ಲಿಂಗಸುಗೂರು: ‘ಕನ್ನಡ ನಾಡಲ್ಲಿ ಜನಿಸಿದ ನಾವೆಲ್ಲ ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಗಳ ಸಂರಕ್ಷಣೆಗೆ ಪಣ ತೊಡಬೇಕಿದೆ. ಅನ್ಯ ಭಾಷಿಕರ ದಾಸ್ಯತ್ವದಿಂದ ಹೊರಬಂದು ಕನ್ನಡ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಪೊಲೀಸ್ ಇನ್‍ಸ್ಪೆಕ್ಟರ್ ಸಂಜೀವಕುಮಾರ ಕುಂಬಾರಗೇರಿ ಮನವಿ ಮಾಡಿದರು.
ಪಟ್ಟಣದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಪ್ರಾಚೀನ ಇತಿಹಾಸವಿದೆ. ಪರಕೀಯರ ಹಾಗೂ ಗಡಿ ಭಾಗದ ಅನ್ಯ ಭಾಷಿಕರ ದಾಸ್ಯತ್ವಕ್ಕೆ ಸೋತಿರುವ ಕನ್ನಡ ಉಳಿಸಿ ಬೆಳೆಸುವ ಅನಿವಾರ್ಯತೆ ಎದುರಾಗಿದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಪುರಸಭೆ ಉಪಾಧ್ಯಕ್ಷ ಎಂ.ಡಿ ರಫಿ ಮಾತನಾಡಿ, ‘ಕನ್ನಡಿಗರೆಲ್ಲ ಕನ್ನಡ ಭಾಷೆಯಲ್ಲೇ ಓದು, ವ್ಯವಹಾರ, ಸಂವಹನ ನಡೆಸಲು ಮುಂದಾಗಬೇಕು’ ಎಂದರು.
ರಂಜಿಸಿದ ಜಾನಪದ: ಕಲಾವಿದ ತುಮಕೂರಿನ ಜಿ. ಮುನಿಯಪ್ಪ ನೇತೃತ್ವದ ತಂಡವು ರಾಜ್ಯೋತ್ಸವಕ್ಕೆ ಸಂಬಂಧಿಸಿದ ಜಾನಪದ ಶೈಲಿಯ ಹಾಡುಗಳನ್ನು ಹಾಡಿ ನೆರೆದಿದ್ದ ಕನ್ನಡಾಭಿಮಾನಿಗಳನ್ನು ರಂಜಿಸಿತು. ಇದೇ ಸಂದರ್ಭದಲ್ಲಿ ನಮ್ಮ ಕರವೇ ಮಹಿಳಾ ಘಟಕ ಉದ್ಘಾಟಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಲಾಯಿತು.
ನಮ್ಮ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು ಅಧ್ಯಕ್ಷತೆ ವಹಿಸಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ನಿರ್ದೇಶಕ ಅಮರೇಶ ಹೆಸರೂರು, ಮುಖಂಡರಾದ ಮಾದೇಶ ಸರ್ಜಾಪುರ, ಮಲ್ಲನಗೌಡ ಪಾಟೀಲ, ಹಿರೇಮಠ ವೀರಭದ್ರಯ್ಯ, ಜ್ಯೋತಿ ಸುಂಕದ, ಶರಣಮ್ಮ ಹೂನೂರು, ರಮೇಶ ಗುತ್ತೆದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.