ಸಿಂಧನೂರು: ತಾಲ್ಲೂಕಿನ ಯದ್ದಲದೊಡ್ಡಿ ಗ್ರಾಮದ ವಕೀಲ ಮೌನೇಶ ಹಾಗೂ ಅವರ ತಂದೆ ದ್ಯಾವಣ್ಣ ಅವರ ಮೇಲೆ ಮಳೆ ನೀರಿನ ಸಂಬಂಧವಾಗಿ ಅದೇ ಗ್ರಾಮದ ಹುಸೇನ್‍ಸಾಬ ಹಾಗೂ ಅವರ ಮಕ್ಕಳಾದ ಶರೀಫ್ ಮತ್ತು ಬಂದೇಸಾಬ ಹಲ್ಲೆ ಮಾಡಿದ್ದು, ಇದನ್ನು ಖಂಡಿಸಿ ವಕೀಲರ ಸಂಘದ ತಾಲ್ಲೂಕು ಘಟಕ ಬುಧವಾರ ನ್ಯಾಯಾಲಯದ ಕಾರ್ಯಕಲಾಪ ಬಹಿಷ್ಕರಿಸಿ ಶಹರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಹಲ್ಲೆ ಕುರಿತು ಬಳಗಾನೂರು ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದ ಕುರಿತು ವಕೀಲ ಮೌನೇಶ, ವಕೀಲ ಅಕ್ಬರ್ ಕಂದಗಲ್ ಅವರಿಗೆ ಬುಧವಾರ ಮಾಹಿತಿ ನೀಡಿದರು. ಕಂದಗಲ್ ಅವರು ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡರಿಗೆ ಮನವಿ ಸಲ್ಲಿಸಿ ವಕೀಲರ ಮೇಲೆ ಹಲ್ಲೆಯಾದರೂ ಪ್ರಕರಣ ದಾಖಲಾಗಿಲ್ಲ. ನ್ಯಾಯ ಕೊಡಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ ಅವರು ತುರ್ತು ಸಭೆ ಕರೆದು ಎಲ್ಲ ವಕೀಲರ ಅಭಿಪ್ರಾಯದಂತೆ ನ್ಯಾಯಾಲಯದ ಕಾರ್ಯಕಲಾಪ ಬಹಿಷ್ಕರಿಸಲು ನಿರ್ಧರಿಸಿ ಠಾಣೆ ಆವರಣದಲ್ಲಿ ಕುಳಿತು ಪ್ರತಿಭಟಿಸಿದರು. ಡಿವೈಎಸ್‍ಪಿ ಬಿ.ಎಸ್.ತಳವಾರ ಠಾಣೆಗೆ ಆಗಮಿಸಿ ವಕೀಲರೊಂದಿಗೆ ಮಾತುಕತೆ ನಡೆಸಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದರು. ಅದರನ್ವಯ ಪ್ರಕರಣ ದಾಖಲಾಗಿದೆ.