ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನ್ವಿ: ಕಲ್ಯಾಣ ಚಾಲುಕ್ಯರ ಕಾಲದ ಕಲ್ಲಿನ ಕೋಟೆ ಕಡೆಗಣನೆ

ಗತವೈಭವ ಸಾರುವ ಕಿಲ್ಲಾ, ಬುರುಜು, ಕೆರೆ, ಪುರಾತನ ಸ್ಮಾರಕಗಳಿಗಿಲ್ಲ ರಕ್ಷಣೆ
ಬಸವರಾಜ ಭೋಗಾವತಿ
Published : 23 ಸೆಪ್ಟೆಂಬರ್ 2024, 5:50 IST
Last Updated : 23 ಸೆಪ್ಟೆಂಬರ್ 2024, 5:50 IST
ಫಾಲೋ ಮಾಡಿ
Comments

ಮಾನ್ವಿ (ರಾಯಚೂರು ಜಿಲ್ಲೆ): ಹರಿದಾಸರು, ಶರಣರು ಜನಸಿದ ಭವ್ಯ ಪರಂಪರೆ ಹೊಂದಿರುವ ಮಾನ್ವಿ ತಾಲ್ಲೂಕು ಐತಿಹಾಸಿಕವಾಗಿ ಹಲವು ಮಹತ್ವದ ಸಂಗತಿಗಳನ್ನು ಒಳಗೊಂಡಿದೆ.

ಮಾನ್ವಿ ಪಟ್ಟಣದ ಬೃಹತ್ ಬೆಟ್ಟದಲ್ಲಿರುವ ಪುರಾತನ ಕಾಲದ ದೇವಸ್ಥಾನಗಳು, ದರ್ಗಾ ಹಾಗೂ ಕೋಟೆ ಕೊತ್ತಲುಗಳು, ಶಿಲಾಶಾಸನಗಳು ಇನ್ನಿತರ ಪುರಾತನ ಸ್ಮಾರಕಗಳು ನಾಡಿನ ಇತಿಹಾಸದಲ್ಲಿ ಗಮನಾರ್ಹ ಸ್ಥಾನ ಪಡೆದಿವೆ. ಇಂತಹ ಹಲವು ಪಾರಂಪರಿಕ ತಾಣಗಳು ಸೂಕ್ತ ರಕ್ಷಣೆ, ಅಭಿವೃದ್ಧಿ ಕಾಣದೆ ಕಡೆಗಣಿಸಲ್ಪಟ್ಟಿದೆ.

ಮಾನ್ವಿ ಪಟ್ಟಣದ ಬೆಟ್ಟದಲ್ಲಿ ಸುಮಾರು 3.5 ಕಿ.ಮೀ. ಉದ್ದದ ಕಲ್ಲಿನ ಕೋಟೆ  ಶಿಥಿಲಗೊಂಡು ಪಾಳುಬಿದ್ದಿದೆ. ಕ್ರಿ.ಶ 11-12ನೇ ಶತಮಾನದಲ್ಲಿ ಕಲ್ಯಾಣ ಚಾಳುಕ್ಯರ ಆಳ್ವಿಕೆಯಲ್ಲಿ ಈ ಬೃಹತ್ ಕಲ್ಲಿನ ಕೋಟೆ ನಿರ್ಮಿಸಲಾಗಿತ್ತು ಎಂದು ದಾಖಲೆಗಳು ತಿಳಿಸುತ್ತವೆ. 

ಈ ಕೋಟೆಯ ತುತ್ತತುದಿಗೆ ಶತ್ರುಗಳ ದಾಳಿ ಕುರಿತು ಕಾವಲು ಕಾಯಲು ಸೈನಿಕರಿಗಾಗಿ ನಿರ್ಮಿಸಿದ ಒಂದು ಕಿಲ್ಲಾ (ಹುಡೆ), ಮೂರು ಬುರುಜುಗಳು ಇವೆ. ಕೋಟೆಯ ಕೆಳ ಭಾಗದಲ್ಲಿ ಕುಡಿಯುವ ನೀರಿಗಾಗಿ ಹೊಕ್ರಾಣಿ ಕೆರೆ ಮತ್ತು ಜುಮ್ಮಲದೊಡ್ಡಿ ಕೆರೆ ( ದಿಡ್ಡಿ ಕೆರೆ)ಗಳನ್ನು ನಿರ್ಮಿಸಲಾಗಿದ್ದು, ಈಗಲೂ ಈ ಕೆರೆಗಳಲ್ಲಿ ನೀರನ್ನು ಕಾಣಬಹುದು. ಬೆಟ್ಟದಲ್ಲಿರುವ ಕಥಾಲ ಹನುಮಪ್ಪ, ಕೋಟೆ ಹನುಮಪ್ಪ ದೇವಸ್ಥಾನಗಳನ್ನು ಕೋಟೆ ಸಮೇತ ನಿರ್ಮಿಸಲಾಗಿತ್ತು ಎನ್ನುವ ನಂಬಿಕೆ ಸ್ಥಳೀಯರಲ್ಲಿದೆ.

ವರ್ಷಗಳು ಕಳೆದಂತೆ ಬೆಟ್ಟದಲ್ಲಿನ ಕೋಟೆ ಪ್ರದೇಶ ಸಂರಕ್ಷಣೆಯಾಗದ ಕಾರಣ ಅಲ್ಲಿನ ಪುರಾತನ ಸ್ಮಾರಕಗಳು ಅವಸಾನದ ಅಂಚಿಗೆ ತಲುಪಿವೆ. ಕೋಟೆಯ ಒಳಭಾಗದಲ್ಲಿ ಶಾಸನಗಳು, ಮೂರ್ತಿ ಶಿಲ್ಪಗಳು ಹಾಗೂ ದೇವಾಲಯಗಳನ್ನು ನಿಧಿಗಳ್ಳರು ಧ್ವಂಸಗೊಳಿಸಿದ ಕುರುಹುಗಳು ಕಂಡು ಬರುತ್ತವೆ. ಕೋಟೆ ಶಿಥಿಲಾವಸ್ಥೆ ತಲುಪಿದೆ. ಬುರುಜುಗಳು ಅತಿಕ್ರಮಣಗೊಂಡಿವೆ. 

ಮಾನ್ವಿ ಪುರಸಭೆಯ ಲಾಂಛನ ‘ಕಿಲ್ಲಾ’

ಮಾನ್ವಿ ಪಟ್ಟಣದ ಬೆಟ್ಟದಲ್ಲಿ ಪುರಾತನ ಕೋಟೆಯ ತುದಿಯಲ್ಲಿ ಹುಡೆ ಅಥವಾ ಕಾವಲು ಕಮಾನು ಮಾದರಿಯ ಕಲ್ಲಿನ ಕಟ್ಟಡ ಇದೆ. ಇದು ಕೋಟೆಯ ಕಾವಲುಗಾರರಿಗಾಗಿ ನಿರ್ಮಿಸಲಾಗಿದ್ದ ಸ್ಥಳ ಎಂದು ಇತಿಹಾಸಕಾರರು ಹೇಳುತ್ತಾರೆ. ಸ್ಥಳೀಯರು ಇದನ್ನು 'ಕಿಲ್ಲಾ' ಎಂದು ಕರೆಯುತ್ತಾರೆ. ಮಾನ್ವಿ ಪುರಸಭೆ ಕಚೇರಿಯ ಲಾಂಛನವನ್ನಾಗಿ ಈ ‘ಕಿಲ್ಲಾ’ ಕಟ್ಟಡದ ಚಿತ್ರವನ್ನು ಬಳಸಿಕೊಳ್ಳುವ ಮೂಲಕ  ಮಾನ್ಯತೆ ನೀಡಲಾಗಿದೆ.

ಭಾವೈಕ್ಯದ ಸಂಕೇತ ದೇಗುಲ- ದರ್ಗಾ

ಬೃಹತ್ ಕೋಟೆ ಹೊಂದಿರುವ ಮಾನ್ವಿಯ ಬೆಟ್ಟದಲ್ಲಿ ಸುಮಾರು 450 ವರ್ಷಗಳ ಹಿಂದೆ ಮಲ್ಲಿಕಾರ್ಜುನ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಭ್ರಮರಾಂಬ ದೇವಿ ಗುಡಿ ಹಾಗೂ ಬೃಹತ್ತಾದ ಒಂದೇ ಕಲ್ಲುಗುಂಡಿನಲ್ಲಿ ಕೆತ್ತಿದ ನಂದಿ ಮೂರ್ತಿ ಇವೆ. ಮಲ್ಲಿಕಾರ್ಜುನ ದೇವಸ್ಥಾನದ ಸುತ್ತಮುತ್ತಲಿನಲ್ಲಿ ಐದು ಕುಡಿಯುವ ನೀರಿನ ಬಾವಿಗಳು ಇವೆ. ಈಗ ಸುಪ್ರಸಿದ್ಧ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನವಾಗಿದ್ದು ಪ್ರತಿ ವರ್ಷ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ.

ಇದೇ ಬೆಟ್ಟದಲ್ಲಿ ಸಬ್ಜಲಿ ಸಾಬ್ ದರ್ಗಾ ಇದ್ದು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ದೇವಸ್ಥಾನದ ಪ್ರದೇಶದಲ್ಲಿ ಈಚೆಗೆ ಅರಣ್ಯ ಇಲಾಖೆಯ ವತಿಯಿಂದ ಉದ್ಯಾನ ನಿರ್ಮಿಸಲಾಗಿದೆ. ಮಲ್ಲಿಕಾರ್ಜುನ ದೇವಾಲಯ ಹಾಗೂ ಸಬ್ಜಲಿ ಸಾಬ್ ದರ್ಗಾ ಸ್ಥಳೀಯರ ಭಾವೈಕ್ಯದ ಸಂಕೇತ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಮಾನ್ವಿ ಬೆಟ್ಟಕ್ಕೆ ಮತ್ತೊಂದು ಹೆಸರು ಸಂಜೀವಿನಿ ಬೆಟ್ಟ

ಬೃಹತ್ ಕೋಟೆ ಹೊಂದಿರುವ ಮಾನ್ವಿಯ ಬೆಟ್ಟವನ್ನು ಸಂಜೀವಿನಿ ಬೆಟ್ಟ ಎಂದೂ ಕರೆಯಲಾಗುತ್ತದೆ. ಪುರಾತನ ಕಾಲದಿಂದಲೂ ಈ ಬೆಟ್ಟದಲ್ಲಿ ಸಂಜೀವಿನಿ ಗಿಡಗಳು ಸೇರಿದಂತೆ ಹಲವಾರು ಔಷಧೀಯ ಗಿಡಮೂಲಿಕೆಗಳು ಇವೆ ಎಂಬುದು ಸ್ಥಳೀಯರ ನಂಬಿಕೆ.

ಬಂಡೆಗಲ್ಲುಗಳ ಮೇಲೆ ಪುರಾತನ ರೇಖಾಚಿತ್ರಗಳು

ಮಲ್ಲಿಕಾರ್ಜುನ ಬೆಟ್ಟದಲ್ಲಿ ಒಂದು ಗವಿ ಇದೆ. ಈ ಗವಿಯ ಬಂಡೆಗಲ್ಲುಗಳ ಮೇಲೆ ಕೆಂಪು ಬಣ್ಣದ ರೇಖಾಚಿತ್ರಗಳಿವೆ. ಈ ಚಿತ್ರಗಳನ್ನು ರಂಗೋಲಿ ಪಡಿ ಎಂದೂ ಕರೆಯಲಾಗುತ್ತದೆ. ಶತಮಾನಗಳೇ ಕಳೆದರೂ ಈ ಚಿತ್ರಗಳು ಹಾಗೂ ಬಣ್ಣಗಳು ಮಾಸದೆ ಗುಣಮಟ್ಟ ಹಾಗೆಯೇ ಉಳಿದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಉತ್ಸವದ ಮೆರವಣಿಗೆ, ವ್ಯಕ್ತಿ ಚಿತ್ರಗಳು ಹಾಗೂ ಪೌರಾಣಿಕ ಕಥಾನಕಗಳ ಕುರಿತು ಈ ಚಿತ್ರಗಳು ಮಾಹಿತಿ ನೀಡುತ್ತವೆ. ವ್ಯಕ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯ, ಮೀನಿನ ಬಲೆ ಹಾಗೂ ಬುಟ್ಟಿ ಹೊತ್ತುಕೊಂಡಿರುವ ವ್ಯಕ್ತಿಗಳು, ಸವಾರಿ ಬಂಡಿ, ನಂದಿ, ಕುದುರೆ, ಪಲ್ಲಕ್ಕಿಯಲ್ಲಿ ಈಶ್ವರಲಿಂಗ ಸಾಗಿರುವ ದೃಶ್ಯ ಸೇರಿದಂತೆ ಹಲವು ಬಗೆಯ ರೇಖಾಚಿತ್ರಗಳನ್ನು ಇಲ್ಲಿ ಬಿಡಿಸಲಾಗಿದೆ. 

ಮಾನ್ವಿ ಪಟ್ಟಣದ ಐತಿಹಾಸಿಕ ಕೋಟೆ ಮತ್ತು ಸುತ್ತಲಿನ ಮೂರ್ತಿ ಶಿಲ್ಪಗಳು, ಶಾಸನಗಳ ರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆ ಗಮನಹರಿಸಬೇಕು. ಸರ್ಕಾರ ಈ ಸ್ಥಳವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು.
–ಚನ್ನಬಸಪ್ಪ ಮಲ್ಕಂದಿನ್ನಿ, ಇತಿಹಾಸ ಪ್ರಾಧ್ಯಾಪಕ, ಮಾನ್ವಿ
ಪುರಾತನ ಕೋಟೆ ಪ್ರದೇಶದ ಸಂರಕ್ಷಣೆಗೆ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಲಿಖಿತ ದೂರು ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಈಗಲಾದರೂ ಅಗತ್ಯ ಕ್ರಮ ಕೈಗೊಳ್ಳಬೇಕು.
–ಸಾಜಿದ್ ಖಾದ್ರಿ, ಸಾಮಾಜಿಕ ಕಾರ್ಯಕರ್ತ, ಮಾನ್ವಿ
ಶಿಥಿಲಗೊಂಡಿರುವ ಮಾನ್ವಿಯ ಪುರಾತನ ಕೋಟೆ
ಶಿಥಿಲಗೊಂಡಿರುವ ಮಾನ್ವಿಯ ಪುರಾತನ ಕೋಟೆ
ಮಾನ್ವಿ ಬೆಟ್ಟದ ಕೋಟೆ ಪ್ರದೇಶಕ್ಕೆ ಹೊಂದಿಕೊಂಡಿರುವ ಪುರಾತನ ಹೊಕ್ರಾಣಿ ಕೆರೆ
ಮಾನ್ವಿ ಬೆಟ್ಟದ ಕೋಟೆ ಪ್ರದೇಶಕ್ಕೆ ಹೊಂದಿಕೊಂಡಿರುವ ಪುರಾತನ ಹೊಕ್ರಾಣಿ ಕೆರೆ
 ಮಾನ್ವಿ ಬೆಟ್ಟದಲ್ಲಿರುವ ಬುರುಜು
 ಮಾನ್ವಿ ಬೆಟ್ಟದಲ್ಲಿರುವ ಬುರುಜು
ಮಾನ್ವಿ ಬೆಟ್ಟದಲ್ಲಿರುವ ಪುರಾತನ ಮಲ್ಲಿಕಾರ್ಜುನ ದೇವಾಲಯ
ಮಾನ್ವಿ ಬೆಟ್ಟದಲ್ಲಿರುವ ಪುರಾತನ ಮಲ್ಲಿಕಾರ್ಜುನ ದೇವಾಲಯ
ಮಾನ್ವಿ ಬೆಟ್ಟದ ಮಲ್ಲಿಕಾರ್ಜುನ ದೇವಾಲಯ ಮುಂಭಾಗದಲ್ಲಿರುವ ನಂದಿ ಮೂರ್ತಿ
ಮಾನ್ವಿ ಬೆಟ್ಟದ ಮಲ್ಲಿಕಾರ್ಜುನ ದೇವಾಲಯ ಮುಂಭಾಗದಲ್ಲಿರುವ ನಂದಿ ಮೂರ್ತಿ
ಮಾನ್ವಿ ಪಟ್ಟಣದ ಬೆಟ್ಟದ ಗವಿಯಲ್ಲಿ ಬಂಡೆಗಲ್ಲುಗಳ ಮೇಲೆ ಬಿಡಿಸಿರುವ ಪುರಾತನ ರೇಖಾಚಿತ್ರಗಳು
ಮಾನ್ವಿ ಪಟ್ಟಣದ ಬೆಟ್ಟದ ಗವಿಯಲ್ಲಿ ಬಂಡೆಗಲ್ಲುಗಳ ಮೇಲೆ ಬಿಡಿಸಿರುವ ಪುರಾತನ ರೇಖಾಚಿತ್ರಗಳು
ಮಾನ್ವಿ ಬೆಟ್ಟದಲ್ಲಿರುವ ಸಬ್ಜಲಿ ಸಾಬ್ ದರ್ಗಾ
ಮಾನ್ವಿ ಬೆಟ್ಟದಲ್ಲಿರುವ ಸಬ್ಜಲಿ ಸಾಬ್ ದರ್ಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT