿತಿಗಳು ದೃಢಪಡಿಸುತ್ತಾರೆ. ಹಿನ್ನೀರಿನಲ್ಲಿ ಮುಳುಗಡೆ ಆಗುತ್ತಿರುವ ದೇವಸ್ಥಾನ ವರ್ಷದಿಂದ ವರ್ಷಕ್ಕೆ ಶಿಥಿಲಗೊಳ್ಳುತ್ತ ಸಾಗಿತ್ತು.

ನವಲಿ ಮತ್ತು ರಾಂಪೂರ, ಕಮಲದಿನ್ನಿ, ನರಕಲದಿನ್ನಿ ಸೇರಿದಂತೆ ಸುತ್ತಲಿನ ಭಕ್ತರು ಕೂಡಲಸಂಗಮ ಸಂಗಮನಾಥ ದೇವರ ದೇವಸ್ಥಾನ ಹಾಗೂ ಬಸವಣ್ಣನವರ ಐಕ್ಯ ಮಂಟಪ ಸಂರಕ್ಷಣೆ ಮಾಡಿದಂತೆ ಐತಿಹಾಸಿಕ ಜಡಿಶಂಕರಲಿಂಗ ದೇವಸ್ಥಾನ ಸಂರಕ್ಷಣೆ ಮಾಡಲು ಹತ್ತು ಹಲವು ಸುತ್ತುಗಳ ಹೋರಾಟ ನಡೆಸಿದ್ದು ಈಗ ಸ್ಮರಣೀಯ.

ಕೃಷ್ಣಾ ಭಾಗ್ಯ ಜಲ ನಿಗಮವು ವಿದ್ಯುತ್‍ ನವೀಕರಣಕ್ಕೆ ₹10 ಲಕ್ಷ, ಶುದ್ಧ ಕುಡಿಯುವ ನೀರು ವ್ಯವಸ್ಥೆಗೆ ₹10 ಲಕ್ಷ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ₹50 ಲಕ್ಷ, ಯಾತ್ರಿ ನಿವಾಸ ನಿರ್ಮಾಣಕ್ಕೆ ₹45 ಲಕ್ಷ, ರಾಂಪೂರ ಕ್ರಾಸ್‍ ಬಳಿ ಸ್ವಾಗತ ಕಮಾನು ನಿರ್ಮಾಣಕ್ಕೆ ₹45 ಲಕ್ಷ ಮಂಜೂರು ಮಾಡಿತ್ತು.

ದೇವಸ್ಥಾನ ಸುತ್ತಲು ಬಸಿ ನೀರು ಬಾರದಂತೆ ತಡೆಯಲು ಹಾಗೂ ಇತರೆ ಜೀರ್ಣೋದ್ಧಾರ ಕೆಲಸಗಳಿಗಾಗಿ ಒಟ್ಟು ₹4.60 ಕೋಟಿ ಅನುದಾನ ಬಂದಿತ್ತು. ದೇವಸ್ಥಾನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ₹3 ಕೋಟಿ ಸೇರಿದಂತೆ ಒಟ್ಟು ₹7.60 ಕೋಟಿ ಹಣ ನೀಡುವ ಮೂಲಕ ದೇವಸ್ಥಾನ ಸಂರಕ್ಷಣೆಗೆ ಮುಂದಾಗಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ನವಿಲೆ ಜಡಿಶಂಕರಲಿಂಗ ಜೀರ್ಣೋದ್ಧಾರ ಸಮಿತಿ ಹೆಸರಲ್ಲಿ ಸ್ಥಳೀಯರು ಸಮಿತಿ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಭಕ್ತರು ಹುಬ್ಬಳ್ಳಿ ಹೆಸರಲ್ಲಿ ಸಮಿತಿ ರಚಿಸಿಕೊಂಡಿದ್ದು ಎರಡೂ ಬಣಗಳ ಮಧ್ಯೆ ತಿಕ್ಕಾಟ ನಡೆಯುತ್ತಿದೆ. ದೇವಸ್ಥಾನ ಲೋಕಾರ್ಪಣೆ ನಂತರ ಸ್ಥಳೀಯರ ಸುಪರ್ದಿಗೆ ಬಿಡದಿದ್ದರೆ ಬೀಗ ಹಾಕುವ ಎಚ್ಚರಿಕೆಯನ್ನು ಸ್ಥಳೀಯ ಸಮಿತಿ ಸದಸ್ಯರು ನೀಡಿದ್ದಾರೆ.

ನಾರಾಯಣಪುರ ಹಿನ್ನೀರಲ್ಲಿ ಮುಳುಗಡೆಯಾಗುತ್ತಿದ್ದ ಲಿಂಗಸುಗೂರು ತಾಲ್ಲೂಕಿನ ನವಲಿ ಜಡಿಶಂಕರಲಿಂಗ ದೇವಸ್ಥಾನ ಗರ್ಭಗುಡಿಯಲ್ಲಿ ನಿತ್ಯ ಪೂಜೆಗೊಳ್ಳುತ್ತಿರುವ ಜಡಿಶಂಕರಲಿಂಗೇಶ್ವರ ಮೂರ್ತಿ
ನಾರಾಯಣಪುರ ಹಿನ್ನೀರಲ್ಲಿ ಮುಳುಗಡೆಯಾಗುತ್ತಿದ್ದ ಲಿಂಗಸುಗೂರು ತಾಲ್ಲೂಕಿನ ನವಲಿ ಜಡಿಶಂಕರಲಿಂಗ ದೇವಸ್ಥಾನ ಗರ್ಭಗುಡಿಯಲ್ಲಿ ನಿತ್ಯ ಪೂಜೆಗೊಳ್ಳುತ್ತಿರುವ ಜಡಿಶಂಕರಲಿಂಗೇಶ್ವರ ಮೂರ್ತಿ

‘ಮೂರು ದಿನಗಳಿಂದ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಸೋಮವಾರ ಬೆಳಗಿನ ಜಾವ ಪ್ರತಿಷ್ಠಾಪನೆಗೊಳ್ಳುವ ಗಣಪತಿ, ಪಾರ್ವತಿ, ಮಹಾನಂದಿ ಮೂರ್ತಿಗಳಿಗೆ ಮಹಾರುದ್ರಾಭಿಷೇಕ, ಪ್ರಾಣಪ್ರತಿಷ್ಠಾಪನೆ ನಡೆಸಲಾಗುವುದು. ಪೂರ್ಣಕುಂಭ ಮೆರವಣಿಗೆ ನಂತರ ದೇವಸ್ಥಾನ ಗಣ್ಯಮಾನ್ಯರಿಂದ ದೇವಸ್ಥಾನವು ಲೋಕಾರ್ಪಣೆಗೊಳ್ಳಲಿದೆ’ ಎಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT