ಭಾನುವಾರ, ಸೆಪ್ಟೆಂಬರ್ 19, 2021
24 °C

ರಾಯಚೂರು: ಕೃಷ್ಣಾನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರು ರೈತರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರು ರೈತರನ್ನು ಎನ್ ಡಿ ಆರ್ ಎಫ್ ಹಾಗೂ ಎಸ್ ಟಿ ಆರ್ ಎಫ್ ತಂಡದವರು ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಆಹಾರವಿಲ್ಲದೆ ಸಂಕಷ್ಟಕ್ಕೀಡಾಗಿದ್ದ ನಿರುಪಾದಪ್ಪ, ಹುಲಗಪ್ಪ ಹಾಗೂ ದುರುಗಪ್ಪ ಅವರು ಸುರಕ್ಷಿತವಾಗಿ ನಡುಗಡ್ಡೆಯಿಂದ ಹೊರಬಂದಿದ್ದಾರೆ.

ರೈತರು ನಡುಗಡ್ಡೆಯಲ್ಲಿ ಸಿಲುಕಿರುವ ಬಗ್ಗೆ ಶನಿವಾರ ರಾತ್ರಿ 9 ಗಂಟೆಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಹಿತಿ ತಲುಪಿತು. ಕೂಡಲೇ ನದಿತೀರದತ್ತ ಕಾರ್ಯಾಚರಣೆಗಾಗಿ  ರಾತ್ರಿಯೇ ಧಾವಿಸಲು ಸೂಚಿಸಲಾಯಿತು. 10 ಗಂಟೆಯಿಂದ ಯೋಜನೆ ರೂಪಿಸಿಕೊಂಡು, ಕಾರ್ಯಾಚರಣೆ ಆರಂಭಿಸಿದ ಪ್ರವಾಹ ನಿರ್ವಹಣಾ ತಂಡದವರು ರೈತರನ್ನು ರಾತ್ರಿ 11.50 ಕ್ಕೆ ಯಂತ್ರಚಾಲಿತ ಬೋಟ್ ನಲ್ಲಿ ಕರೆತಂದರು.

ತವದಗಡ್ಡಿಯಲ್ಲಿದ್ದ ಜಮೀನಿನಲ್ಲಿ ಕೃಷಿಕಾರ್ಯಕ್ಕಾಗಿ ಶುಕ್ರವಾರ ಬೆಳಿಗ್ಗೆ ರೈತರು ಹೋಗಿದ್ದರು. ಸ್ವಲ್ಪಮಟ್ಟದ ಪ್ರವಾಹದಲ್ಲಿ ಎಂದಿನಂತೆ ಈಜಿಕೊಂಡು ಹೊರಬರುವ ವಿಶ್ವಾಸದಲ್ಲಿ ರೈತರು ಉಳಿದಿದ್ದರು. ಆದರೆ ಒಂದೇ ದಿನದಲ್ಲಿ ಪ್ರವಾಹಮಟ್ಟ 3 ಲಕ್ಷ ಕ್ಯಸೆಕ್ ಗೆ ಏರಿಕೆ ಆಗಿದ್ದರಿಂದ ಈಜಲು ಯತ್ನಿಸಿದರೂ ಆತಂಕಗೊಂಡು ಹೊರಬರಲು ಸಾಧ್ಯವಾಗಿರಲಿಲ್ಲ. ತಾಲ್ಲೂಕು ತಹಶೀಲ್ದಾರ್ ಅವರಿಗೆ ಈ ಬಗ್ಗೆ ಸಂಬಂಧಿಗಳು ಮಾಹಿತಿ ನೀಡಿದ್ದರು. 

ಆದರೆ, ವಿವಿಧೆಡೆ ನದಿತೀರ ಪರಿಸ್ಥಿತಿ ಪರಿಶೀಲಿಸಲು ಹೋಗಿದ್ದ ನೂತನ ಜಿಲ್ಲಾಧಿಕಾರಿ ಡಾ.ಸತೀಶ್ ಅವರೊಂದಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೆಲ್ಲ ದಿನವಿಡೀ ಇದ್ದರು.

ರಾತ್ರಿಯಾದ ಬಳಿಕ ರೈತರ ಸಂಬಂಧಿಗಳು ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಲಿಂಗಸುಗೂರು ತಾಲ್ಲೂಕು ತಹಶೀಲ್ದಾರ್ ಸೇರಿ ಪ್ರವಾಹ ನಿರ್ವಹಣಾ ಅಧಿಕಾರಿಗಳೆಲ್ಲ ಕಾರ್ಯಾಚರಣೆ ಮುಗಿಯುವವರೆಗೆ ನದಿ ತೀರದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು