ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಕರ್ಫ್ಯೂ: ಸ್ತಬ್ಧವಾದ ರಾಯಚೂರು

Last Updated 22 ಮಾರ್ಚ್ 2020, 11:11 IST
ಅಕ್ಷರ ಗಾತ್ರ

ರಾಯಚೂರು: ಸ್ಪರ್ಧೆ ಏರ್ಪಡಿಸಿದಂತೆ ಒಂದರ ಹಿಂದೆ ಮತ್ತೊಂದು ವೇಗವಾಗಿ ವಾಹನಗಳು ಸಂಚರಿಸುತ್ತಾ ಅಬ್ಬರ ಮೊಳಗಿಸುತ್ತಿದ್ದ ರಾಯಚೂರು ಜಿಲ್ಲೆಯ ರಸ್ತೆಗಳಲ್ಲಿ ಭಾನುವಾರ ಬೆಳಿಗ್ಗೆಯಿಂದ ಮೌನ ಆವರಿಸಿಕೊಂಡಿದ್ದು, ಜನತಾ ಕರ್ಫ್ಯೂ ಬೆಂಬಲಿಸಿ ಜನರೆಲ್ಲರೂ ಮನೆಗಳಲ್ಲಿಯೇ ಉಳಿದುಕೊಂಡಿದ್ದರು.

ಸರ್ಕಾರಿ ಬಸ್ , ಆಟೋ ಹಾಗೂ ಪ್ರಯಾಣಿಕರ ಓಡಾಟದಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ತರಕಾರಿ ಮಾರುಕಟ್ಟೆ, ಸರಾಫ್ ಬಜಾರ್, ಕಪಡಾ ಬಜಾರ್, ಕಿರಾಣಾ ಬಜಾರ್ ಹಾಗೂ ಪ್ರಮುಖ ದೇವಸ್ಥಾನಗಳೆಲ್ಲವೂ ಬಂದ್ ಗೆ ಶರಣಾಗಿದ್ದವು.

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೂ, ಜನತಾ ಕರ್ಫ್ಯೂ ಬೆಂಬಲಿಸಿದ ವ್ಯಾಪಾರಿಗಳೆಲ್ಲರೂ ಬಂದ್ ಮಾಡಿಕೊಂಡಿದ್ದರು. ಔಷಧಿ ಮಳಿಗೆಗಳು, ಆಸ್ಪತ್ರೆಗಳು ಹಾಗೂ ಪೆಟ್ರೊಲ್‌ ಪಂಪ್‌ಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಿದವು.

ಕೊರೊನಾ ಸೊಂಕು ಹರಡುವುದನ್ನು ತಡೆಗಟ್ಟಲು ಮುನ್ನಚ್ಚರಿಕೆ ಕ್ರಮವಾಗಿ ಒಬ್ಬರಿಂದ ಇನ್ನೊಬ್ಬರು ದೂರ ಇರಬೇಕು ಎನ್ನುವ ಆರೋಗ್ಯದ ಸೂಚನೆಯನ್ನು ಬಹುತೇಕರು ಪಾಲನೆ ಮಾಡಿ, ಮನೆಯಲ್ಲಿ ಉಳಿದಿದ್ದರು. ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪೊಲೀಸರು, ಆರೋಗ್ಯ ಇಲಾಕೆಯ ಸಿಬ್ಬಂದಿ, ದಿನಪತ್ರಿಕೆಗಳ ವಿತರಕರು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಿಬ್ಬಂದಿಯು ಭಾನುವಾರ ಕೂಡಾ ಕರ್ತವ್ಯಕ್ಕೆ ಹಾಜರಾಗಿದ್ದರು.

ದೂರು ಆಧರಿಸಿ ಶಂಕಿತರನ್ನು ತಪಾಸಣೆ ಮಾಡುವುದು, ವಿದೇಶದಿಂದ ಮರಳಿದವರ ಮೇಲೆ ನಿಗಾ ವಹಿಸುವ ಕಾರ್ಯವನ್ನು ಮಾಡಿದರು. ಸ್ವಯಂ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಇನ್ನೊಬ್ಬರ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವ ಆಧಿಕಾರಿಗಳು ಮತ್ತು ಸಿಬ್ಬಂದಿ ತಂಡಗಳ ಬಗ್ಗೆ ಜನರು ಕೃತಜ್ಞತೆ ಭಾವ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT