ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ

ಜೂನ್‌ 26ರಂದು ಕರೇಗುಡ್ಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಿಎಂ ವಾಸ್ತವ್ಯ
Last Updated 24 ಜೂನ್ 2019, 13:54 IST
ಅಕ್ಷರ ಗಾತ್ರ

ಮಾನ್ವಿ: ಜೂನ್‌ 26ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಕರೇಗುಡ್ಡ ಗ್ರಾಮದಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಗ್ರಾಮದ ಎಲ್ಲೆಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಸಮರ್ಪಕ ವಿದ್ಯುತ್‌ ಸರಬರಾಜಿಗಾಗಿ ವಿವಿಧೆಡೆ ನಾಲ್ಕು ವಿದ್ಯುತ್‌ ಪರಿವರ್ತಕಗಳು ಮತ್ತು 70ಕ್ಕೂ ಅಧಿಕ ಹೊಸ ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗಿದೆ.

ಗ್ರಾಮದ ಮುಖ್ಯ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಮಹಾಂತೇಶ್ವರ ಮಠದ ಹಿಂಭಾಗದ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಮುಖ್ಯಮಂತ್ರಿ ವಾಸ್ತವ್ಯ ಹೂಡಲಿರುವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ದುರಸ್ತಿ, ಕಾಂಪೌಂಡ್‌ ಗೋಡೆ ನಿರ್ಮಿಸಿ ಗೇಟ್‌ ಅಳವಡಿಸಲಾಗಿದೆ. ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ವರ್ಲಿ ಕಲಾಕೃತಿಗಳನ್ನು ಬರೆದು ಅಲಂಕರಿಸಲಾಗುತ್ತಿದೆ. ಶಾಲೆಯಲ್ಲಿ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಗ್ರಾಮದ ಹೊರವಲಯದ ಜಮೀನಿನಲ್ಲಿ ಮುಖ್ಯಮಂತ್ರಿಯ ಜನತಾ ದರ್ಶನ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯ ಬಹಿರಂಗ ಕಾರ್ಯಕ್ರಮ್ಕಕಾಗಿ ಬೃಹತ್‌ ವೇದಿಕೆಯ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 2 ಎಕರೆ ಪ್ರದೇಶದಲ್ಲಿ 10 ಸಾವಿರ ಆಸನಗಳ ವ್ಯವಸ್ಥೆ ಇರುವ ಬೃಹತ್‌ ವೇದಿಕೆ ನಿರ್ಮಿಸಲಾಗುತ್ತಿದೆ. ವೇದಿಕೆಯ ಪಕ್ಕದಲ್ಲಿ ಗಣ್ಯರು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಭೋಜನ ಕೊಠಡಿ, ಮುಖ್ಯಮಂತ್ರಿಯವರ ತಾತ್ಕಾಲಿಕ ವಿಶ್ರಾಂತಿ ಗೃಹ ನಿರ್ಮಿಸಲಾಗುತ್ತಿದೆ. ವೇದಿಕೆಯ ಸಮೀಪದ ಸ್ಥಳದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲು 35 ಕೌಂಟರ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಮಹಿಳೆಯರು, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಊಟಕ್ಕಾಗಿ ಪ್ರತ್ಯೇಕ ಕೌಂಟರ್‌ ಗಳ ವ್ಯವಸ್ಥೆ ಮಾಡಲಾಗುವುದು ಎಂದು ವೇದಿಕೆ ನಿರ್ಮಾಣದ ವ್ಯವಸ್ಥಾಪಕ ಪ್ರಸಾದ್‌ ತಿಳಿಸಿದರು.

ವೇದಿಕೆಯ ಸಮೀಪ ಗಣ್ಯರು ಮತ್ತು ಅಧಿಕಾರಿಗಳ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ಗೆ ಕರೇಗುಡ್ಡ ಗ್ರಾಮದ ಪ್ರವೇಶ ದ್ವಾರದ ಸಮೀಪ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್‌ 26ರಂದು

ಜನತಾ ದರ್ಶನದ ನಂತರ ಸಂಜೆ 6.30ರಿಂದ ಶಾಲಾ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವ ಸಂಪುಟದ ಸದಸ್ಯರು ವೀಕ್ಷಿಸಲಿದ್ದಾರೆ.ಕರೇಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೂರು ತಂಡಗಳು ಸೇರಿ ವಿವಿಧ ಶಾಲೆಗಳ 10ಕ್ಕೂ ಹೆಚ್ಚು ತಂಡಗಳು ಸಮೂಹ ನೃತ್ಯ, ಗಾಯನ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರದರ್ಶಿಸುವರು ಎಂದು ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ ತಿಳಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಹಿರಿಯ ಅಧಿಕಾರಿಗಳು ಸೋಮವಾರ ಕರೇಗುಡ್ಡ ಗ್ರಾಮಕ್ಕೆ ತೆರಳಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT