ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶೈಲದಲ್ಲಿ ಕರ್ನಾಟಕ ಬಸ್‌ ಚಾಲಕನ ಮೇಲೆ ಹಲ್ಲೆ

Last Updated 3 ಜೂನ್ 2022, 16:38 IST
ಅಕ್ಷರ ಗಾತ್ರ

ರಾಯಚೂರು: ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲದಲ್ಲಿ ಕರ್ನಾಟಕ ಸರ್ಕಾರಿ ಬಸ್‌ ಚಾಲಕ ಮತ್ತು ನಿರ್ವಾಹಕನ ಮೇಲೆ ಸ್ಥಳೀಯ ಗುಂಪೊಂದು ಗುರುವಾರ ನಡುರಾತ್ರಿ ಹಲ್ಲೆ ನಡೆಸಿ ರಕ್ತಗಾಯಗೊಳಿಸಿದ ಘಟನೆ ನಡೆದಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ವ್ಯಾಪ್ತಿಯ ವಿಜಯಪುರ ಡಿಪೋ ಬಸ್‌ ಜೊತೆಗೆ ಶ್ರೀಶೈಲದಲ್ಲಿ ತಂಗಿದ್ದ ಚಾಲಕ ಬಸವರಾಜ ಬಿರಾದಾರ ಅವರ ದವಡೆಯು ಹಲ್ಲೆಯಿಂದಾಗಿ ಸೀಳಿಕೊಂಡಿದ್ದು, ಸುನ್ನಿಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ವಾಹಕ ಜೆ.ಡಿ.ಮಾದರ್‌ ಅವರಿಗೆ ಒಳಪೆಟ್ಟಾಗಿದೆ.
ಮಧ್ಯೆರಾತ್ರಿ ಆಟೋದಲ್ಲಿ ಧಾವಿಸಿದ ತೆಲುಗು ಭಾಷೆ ಮಾತನಾಡುತ್ತಿದ್ದ ಗುಂಪು ಬಸ್‌ಗೆ ಕಲ್ಲು ತೂರಿ ಗಾಜು ಪುಡಿಗೊಳಿಸಿದೆ. ಬಸ್‌ನಲ್ಲಿ ಮಲಗಿದ್ದ ನಿರ್ವಾಹಕನನ್ನು ಥಳಿಸುವಾಗ, ಮಠದ ಬಳಿ ಮಲಗಿದ್ದ ಚಾಲಕ ಎಚ್ಚರಗೊಂಡು ಸ್ಥಳಕ್ಕೆ ಧಾವಿಸಿದಾಗ, ಅವರ ಹಲ್ಲೆ ನಡೆಸಿ ರಕ್ತಗಾಯಗೊಳಿಸಿದ್ದಾರೆ.
‘ಕಾರಣವಿಲ್ಲದೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಗಲ್ಲ ಸೀಳಿದ್ದು ಹೊಲಿಗೆ ಹಾಕಿದ್ದಾರೆ. ಕಾಲಿಗೂ ಪೆಟ್ಟಾಗಿದೆ‘ ಎಂದು ಬಸ್ ಚಾಲಕ ಬಸವರಾಜ ಬಿರಾದಾರ ತಿಳಿಸಿದ್ದಾರೆ.
ಗಲಾಟೆ ತಡೆಯುವುದಕ್ಕೆ ಬಂದಿದ್ದ ಆಂಧ್ರಪ್ರದೇಶ ಸಾರಿಗೆ ನಿಯಂತ್ರಣಾಧಿಕಾರಿ ಮೇಲೆಯೂ ಗುಂಪು ಹಲ್ಲೆ ಮಾಡಿದೆ. ಜನರು ಭಾರಿ ಜಮಾಯಿಸಿದ್ದರಿಂದ ಗುಂಪು ಮತ್ತೆ ಆಟೋದಲ್ಲಿಯೇ ಪರಾರಿಯಾಗಿದೆ.
ಶ್ರೀಶೈಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ರಾತ್ರಿ 8ಕ್ಕೆ ಶ್ರೀಶೈಲ ತಲುಪಿದ ನಂತರ ಎಂದಿನಂತೆ ಅದೇ ಸ್ಥಳದಲ್ಲಿ ಬಸ್ ನಿಲ್ಲಿಸಿ, ಸ್ನಾನ ಮುಗಿಸಿ, ಊಟ ಮಾಡಿ ಮಲಗಿದ್ದೆವು. ಮಧ್ಯರಾತ್ರಿ 1 ಗಂಟೆಗೆ ಬಸ್ ಮೇಲೆ ಕಲ್ಲು ಬೀಸಿದ ಸದ್ದಾಯಿತು. ಮಠದ ಬಂಡೆ ಮೇಲೆ ಮಲಗಿದ್ದವನಿಗೆ ಎಚ್ಚರವಾಯಿತು. ಗಲಾಟೆ ತಡೆಯಲು ಪ್ರಯತ್ನಿಸಿದಾಗ, ಯುವಕರ ಗುಂಪು ಕಾಲಿನ ಮೇಲೆ ಕಲ್ಲು ಬೀಸಾಡಿ, ಹಲ್ಲೆ ಮಾಡಿದರು‘ ಎಂದು ಚಾಲಕ ಘಟನೆ ಬಗ್ಗೆ ತಿಳಿಸಿದ್ದಾರೆ.

ಕಳೆದ ಯುಗಾದಿ ಸಂದರ್ಭದಲ್ಲಿ ಗಲಾಟೆ ಮಾಡಿದ್ದವರೇ ಈಗ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ರಾಯಚೂರು ಸಾರಿಗೆ ಇಲಾಖೆ ಅಧಿಕಾರಿಗಳು ಶ್ರೀಶೈಲಕ್ಕೆ ತೆರಳಿ ಘಟನೆ ಮಾಹಿತಿ ಪಡೆದಿದ್ದು, ಆಂಧ್ರ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT