ಕವಿತಾಳ: ಸಮೀಪದ ಹಾಲಾಪುರ ಗ್ರಾಮದ ಕರಿಯಪ್ಪ ತಾತನ ಜಾತ್ರೆ ನಿಮಿತ್ತ ಶುಕ್ರವಾರ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಜಾತ್ರೆ ಅಂಗವಾಗಿ ಕರಿಯಪ್ಪ ತಾತನ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಬಸವರಾಜಸ್ವಾಮಿ, ಶಿವಕುಮಾರಸ್ವಾಮಿ, ಮಲ್ಲಯ್ಯಸ್ವಾಮಿ, ನಾಗೇಶ ನಾಯಕ ಪೂಜಾರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಐದು ದಿನಗಳಿಂದ ನಡೆದ ಕರಿಯಪ್ಪ ತಾತನ ಲೀಲಾಮೃತ ಪುರಾಣ ಪ್ರವಚನದ ಮಹಾಮಂಗಲ ಜರುಗಿತು. ದೇವರ ಮನೆಯಿಂದ ಡೊಳ್ಳು, ಭಾಜಾ ಭಜಂತ್ರಿ, ಮಂಗಳ ವಾದ್ಯಗಳೊಂದಿಗೆ ಕುಂಭ ಕಳಸದ ಮೆರವಣಿಗೆ ನಡೆಯಿತು. ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಹಾಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.