ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊರಾರ್ಜಿ ದೇಸಾಯಿ ವಸತಿ ಶಾಲೆ: ಖಾಸಗಿ ಕಟ್ಟಡದಲ್ಲಿ ಮೂಲಸೌಕರ್ಯ ಮರೀಚಿಕೆ

ವಿದ್ಯಾರ್ಥಿಗಳ ಪೋಷಕರ ಅಸಮಾಧಾನ
ಡಿ.ಎಚ್. ಕಂಬಳಿ
Published 31 ಮೇ 2024, 5:56 IST
Last Updated 31 ಮೇ 2024, 5:56 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನ ಡಾಲರ್ಸ್ ಕಾಲೊನಿಯ ಪರಿಶಿಷ್ಟ ಜಾತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ ಎಂಬ ಆರೋಪ ಕೇಳಿದೆ.

ಕಳೆದ 7 ವರ್ಷಗಳಿಂದ ವಸತಿ ಶಾಲೆಯು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು, ತಿಂಗಳಿಗೆ ₹ 3,47,568 ಬಾಡಿಗೆ ಪಾವತಿಸಲಾಗುತ್ತಿದೆ. 2023-24ನೇ ಸಾಲಿನಲ್ಲಿ 119 ಬಾಲಕಿಯರು, 118 ಬಾಲಕರು ಸೇರಿ ಒಟ್ಟು 237 ವಿದ್ಯಾರ್ಥಿಗಳು 6 ರಿಂದ 10ನೇ ತರಗತಿಯವರೆಗೆ ಅಭ್ಯಾಸ ಮಾಡುತ್ತಿದ್ದಾರೆ. ಈ ಕಟ್ಟಡದಲ್ಲಿ 11 ಕೊಠಡಿಗಳಿದ್ದು, ಮೇಲ್ಭಾಗದ 4 ಕೊಠಡಿಗಳನ್ನು ವಸತಿಗಾಗಿ, ಕೆಳಭಾಗದ 7 ಕೊಠಡಿಗಳನ್ನು ತರಗತಿಗಳು ಮತ್ತು ಕಚೇರಿಗಾಗಿ ಬಳಸಿಕೊಳ್ಳಲಾಗುತ್ತಿದೆ.

ಮೇಲ್ಭಾಗದ ನಾಲ್ಕು ಕೊಠಡಿಗಳಲ್ಲಿ ಬಾಲಕರು ಮತ್ತು ಬಾಲಕಿಯರು ಪ್ರತ್ಯೇಕವಾಗಿ ತಲಾ ಎರಡು ಕೊಠಡಿಗಳಲ್ಲಿ ವಾಸ ಮಾಡುತ್ತಿದ್ದು, ಟ್ರಂಕ್, ಬಟ್ಟೆ, ಪುಸ್ತಕಗಳನ್ನು ತುಂಬಿರುವುದರಿಂದ ಮಲಗಲು ಜಾಗವಿಲ್ಲದಂತಾಗಿದೆ.

ಕೆಳಭಾಗದಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕವಾಗಿ 8 ಶೌಚಾಲಯಗಳು, 8 ಸ್ನಾನಗೃಹಗಳಿವೆ. ಅವುಗಳಿಗೆ ಬಾಗಿಲುಗಳೇ ಇಲ್ಲ. ಶೌಚಾಲಯದ ಪಕ್ಕದಲ್ಲಿಯೇ ಕುಡಿಯುವ ನೀರಿನ ಸಂಪ್ ಇದ್ದು, ಶೌಚದ ನೀರು ಅದರಲ್ಲಿ ಮಿಶ್ರಣವಾಗಿದೆ ಎಂದು ವಿದ್ಯಾರ್ಥಿಗಳ ಪೋಷಕರಾದ ಸೋಮನಾಥ ಗೋನಾಳ, ನಿರುಪಾದಿ ಹಚ್ಚೊಳ್ಳಿ, ಹುಸೇನಪ್ಪ ರೈತನಗರ ಕ್ಯಾಂಪ್ ಆರೋಪಿಸಿದ್ದಾರೆ.

ಅಡುಗೆ ಸಾಮಗ್ರಿ ಹಾಗೂ ದಾಸ್ತಾನುಗಳನ್ನು ತರಗತಿ ಕೊಠಡಿಗಳಲ್ಲಿ ಇಟ್ಟಿರುವುದರಿಂದ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಕಷ್ಟವಾಗಿದೆ. ಕೊಠಡಿಗಳ ಬಾಗಿಲುಗಳು ಮುರಿದಿವೆ. ಕಿಟಕಿಯ ಜಾಲರಿಗಳು ಹರಿದಿವೆ. ಗ್ರಂಥಾಲಯ, ಕಂಪ್ಯೂಟರ್ ರೂಮ್, ವಿಜ್ಞಾನ ಪ್ರಯೋಗಾಲಯಕ್ಕೆ ಕೊಠಡಿಗಳಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದೆ. ಕಟ್ಟಡದ ಸಮಸ್ಯೆ ಕುರಿತು ಮಾಲೀಕ ನಾರಾಯಣಪ್ಪ ಕಿಲ್ಲೇದ ಅವರ ಗಮನಕ್ಕೆ ಅನೇಕ ಬಾರಿ ತಂದರೂ ಸ್ಪಂದಿಸಿಲ್ಲ ಎಂದು ಪ್ರಾಚಾರ್ಯ ರಾಮಣ್ಣ ಆರೋಪಿಸಿದ್ದಾರೆ.

ಜನವರಿ 12, 2024ರಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶಕರು ಶಾಲೆಗೆ ಭೇಟಿ ನೀಡಿದ್ದು, ಸೌಕರ್ಯಗಳ ಕೊರತೆ ಇರುವುದನ್ನು ಗಮನಿಸಿ, ಕಟ್ಟಡ ಬೇರೆಡೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತೆದಾರ ಅವರು ಸಹ ಕಟ್ಟಡದ ಮಾಲೀಕರಿಗೆ ಮೂಲಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದರೂ ಸಹ ಮಾಲೀಕರು ಸ್ಪಂದಿಸಿಲ್ಲ ಎಂದು ದೂರಿದ್ದಾರೆ.

ಶಾಲೆ ಸ್ಥಳಾಂತರದ ಕುರಿತು ಕ್ರೈಸ್‌ ಸಹಾಯಕ ಕಾರ್ಯನಿರ್ವಾಹಕ ನಿರ್ದೇಶಕರ ಗಮನಕ್ಕೆ ತಂದು, ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು
ಮಹೇಶ ಪೋತೆದಾರ, ಜಿಲ್ಲಾ ಉಪನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ರಾಯಚೂರು
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊಠಡಿಗಳು, ಶೌಚಾಲಯ, ಕುಡಿಯುವ ನೀರು, ಮೈದಾನ ಸೇರಿದಂತೆ ಅನೇಕ ಮೂಲಸೌಕರ್ಯಗಳ ಸಮಸ್ಯೆಗಳಿವೆ. 2020 ರಿಂದಲೂ ಕಟ್ಟಡದ ಮಾಲೀಕರ ಗಮನಕ್ಕೆ ತಂದಾಗ್ಯೂ ಸರಿಯಾಗಿ ಸ್ಪಂದನೆ ನೀಡಿಲ್ಲ
ರಾಮಣ್ಣ ಪ್ರಾಚಾರ್ಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಿಂಧನೂರು
ನನ್ನ ಕಟ್ಟಡದಲ್ಲಿ ಎಲ್ಲ ಮೂಲಸೌಕರ್ಯಗಳಿವೆ. ಆದಾಗ್ಯೂ ಗೊರೇಬಾಳ ಗ್ರಾಮದ ಕಟ್ಟಡಕ್ಕೆ ಸ್ಥಳಾಂತರ ಮಾಡುತ್ತಿರುವ ಹಿಂದಿನ ಗುಟ್ಟೇನು ಅರ್ಥವಾಗುತ್ತಿಲ್ಲ. ಅಲ್ಲಿ ಮಕ್ಕಳಿಗೆ ತೊಂದರೆಯಾದರೆ ತಾಲ್ಲೂಕಿನ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಈ ಬಗ್ಗೆ ಲೋಕಾಯುಕ್ತ ಪೆÇಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತೇನೆ
ನಾರಾಯಣಪ್ಪ ಕಿಲ್ಲೇದ್ ಕಟ್ಟಡ ಮಾಲೀಕ ಸಿಂಧನೂರು
ಶಾಲೆ ಸ್ಥಳಾಂತರಕ್ಕೆ ಶಾಸಕರ ಪತ್ರ
ಪ್ರಸ್ತುತ ಕಟ್ಟಡದಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಕಟ್ಟಡದ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಹೀಗಾಗಿ ಗ್ರಾಮೀಣ ಬಡ ಮಕ್ಕಳ ಶೈಕ್ಷಣಿಕ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಗೊರೇಬಾಳ ಗ್ರಾಮದ ಕಟ್ಟಡಕ್ಕೆ ಸ್ಥಳಾಂತರಗೊಳಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT