ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2024 | ನೀರಾವರಿಗೆ ಆದ್ಯತೆ: ರೈತರ ಖುಷಿಪಡಿಸಲು ಯತ್ನ

Published 17 ಫೆಬ್ರುವರಿ 2024, 7:23 IST
Last Updated 17 ಫೆಬ್ರುವರಿ 2024, 7:23 IST
ಅಕ್ಷರ ಗಾತ್ರ

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಹಿಂದುಳಿದ ರಾಯಚೂರು ಜಿಲ್ಲೆಯ ಹಳೆಯ ಯೋಜನೆಗಳಿಗೆ ಮರು ಜೀವ ನೀಡಿದರೆ, ಮೂರು ಹೊಸ ಯೋಜನೆಗಳನ್ನೂ ಪ್ರಕಟಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಧಾನಸಭೆಗೆ ಜಿಲ್ಲೆಯಿಂದ ಹೆಚ್ಚಿನ ಸ್ಥಾನ ಕೊಟ್ಟ ಜನರ ಋಣ ತೀರಿಸಲು ಪ್ರಯತ್ನಿಸಿದ್ದಾರೆ.

ಲೋಕಸಭೆ ಚುನಾವಣೆಯ ಮೇಲೆ ದೃಷ್ಟಿ ಇಟ್ಟು ಹಲವು ಯೋಜನೆಗಳಿಗೆ ಅನುದಾನದ ಒದಗಿಸುವ ಭರವಸೆ ಕೊಟ್ಟಿದ್ದಾರೆ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದರೆ ಜಿಲ್ಲೆಗೆ ನಿಜಕ್ಕೂ ವರದಾನವಾಗಲಿದೆ.

ಜನವರಿಯಲ್ಲಿ ಜಿಲ್ಲೆಯ ತಿಂಥಣಿ ಬ್ರಿಜ್ಡ್ ಹತ್ತಿರದಲ್ಲಿರುವ ಕಲಬುರಗಿ ವಿಭಾಗದ ಕಾಗಿನೆಲೆ ಕನಕಗುರು ಪೀಠದಲ್ಲಿ ಹಮ್ಮಿಕೊಂಡ ಹಾಲುಮತ ಸಂಸ್ಕೃತಿ ವೈಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲ್ಯಾಣ ಕರ್ನಾಟಕದ ಜನತೆಗೆ ನೀಡಿದ್ದ ಭರವಸೆಯನ್ನೂ ಬಜೆಟ್ ಮೂಲಕ ಈಡೇರಿಸಲು ಸರ್ವ ರೀತಿಯಿಂದಲೂ ಪ್ರಯತ್ನ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಜಿಲ್ಲೆಯಲ್ಲಿ ಕೃಷಿಯೇ ಪ್ರಧಾನವಾಗಿದೆ. ರಾಯಚೂರು ಅತಿದೊಡ್ಡದಾದ ಕೃಷಿ ಮಾರುಕಟ್ಟೆ ಹೊಂದಿದೆ. ಎಪಿಎಂಸಿ ಕಾರ್ಯ ಚಟುವಟಿಕೆಗಳ ಡಿಜಿಟೈಜ್ ಹಾಗೂ ಎಪಿಂಎಸಿಯಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಲು ಆಸಕ್ತಿ ತೋರಿಸಿರುವುದು ರೈತರು ಹಾಗೂ ವರ್ತಕರಲ್ಲೂ ಸಂತಸ ಮೂಡಿಸಿದೆ.

ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಘೋಷಣೆಗೆ ಸೀಮಿತವಾಗಿದೆ. ಹೊಸ ತಾಲ್ಲೂಕು ಕಚೇರಿಗಳ ನಿರ್ಮಾಣ, ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಬಿಡಿಗಾಸು ಕೊಟ್ಟಿಲ್ಲ. ಇದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ.

ಸರ್ಕಾರದ ವಿರುದ್ಧ ಜವಳಿ ಉದ್ಯಮಿಗಳ ಅಸಮಾಧಾನ

ರಾಯಚೂರು ಜಿಲ್ಲೆಯಲ್ಲಿ ಅತಿಹೆಚ್ಚು ಹತ್ತಿ ಉತ್ಪಾದನೆಯಾಗುತ್ತದೆ. ಅತ್ಯಧಿಕ ಜಿನ್ನಿಂಗ್‌ ಫ್ಯಾಕ್ಟರಿಗಳು ಜಿಲ್ಲೆಯಲ್ಲಿ ಇವೆ. ಆದರೂ ಕಲಬುರಗಿಯಲ್ಲಿ ಬೃಹತ್‌ ಜವಳಿ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿರುವುದು ಜವಳಿ ಉದ್ಯಮಿಗಳಲ್ಲಿ ಬೇಸರ ಮೂಡಿಸಿದೆ. ಖಾಸಗಿ ಸಹಭಾಗಿತ್ವದಲ್ಲಿ ಮಿನಿ ಜವಳಿ ಪಾರ್ಕ್‌ ನಿರ್ಮಿಸುವ ಘೋಷಣೆ ಮಾಡಿ ಉದ್ಯಮಿಗಳ ಕಣ್ಣೊರೆಸುವ ತಂತ್ರ ಅನುಸರಿಸಿದೆ. ಇದು ಉದ್ಯಮಿಗಳ ಅಸಮಾಧಾನಕ್ಕೂ ಕಾರಣವಾಗಿದೆ.

ಕಲಬುರಗಿಯಲ್ಲಿ ಕೇವಲ 5ರಿಂದ 6 ಜಿನ್ನಿಂಗ್‌ ಹಾಗೂ ಪ್ರೆಸ್ಸಿಂಗ್‌ ಮಿಲ್‌ ಇವೆ. ರಾಯಚೂರಿನಲ್ಲಿ 65 ಜಿನ್ನಿಂಗ್ ಪ್ರೆಸಿಂಗ್‌ ಮಿಲ್‌ಗಳು ಇವೆ. ಜಿಲ್ಲೆಯಲ್ಲಿ ಒಟ್ಟು 118 ಫ್ಯಾಕ್ಟರಿಗಳು ಇರುವುದರಿಂದ 10 ಲಕ್ಷದವರೆಗೆ ಹತ್ತಿ ಬೇಲ್‌ಗಳನ್ನು ತಯಾರಿಸಲಾಗುತ್ತಿದೆ. ಕಲಬುರಗಿ ಬಿಟ್ಟು ಎಲ್ಲ ರೀತಿಯಿಂದಲೂ ಅನುಕೂಲವಿರುವ ರಾಯಚೂರಿನಲ್ಲೇ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆ ಮಾಡಬೇಕು ಎಂದು ರಾಯಚೂರು ಕಾಟನ್‌ ಮಿಲ್ಲರ್ಸ್‌ ಅಸೋಸಿಯೇಶನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಜನವರಿಯಲ್ಲೇ ಒತ್ತಾಯಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದರು. ಆದರೆ ಸರ್ಕಾರ ಉದ್ಯಮಿಗಳ ಮನವಿಗೆ ಸ್ಪಂದಿಸಿಲ್ಲ.

ಪಾಮನಕಲ್ಲೂರು ಶಾಖಾ ಕಾಲುವೆಗೆ ₹990 ಕೋಟಿ ಮೀಸಲು

ವರದಿ – ಪ್ರಕಾಶ ಮಸ್ಕಿ

ಮಸ್ಕಿ: ತಾಲ್ಲೂಕಿನ ಪಾಮನಕೆಲ್ಲೂರು ಹಾಗೂ ಇತರೆ ಹಳ್ಳಿಗಳ 70 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ನಾರಾಯಣಪುರ ಬಲದಂಡೆ ಕಾಲುವೆಯ ಶಾಖಾ ಕಾಲುವೆ ನಿರ್ಮಾಣಕ್ಕೆ ರಾಜ್ಯ ಬಜೆಟ್‌ನಲ್ಲಿ ₹ 990 ಕೋಟಿ ಘೋಷಣೆ ಆಗಿರುವುದು ಈ ಭಾಗದ ರೈತರ ಬಹುದಿನಗಳ ಹೋರಾಟಕ್ಕೆ ಸ್ಪಂದಿಸಿದೆ.

ಪ್ರತಾಪಗೌಡ ಪಾಟೀಲ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆ ಹಾಗೂ ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಆರ್.‌ ಬಸನಗೌಡ ತುರ್ವಿಹಾಳ ಅವರನ್ನು ಆಯ್ಕೆ ಮಾಡಿದರೆ, ಈ ಭಾಗದ ರೈತರ ಬಹುದಿನದ ಬೇಡಿಕೆಯಾಗಿದ್ದ ನೀರಾವರಿ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ಅಂದು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭರವಸೆ ನೀಡಿದ್ದರು.

ಶಾಸಕ ಬಸನಗೌಡರು ಸದನದಲ್ಲಿ ಪಾಮನಕಲ್ಲೂರು 5 (ಎ) ಕಾಲುವೆ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಯೋಜನೆ ಅನುಷ್ಠಾನಕ್ಕೆ ನೆರೆ ರಾಜ್ಯಗಳಿಂದ ಆಕ್ಷೇಪ ವ್ಯಕ್ತವಾಗಬಾರದು. ತಾಂತ್ರಿಕ ಸಮಸ್ಯೆ ಎದುರಾಗಬಾರದು ಎಂದು 5 (ಎ) ಕಾಲುವೆ ಬದಲಾಗಿ ಪಾಮನಕಲ್ಲೂರು ಶಾಖಾ ಕಾಲುವೆ ಎಂದು ಹೆಸರು ಬದಲಾಯಿಸಿ ಅನುದಾನ ಒದಗಿಸಲಾಗಿದೆ.

‘ಪಾಮನಕಲ್ಲೂರು ಮತ್ತು ಇತರೆ ಹಳ್ಳಿಗಳ 70 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಕಾಲುವೆ ಮೂಲಕ ನೀರು ಕೊಡಬೇಕು ಎಂಬ ಈ ಭಾಗದ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ’ ಎಂದು ನೀರಾವರಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗಿರೆಡ್ಡಿ ದೇವರಮನಿ ಪ್ರತಿಕ್ರಿಯಿಸಿದ್ದಾರೆ.

‘ತಾಂತ್ರಿಕ ಕಾರಣಗಳಿಂದಾಗಿ 5 (ಎ) ಕಾಲುವೆ ಬದಲು ಪಾಮನಕಲ್ಲೂರು ಶಾಖಾ ಕಾಲುವೆ ಎಂದು ಘೋಷಿಸಿ ಸರ್ಕಾರ ಬಜೆಟ್‌ನಲ್ಲಿ ₹ 990 ಕೋಟಿ ಅನುದಾನ ನೀಡಿದೆ. ಈ ಭಾಗದ ಹಳ್ಳಿಗಳಿಗೆ ಉಪ ಕಾಲುವೆಯ ಮೂಲಕ ನೀರಾವರಿ ಸೌಲಭ್ಯ ದೊರೆಯಲಿದೆ.  ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತನ್ನು ಕಾಂಗ್ರೆಸ್‌ ಉಳಿಸಿಕೊಂಡಿದೆ’ ಎಂದು ಮಸ್ಕಿ ಶಾಸಕ ಆರ್.‌ಬಸನಗೌಡ ತುರ್ವಿಹಾಳ ಹೇಳಿದ್ದಾರೆ.

ಚೀಕಲಪರ್ವಿ ಬಳಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ

ವರದಿ – ಬಸವರಾಜ ಭೋಗಾವತಿ

ಮಾನ್ವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2024-25ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ತಾಲ್ಲೂಕಿನ ಚೀಕಲಪರ್ವಿ ಬಳಿ ತುಂಗಭದ್ರಾ ನದಿಗೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಯೋಜನೆ ಬಗ್ಗೆ ಘೋಷಣೆ ಮಾಡಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.

ಚೀಕಲಪರ್ವಿ ಬಳಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸಿ ನೆರೆಯ ಆಂಧ್ರಪ್ರದೇಶಕ್ಕೆ ಸಂಪರ್ಕಿಸುವುದು ಈ ಭಾಗದ ಜನರ ದಶಕಗಳ ಬೇಡಿಕೆಯಾಗಿದೆ. ಇದೀಗ ರಾಜ್ಯ ಸರ್ಕಾರ ಚೀಕಲಪರ್ವಿ ಬಳಿ ಸೇತುವೆ ನಿರ್ಮಾಣದ ಜತೆಗೆ ನೀರಾವರಿ ಸೌಲಭ್ಯ ಪಡೆಯಲು ಬ್ಯಾರೇಜ್ ನಿರ್ಮಾಣಕ್ಕೆ ಉದ್ದೇಶಿಸಿರುವುದು ಈ ಭಾಗದ ಕೃಷಿ ಹಾಗೂ ವಾಣಿಜ್ಯ ಅಭಿವೃದ್ಧಿ ಹಿತದೃಷ್ಟಿಯಿಂದ ಉತ್ತಮ ಯೋಜನೆಯಾಗಿದೆ.

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುರ್ಡಿ ಗ್ರಾಮದ ಕೆರೆ ತುಂಬಿಸುವ ಯೋಜನೆ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದ್ದು, ಅನುದಾನ ಘೋಷಣೆ ಮಾಡಿಲ್ಲ.

ರಾಯಚೂರು ಜಿಲ್ಲೆಗೆ ಕೊಡುಗೆ

 • ₹ 40 ಕೋಟಿ ವೆಚ್ಚದಲ್ಲಿ ಶೀತಲಗೃಹ ನಿರ್ಮಾಣ

 • ₹ 25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ

 • ನವಲಿ ಸಮತೋಲನ ಜಲಾಶಯ ನಿರ್ಮಾಣ ಯೋಜನೆ ಅನುಷ್ಠಾನ

 • ದೇವದುರ್ಗ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ನೆರವು

 • ₹ 990 ಕೋಟಿ ಮೊತ್ತದಲ್ಲಿ ಪಾಮನಕಲ್ಲೂರು ಪ್ರದೇಶದಲ್ಲಿ ನೀರಾವರಿ ಸೌಲಭ್ಯ

 • ಜಿಲ್ಲೆಯ ಚೀಕಲಪರ್ವಿ ಸಮೀಪ ತುಂಗಭದ್ರಾ ನದಿಗೆ ಬಿ.ಸಿ.ಬಿ ನಿರ್ಮಾಣ

 • ಮಾನ್ವಿ ತಾಲ್ಲೂಕಿನ ಕುರ್ಡಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನದ ಭರವಸೆ

 • ಕೆಕೆಆರ್‌ಡಿಬಿಯಿಂದ ರಾಯಚೂರು ವಿಶ್ವವಿದ್ಯಾಲಯದ ಘಟಕ ಕಾಲೇಜು ಸ್ಥಾಪನೆ

 • ರಾಯಚೂರಲ್ಲಿ ಮಾನವ ಹಾಲು ಬ್ಯಾಂಕ್‌ ಸ್ಥಾಪನೆ

 • ₹ 220 ಕೋಟಿ ವೆಚ್ಚದ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಅನುದಾನದ ಭರವಸೆ

 • ರಾಯಚೂರು ತಾಲ್ಲೂಕಿನ ಚಿಕ್ಕಮಂಜಾಲಿ ಗ್ರಾಮದ ಬಳಿ ಮಂತ್ರಾಲಯಕ್ಕೆ ಸಂಪರ್ಕ ಕಲ್ಲಿಸಲು ₹158 ಕೋಟಿ ರೂ. ವೆಚ್ಚದಲ್ಲಿ ಕೋಟಿ ವೆಚ್ಚದಲ್ಲಿ ಬ್ರಿಜ್‌–ಬ್ಯಾರೇಜ್‌ ನಿರ್ಮಾಣ

 • ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರಾಯಚೂರಲ್ಲಿ ಜವಳಿ ಪಾರ್ಕ್

 • ಜಿಲ್ಲೆಯಲ್ಲಿ 10,000 ಉದ್ಯೋಗ ಸೃಷ್ಟಿಗೆ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT