ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು ಪುರಸಭೆ: ಬಣ ಮೇಲಾಟ ಬಿಜೆಪಿಗೆ ತೀವ್ರ ಮುಖಭಂಗ

ಹೂಲಗೇರಿ ಬಣ ಮೇಲುಗೈ, ಬಯ್ಯಾಪುರ ಬಣಕ್ಕೆ ಹಿನ್ನಡೆ, ಬಿಜೆಪಿಗೆ ಮುಖಭಂಗ
ಬಿ.ಎ. ನಂದಿಕೋಲಮಠ
Published : 2 ಅಕ್ಟೋಬರ್ 2024, 5:17 IST
Last Updated : 2 ಅಕ್ಟೋಬರ್ 2024, 5:17 IST
ಫಾಲೋ ಮಾಡಿ
Comments

ಲಿಂಗಸುಗೂರು: ಕಾಂಗ್ರೆಸ್‍ ಬಣಗಳಿಗೆ ಪ್ರತಿಷ್ಠೆಯಾಗಿದ್ದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಾಬುರಡ್ಡಿ ಮುನ್ನೂರು, ಉಪಾಧ್ಯಕ್ಷರಾಗಿ ಶರಣಮ್ಮ ಕೊಡ್ಲಿ ಅವಿರೋಧ ಆಯ್ಕೆಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಮಾಜಿ ಶಾಸಕ ಡಿ.ಎಸ್‍ ಹೂಲಗೇರಿ ಬಣದ ಕಾಂಗ್ರೆಸ್‍ ಕಾರ್ಯಕರ್ತರು ಮಂಗಳವಾರ ಫುಟ್‌ಬಾಲ್‍ ಆಡಿ ವಿಜಯೋತ್ಸವ ಆಚರಿಸಿದರು.

ಪುರಸಭೆ 23 ಸ್ಥಾನಗಳ ಪೈಕಿ ಕಾಂಗ್ರೆಸ್‍ 13, ಜೆಡಿಎಸ್‍ 4, ಬಿಜೆಪಿ 2, ಪಕ್ಷೇತರರು 4 ಸ್ಥಾನಗಳಲ್ಲಿ ಜಯ ಸಾಧಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಆರೋಪದಡಿ ಕಾಂಗ್ರೆಸ್‍ ಪಕ್ಷದ 4 ಸದಸ್ಯರನ್ನು ಅನರ್ಹಗೊಳಿಸಲಾಗಿತ್ತು. ಹೈಕೋರ್ಟ್‌ ತಡೆಯಾಜ್ಞೆ ಮುಂದಿಟ್ಟು ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಬಣವು ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಿ ಹೂಲಗೇರಿ ಅವರಿಗೆ ಹಿನ್ನೆಡೆ ಉಂಟಾಗುವಂತೆ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

ಇದಕ್ಕೆ ಬಿಜೆಪಿ ಶಾಸಕ ಮಾನಪ್ಪ ವಜ್ಜಲ ತಮ್ಮ ಪಕ್ಷದ ಇಬ್ಬರು ಸದಸ್ಯರು ಸೇರಿದಂತೆ ಜೆಡಿಎಸ್‍ನ 2, ಪಕ್ಷೇತರ 1 ಸದಸ್ಯರನ್ನು ಬಯ್ಯಾಪುರ ಬಣಕ್ಕೆ ಬೆಂಬಲ ಸೂಚಿಸಿದ್ದರು. ತಮ್ಮ ಬೆಂಬಲಿತರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಭರವಸೆಯೊಂದಿಗೆ ಬಯ್ಯಾಪುರ ಬಣಕ್ಕೆ ಬೆಂಬಲಿಸಿದ್ದರು. ಆದರೆ, ಬಯ್ಯಾಪುರ ಬಣದ ಸದಸ್ಯರು ಕೈಕೊಟ್ಟಿದ್ದರಿಂದ ಬಿಜೆಪಿ ತೀವ್ರ ಮುಖಭಂಗ ಎದುರಿಸುವಂತಾಯಿತು.

ಸಂಸದ, ಶಾಸಕರು ಒಳಗೊಂಡು ಒಟ್ಟು 26 ಸದಸ್ಯರ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಾಂಗ್ರೆಸ್‍ ಅಭ್ಯರ್ಥಿ ಬೆಂಬಲಿಸಿ ಸಂಸದ ಜಿ. ಕುಮಾರ ನಾಯಕ ಸೇರಿದಂತೆ ಪಕ್ಷೇತರರು, ಜೆಡಿಎಸ್‍ ಸೇರಿ ಒಟ್ಟು 14 ಸದಸ್ಯರು ಬಲಾಬಲ ಪ್ರದರ್ಶಿಸಿದರು. ಶಾಸಕ ಮಾನಪ್ಪ ವಜ್ಜಲ, ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಸೇರಿದಂತೆ ಬಿಜೆಪಿ, ಜೆಡಿಎಸ್‍, ಬಂಡಾಯ ಕಾಂಗ್ರೆಸ್‍ನ ಒಟ್ಟು 12 ಸದಸ್ಯರು ಗೈರಾಗಿದ್ದರು.

ಸ್ಥಳೀಯವಾಗಿ ಮುನ್ನೂರು ಕಾಪು ಮುಖಂಡರ ನಾಯಕತ್ವದಲ್ಲಿ ಪುರಸಭೆ ಆಡಳಿತ ಹಿಡಿತ ಹೊಂದಿರುತ್ತಿತ್ತು. 29 ವರ್ಷಗಳಿಂದ ಹಿಡಿತ ತಪ್ಪಿಸಿಕೊಂಡಿದ್ದ ಮುನ್ನೂರು ಕಾಪು ಮುಖಂಡರು ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಿ ಪುನಃ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುನ್ನೂರು ಕಾಪು ಸಮಾಜದ ಬಾಬುರಡ್ಡಿ ಮುನ್ನೂರು ಅಧ್ಯಕ್ಷರಾಗಿದ್ದಾರೆ.

ಮಾಜಿ ಶಾಸಕ ಡಿ.ಎಸ್‍ ಹೂಲಗೇರಿ ಸಾರಥ್ಯದಲ್ಲಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಕಾಂಗ್ರೆಸ್‍ ಕಾರ್ಯಕರ್ತರು ಫುಟ್‍ಬಾಲ್‍ ಆಡುತ್ತ ಗುಲಾಲ ಎರಚುತ್ತ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಮಾಜಿ ಶಾಸಕ ಡಿ.ಎಸ್‍ ಹೂಲಗೇರಿ, ಶಾಸಕ ಮಾನಪ್ಪ ವಜ್ಜಲ ಮನೆ, ಕಚೇರಿಗಳಿಗೆ ಹಾಗೂ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‍ ಬಿಗಿ ಬಂದೋ ಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಾಜಿ ಶಾಸಕ ಡಿ.ಎಸ್‍ ಹೂಲಗೇರಿ ಮಾತನಾಡಿ, 'ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‍ ಹಂಚಿಕೆಯಿಂದ ತಮ್ಮನ್ನು ಸೋಲಿಸಲು ಏನೆಲ್ಲಾ ಪ್ರಯತ್ನಗಳು ನಡೆದಿವೆ ಎಂಬುದು ಸಾರ್ವಜನಿಕರಿಗೆ ಗೊತ್ತಿದ್ದ ಸಂಗತಿ. ಹಟ್ಟಿಪಟ್ಟಣ ಪಂಚಾಯಿತಿ, ಮುದಗಲ್‌, ಲಿಂಗಸುಗೂರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಗೆಲವು ಕಂಡಿದ್ದು ಸ್ವತಃ ನಾನೇ ಗೆದ್ದಷ್ಟು ಖುಷಿ ತಂದಿದೆ’ ಎಂದು ಹರ್ಷ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT