ಭಾನುವಾರ, ಸೆಪ್ಟೆಂಬರ್ 19, 2021
23 °C
ಶೈಕ್ಷಣಿಕ ಮಾರ್ಗದರ್ಶಿ

ಕೃಷಿ ಡಿಪ್ಲೋಮಾದಿಂದ ಉದ್ಯೋಗಕ್ಕೆ ದಾರಿ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೃಷಿ ವಿಶ್ವವಿದ್ಯಾಲಯದಿಂದ ಪ್ರತಿವರ್ಷವೂ ಕೃಷಿ ಪದವೀಧರರು ಹೊರಬರುತ್ತಿದ್ದರೂ ಕೃಷಿ ಕ್ಷೇತ್ರದಲ್ಲಿ ಆಗಿರುವ ಸಂಶೋಧನೆಗಳು, ವಿಸ್ತರಣಾ ಚಟುವಟಿಕೆಗಳು ಗ್ರಾಮೀಣ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಕೃಷಿ ಪದವೀಧರರು ಸಾಕಾಗುವಷ್ಟು ಲಭ್ಯವಾಗುತ್ತಿಲ್ಲ ಎನ್ನುವುದನ್ನು ಮನಗಂಡಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯವು 2011–12ನೇ ಶೈಕ್ಷಣಿಕ ಸಾಲಿನಿಂದ ಕೃಷಿ ಡಿಪ್ಲೋಮಾ ಕೋರ್ಸ್‌ ಆರಂಭಿಸಿದೆ.

ಬೀದರ್‌, ಹಗರಿ, ಭೀಮಯನಗುಡಿಯಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್‌ಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೃಷಿ ತಾಂತ್ರಿಕ ಡಿಪ್ಲೋಮಾ ಕೋರ್ಸ್‌ ಇದೆ. ಎಲ್ಲ ಕಡೆಗಳಲ್ಲೂ ತಲಾ 35 ಅಭ್ಯರ್ಥಿಗಳಿಗೆ ಡಿಪ್ಲೋಮಾ ಕೋರ್ಸ್‌ಗೆ ನೋಂದಾಯಿಸಿಕೊಳ್ಳಲು ಪ್ರತಿವರ್ಷ ಅವಕಾಶ ನೀಡಲಾಗುತ್ತದೆ. ಎರಡು ವರ್ಷಗಳ ಈ ಕೋರ್ಸ್‌ ನಾಲ್ಕು ಸೆಮಿಸ್ಟರ್‌ ಒಳಗೊಂಡಿದ್ದು, ಕನ್ನಡ ಮಾಧ್ಯಮದಲ್ಲಿಯೇ ಬೋಧಿಸಲಾಗುತ್ತದೆ.

ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ 45 (ಪರಿಶಿಷ್ಟ ಜಾತಿ/ಪಂಗಡ ಶೇ 40)ಅಂಕಗಳನ್ನು ಪಡೆದು ತೇರ್ಗಡೆಯಾದವರು ಡಿಪ್ಲೋಮಾ ಪ್ರವೇಶ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್‌ ಹಾಗೂ ರೋಸ್ಟರ್‌ ಪದ್ಧತಿ ಅನುಸಾರ ಅಭ್ಯರ್ಥಿಗಳನ್ನು ಆಯ್ಕೆಯನ್ನು ಮಾಡಲಾಗುತ್ತದೆ.

ಕೃಷಿ ಡಿಪ್ಲೋಮಾ ಅಥವಾ ಕೃಷಿ ತಾಂತ್ರಿಕ ಡಿಪ್ಲೋಮಾ ಅಧ್ಯಯನ ಮಾಡ ಬಯಸುವವರು ಅರ್ಜಿ ನಮೂನೆಗಳನ್ನು ವೆಬ್‌ಸೈಟ್‌ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಪ್ರತಿವರ್ಷ ಮೇ ತಿಂಗಳು ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.

ಕೃಷಿ ಡಿಪ್ಲೋಮಾ ಕೋರ್ಸ್‌ನಲ್ಲಿ ವಿಷಯದ ಪಠ್ಯಕ್ರಮಗಳ ಜೊತೆಗೆ ಪ್ರಾಯೋಗಿಕಗಳು, ಪ್ರಾತ್ಯಕ್ಷಿಕೆಗಳು, ಕ್ಷೇತ್ರ ವೀಕ್ಷಣೆ ಸೇರಿದಂತೆ ಹಲವು ವಿಧದಲ್ಲಿ ಜ್ಞಾನಜಾರ್ಜನೆ ಮಾಡಿಸಲಾಗುತ್ತದೆ. ಕೋರ್ಸ್‌ನಲ್ಲಿ ಶೇ 70 ಅಂಕಗಳು ಪ್ರಾಯೋಗಿಕವಾಗಿದ್ದರೆ, ಶೇ 30 ರಷ್ಟು ಅಂಕಗಳು ಬೋಧನೆಗೆ ಸಂಬಂಧಿಸಿವೆ. ಸೆಮಿಸ್ಟರ್‌ನಲ್ಲಿ ಅನುತ್ತೀರ್ಣವಾಗುವ ವಿಷಯಗಳನ್ನು ಮರು ನೋಂದಾಯಿಸಿಕೊಂಡು [ಕ್ಯಾರಿಓವರ್‌] ಪರೀಕ್ಷೆ ಬರೆಯುವುದಕ್ಕೆ ಅವಕಾಶವಿದೆ.

ಕೃಷಿ ಪದವಿಗೆ ಮೀಸಲಾತಿ: ಕೃಷಿ ಡಿಪ್ಲೋಮಾ ಕೋರ್ಸ್‌ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಬಿಎಸ್‌ಸಿ ಆನರ್ಸ್‌/ಬಿ ಟೆಕ್‌ (ಕೃಷಿ ತಾಂತ್ರಿಕತೆ) ಪದವಿಗೆ ಸೇರಿಕೊಳ್ಳಬಹುದಾಗಿದೆ. ಶೇ 5 ರಷ್ಟು ಅಥವಾ ಗರಿಷ್ಠ 5 ಸೀಟುಗಳನ್ನು ಪ್ರತಿ ಕಾಲೇಜಿನಲ್ಲಿ ಮೀಸಲು ಇಡಲಾಗಿದೆ.

ಡಿಪ್ಲೋಮಾ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಒಂದು ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಡಿಪ್ಲೋಮಾ ಅವಧಿಯು ಕನಿಷ್ಠ ಎರಡು ವರ್ಷ ಹಾಗೂ ಗರಿಷ್ಠ ನಾಲ್ಕು ವರ್ಷಗಳದ್ದಾಗಿದೆ.

ಉದ್ಯೋಗಾವಕಾಶ: ಕೃಷಿ ಪ್ರಧಾನ ದೇಶದಲ್ಲಿ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಸಾವಿರಾರು ಉದ್ಯಮಗಳಿವೆ. ಬೀಜ, ಗೊಬ್ಬರ, ಕೃಷಿ ಪರಿಕರಗಳನ್ನು ತಯಾರಿಸುವ ಕೈಗಾರಿಕೆಗಳು ಮತ್ತು ಮಾರಾಟ ಮಾಡುವ ಕಂಪೆನಿಗಳು ಕೃಷಿ ಡಿಪ್ಲೋಮಾ ಮಾಡಿರುವವರಿಗೆ ಆದ್ಯತೆಯಿಂದ ಉದ್ಯೋಗ ನೀಡುತ್ತವೆ.

ಹೆಚ್ಚಿನ ಮಾಹಿತಿಗಾಗಿ www.uasraichur.edu.in ಅಂತರ್ಜಾಲ ತಾಣ ವೀಕ್ಷಿಸಬಹುದು.

ಕೃಷಿ ಡಿಪ್ಲೋಮಾ ಸಂಯೋಜಕರ ಸಂಪರ್ಕ ಸಂಖ್ಯೆ: 08479 222090 (ಭೀಮರಾಯನಗುಡಿ, 08482 244007 (ಬೀದರ್‌), 812 3946340 (ಹಗರಿ), 08532 220079 (ರಾಯಚೂರು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು