ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ಕೃಷ್ಣಾ ನದಿ ತಟದ ರೈತರಲ್ಲಿ ಆತಂಕ

ಅಕ್ಷರ ಗಾತ್ರ

ಲಿಂಗಸುಗೂರು: ಕೃಷ್ಣಾ ಕೊಳ್ಳದ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದೆ. ಜಲಾಶಯದಿಂದ ಈಗಾಗಲೇ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಡುತ್ತಿದ್ದರಿಂದ ಕೃಷ್ಣಾ ನದಿಯ ನಡುಗಡ್ಡೆ ಮತ್ತು ನದಿ ತಟದ ರೈತರಲ್ಲಿ ಆತಂಕ ಮನೆ ಮಾಡಿದೆ.

ನಾರಾಯಣಪುರ ಜಲಾಶಯದ ಸಾಮರ್ಥ್ಯ 492.252 ಮೀಟರ್‌ ಇದ್ದು, ಹಿನ್ನೀರು ಪ್ರದೇಶದಲ್ಲಿ ಪ್ರವಾಹ ತಗ್ಗಿಸಲು 489.600ಮೀಟರ್‌ ಮಾತ್ರ ನೀರು ಸಂಗ್ರಹಿಸಿಕೊಳ್ಳಲಾಗುತ್ತಿದೆ. ಜಲಾಶಯದ 30 ಕ್ರೆಸ್ಟ್‌ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ಸಂಜೆ ವೇಳೆಗೆ 4ಲಕ್ಷ ಕ್ಯುಸೆಕ್‍ ನೀರು ಹರಿಬಿಡಲಾಗಿದೆ ಎಂದು ಅಣೆಕಟ್ಟೆಯ ಎಂಜಿನಿಯರ್‌ ವಿಜಯಕುಮಾರ ಅರಳಿ ತಿಳಿಸಿದ್ದಾರೆ.

ಒಂದು ವಾರದಿಂದ ಕೃಷ್ಣಾ ನದಿ ಪ್ರವಾಹ 3.10ಲಕ್ಷ ಕ್ಯುಸೆಕ್‍ ದಿಂದ 4.10ಲಕ್ಷ ಕ್ಯುಸೆಕ್‍ ಪ್ರಮಾಣದ ಹೆಚ್ಚು ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.

ಇದರಿಂದಾಗಿ ನಡುಗಡ್ಡೆ ಪ್ರದೇಶಗಳಾದ ಕರಕಲಗಡ್ಡಿ, ವಂಕಮ್ಮನಗಡ್ಡಿ, ಮ್ಯಾದರಗಡ್ಡಿ, ತವದಗಡ್ಡಿಯ ಜಮೀನುಗಳು ಭಾಗಶಃ ಜಲಾವೃತಗೊಂಡಿದ್ದು ಕೆಲ ಜನರು ನಡುಗಡ್ಡೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಕೃಷ್ಣಾ ನದಿ ತಟದ ಶೀಲಹಳ್ಳಿ, ಹಂಚಿನಾಳ, ಕಡದರಗಡ್ಡಿ, ಯರಗೋಡಿ, ಗೋನವಾಟ್ಲ, ಗುಂತಗೋಳ, ಐದಭಾವಿ, ಟಣಮಕಲ್‍, ಗದ್ದಗಿ, ಸೇರಿದಂತೆ ದೊಡ್ಡಿ ಮತ್ತು ತಾಂಡಾಗಳ ನೂರಾರು ಹೆಕ್ಟೇರ್ ಜಮೀನು ಮುಳುಗಡೆಯಾಗಿದೆ. ಹತ್ತಿ, ಸಜ್ಜೆ, ಸೂರ್ಯಕಾಂತಿ, ಶೇಂಗಾ, ಹೆಸರು, ರೇಷ್ಮೆ, ದಾಳಿಂಬೆ, ಪಪ್ಪಾಯ ಸೇರಿದಂತೆ ಇತರೆ ಬೆಳೆಗಳು ಜಲಾವೃತಗೊಂಡಿವೆ.

‘ಜಮೀನುಗಳಲ್ಲಿ ಒಂದು ವಾರದಿಂದ ನೀರು ನಿಂತಿದ್ದರಿಂದ ಫಸಲು ಪಡೆಯುವ ಸಾಧ್ಯತೆಗಳು ಕ್ಷೀಣಿಸಿವೆ. ಇದೆ ಸ್ಥಿತಿ ಮುಂದುವರೆದರೆ ರೈತರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಕಳೆದ ವರ್ಷದ ಬೆಳೆ ನಷ್ಟ ಪರಿಹಾರ ದುರ್ಬಳಕೆ ಮಾಡಿಕೊಂಡ ತಾಲ್ಲೂಕು ಆಡಳಿತ ಬಿಡಿಕಾಸು ನೀಡಿಲ್ಲ‘ ಎಂದು ರೈತರಾದ ವೀರೇಶ, ಹುಲಿಗೆಮ್ಮ, ಅಮರಪ್ಪ ಅಳಲು ತೋಡಿಕೊಂಡಿದ್ದಾರೆ.

‘ಕೃಷ್ಣಾ ನದಿ ತಟದಲ್ಲಿ ಪ್ರವಾಹದಿಂದ 87ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯು ಜಲಾವೃತಗೊಂಡಿದೆ. ಪ್ರವಾಹದ ಏರಿಳಿತದಿಂದ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಬೇಗ ಪ್ರವಾಹ ಇಳಿದರೆ ಅಷ್ಟೇನು ಬೆಳೆನಷ್ಟ ಆಗದು, ಇದೇ ಸ್ಥಿತಿ ಮುಂದುವರೆದರೆ ಹೆಚ್ಚು ನಷ್ಟ ಸಂಭವಿಸುವ ಸಾಧ್ಯತೆಗಳಿವೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಹವಲ್ದಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT