ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ಅನುದಾನ ಕೊರತೆ: ಮುಳ್ಳು ಗಿಡಗಳಲ್ಲಿ ಮರೆಯಾದ ವಿತರಣಾ ನಾಲೆಗಳು

ಮಂಜುನಾಥ ಎನ್.ಬಳ್ಳಾರಿ
Published 28 ಅಕ್ಟೋಬರ್ 2023, 6:10 IST
Last Updated 28 ಅಕ್ಟೋಬರ್ 2023, 6:10 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ ಉಪ ವಿಭಾಗ ವ್ಯಾಪ್ತಿಯ ತುಂಗಭದ್ರ ಎಡದಂಡೆ ವಿತರಣಾ ಕಾಲುವೆಗಳ ಸುತ್ತಮುತ್ತ ಮುಳ್ಳಿನ ಗಿಡಗಳು ಬೆಳೆದು ಕ್ರಮೇಣ ಕಾಲುವೆಗಳು ಕಾಣದಂತಾಗುತ್ತಿವೆ.

ಅನುದಾನದ ಕೊರತೆಯಿಂದ ನಿರ್ವಹಣೆ ಸಾಧ್ಯವಾಗದೆ ನಾಲೆ ಮತ್ತು ರಸ್ತೆಗಳು ಹಾಳಾಗುತ್ತಿದ್ದು, ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯ ಕಾಲುವೆಯ ಮೈಲ್ 71ರಿಂದ 86 ಮತ್ತು 62ರಿಂದ 74ರ ವರೆಗೆ 8 ವಿತರಣಾ ಕಾಲುವೆಗಳನ್ನು 2009ರಿಂದ 2014ರ ಅವಧಿಯಲ್ಲಿ ಮೆಕ್ಯಾನಿಕಲ್ ಪೇವರ್ ಲೈನಿಂಗ್ ಕಾಮಗಾರಿ ಕೈಗೊಳ್ಳುವ ಮೂಲಕ ಅಂದಿನ ಸರ್ಕಾರ ಶಾಶ್ವತ ದುರಸ್ತಿಗೆ ಕ್ರಮ ಕೈಗೊಂಡಿತ್ತು.

ಶಾಶ್ವತ ದುರಸ್ತಿಯ ನಂತರ ಹೊರಗುತ್ತಿಗೆ ಆಧಾರದಲ್ಲಿ ನೀರು ನಿರ್ವಹಣೆ ಮಾಡುವ ಕೂಲಿ ಕಾರ್ಮಿಕರ ವೇತನ ಹೊರತುಪಡಿಸಿ ಹೆಚ್ಚುವರಿ ಅನುದಾನ ಬಿಡುಗಡೆಯಾಗದ ಕಾರಣ ನಾಲೆಗಳ ವ್ಯಾಪ್ತಿಯ ಜಂಗಲ್ ಕ್ಲಿಯರನ್ಸ್‌ ಮತ್ತು ಸೇವಾ ರಸ್ತೆಗಳ ದುರಸ್ತಿ ಸೇರಿದಂತೆ ಸಣ್ಣಪುಟ್ಟ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಲುವೆಗಳು ಮುಳ್ಳು ಗಿಡಗಳಿಂದ ಮುಚ್ಚಿ ಹೋಗಿವೆ.

ಪ್ರಸ್ತುತ ಕವಿತಾಳ ಉಪ ವಿಭಾಗದಲ್ಲಿ ಒಬ್ಬ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಇಬ್ಬರು ಸಹಾಯಕ ಎಂಜಿನಿಯರ್ ಮತ್ತು ಒಬ್ಬ ಕಿರಿಯ ಎಂನಿಜಿಯರ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಹಾಯಕ ಎಂಜಿನಿಯರ್ (2), ಕಿರಿಯ ಎಂಜಿನಿಯರ್ (3), ಕಂದಾಯ ನಿರೀಕ್ಷಕ, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕ ಮತ್ತು ಬೆರಳಚ್ಚುಗಾರ ತಲಾ ಒಂದು ಹುದ್ದೆ ಖಾಲಿ ಇವೆ.

‘ಕಾಲುವೆ ಪಕ್ಕದ ಸೇವಾ ರಸ್ತೆಯಲ್ಲಿ ಮುಳ್ಳು ಗಿಡಗಳು ಬೆಳೆದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಮತ್ತು ವಿತರಣಾ ನಾಲೆಗಳ ಬಳಿ ಸುಳಿಯದಂತಾಗಿದೆ. ಮುಳ್ಳು ಗಿಡಗಳ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ರೈತರಾದ ಡಿ.ಮುರಳಿ, ಎಂ.ಬಾಲು, ಆರ್.ಸತ್ಯನಾರಾಯಣ, ಎನ್.ಆದಿನಾರಾಯಣ ಒತ್ತಾಯಿಸಿದರು.

‘ರೈತರ ಜಮೀನುಗಳಿಗೆ ನೀರು ಪೂರೈಸಲು ಸಮಸ್ಯೆ ಇಲ್ಲ. ಸೇವಾ ರಸ್ತೆಯಲ್ಲಿ ಗಿಡಗಳು ಬೆಳೆದ ಕಾರಣ ರೈತರು ಮತ್ತು ಕಾಲುವೆ ನಿರ್ವಹಣೆ ಮಾಡುವ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ’ ಎಂದು ಕಿರಿಯ ಎಂಜಿನಿಯರ್ ಮೆಹಬೂಬ್ ಸಾಬ್ ಹೇಳಿದರು.

ಕಾಲುವೆಯನ್ನು ನಂಬಿಕೊಂಡು ಸಾವಿರಾರು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನಾಲೆ ರಸ್ತೆ ದುರಸ್ತಿ ಮಾಡುವ ಮೂಲಕ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಬೇಕು.
ವೈ.ರಮೇಶ ರೈತ 73 ಕ್ಯಾಂಪ್
ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಹಾಗೂ ಬೇಸಿಗೆ ಅವಧಿಯಲ್ಲಿ ನಿರ್ವಹಣೆಗೆ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲು ಅನುಮತಿ ಕೋರಲಾಗಿದೆ. ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು.
ವಿಜಯಲಕ್ಷ್ಮಿ ಪಾಟೀಲ ಪ್ರಭಾರ ಇಇ ಜಲಸಂಪನ್ಮೂಲ ಇಲಾಖೆ ಸಿರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT