ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು: ಜಾಹಗೀರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ!

1955ರ ದಾಖಲೆ ಪ್ರಕಾರ ದೇವದೀನ ನಾಥೂರಾಮ್‍ ಹೆಸರಲ್ಲಿರುವ ಜಮೀನು
ಬಿ.ಎ. ನಂದಿಕೋಲಮಠ
Published 20 ಜನವರಿ 2024, 5:36 IST
Last Updated 20 ಜನವರಿ 2024, 5:36 IST
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ಕೃಷ್ಣಾ ನದಿ ನಡುಗಡ್ಡೆ ಪ್ರದೇಶದಲ್ಲಿರುವ ಜಲದುರ್ಗ ಗ್ರಾಮ ವಿಜಯನಗರ ಮತ್ತು ಆದಿಲ್‍ಶಾಹಿಗಳ ಆಡಳಿತ ಅವಧಿಯಲ್ಲಿ ಗಲ್ಲು ಶಿಕ್ಷೆ ವಿಧಿಸುವ ತಾಣವಾಗಿತ್ತು. ಗ್ರಾಮದ ಜಮೀನುಗಳ ವರ್ಗಾವಣೆಗೆ ನಕಲಿ ದಾಖಲೆ ಸೃಷ್ಟಿಸುತ್ತ ಬಂದಿದ್ದರಿಂದ ಊಳುವವನೇ ಮಾಲೀಕ ಎಂಬ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ 2,263.29 ಎಕರೆ ಜಮೀನದಲ್ಲಿ ರಾಜ್ಯ ಸರ್ಕಾರ 1984ರಲ್ಲಿ ಅರಣ್ಯ ಇಲಾಖೆಗೆ 936 ಎಕರೆ ಜಮೀನು ನೀಡಿದ ಕರ್ನಾಟಕ ಗೆಜೆಟಿಯರ್ ದಾಖಲೆಯು ಇದೆ. ಈ ಆಧಾರದಲ್ಲಿ ವಲಯ ಅರಣ್ಯ ಇಲಾಖೆ ರಾಜ್ಯಪಾಲರ ಆದೇಶದಡಿ ಸ್ವಾಧೀಪಡಿಸಿಕೊಳ್ಳಲು ಮುಂದಾದಾಗ ನಕಲಿ ದಾಖಲೆಗಳ ಜಾಲ ಬಹಿರಂಗಗೊಂಡಿದೆ. ಭೂಮಾಪನ ಇಲಾಖೆಯಲ್ಲಿ 15 ಸರ್ವೆ ನಂಬರ್ ಪೈಕಿ ಕೆಲ ಜಮೀನುಗಳಲ್ಲಿ ನಾಲ್ಕಾರು ಜನರಿಗೆ ಮಾತ್ರ ವರ್ಗಾವಣೆಗೊಂಡ ನಕ್ಷೆ ಸಿಕ್ಕಿದೆ.

ಈ ಹಿಂದಿನ ಚುನಾಯಿತ ಪ್ರತಿನಿಧಿಗಳು, ಪ್ರತಿಷ್ಟಿತರು ಉಪನೋಂದಣಾಧಿಕಾರಿ ಕಚೇರಿ ಮೂಲಕ 30, 40, 50 ಎಕರೆ ಆಧರಿಸಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರು ಮತ್ತೆ ನೂರಾರು ರೈತರಿಗೆ ಬಿಡಿಕಾಸಿಗೆ ನೋಂದಣಿ ಮಾಡಿಸಿ ಕೊಟ್ಟಿರುವ ದಾಖಲೆಗಳು ಲಭ್ಯವಾಗಿವೆ. ಭೂಮಾಪನ ಇಲಾಖೆಯಲ್ಲಿ ಟೋಂಚ್‍ ಟಿಪ್ಪಣಿ, ಆಕಾರಬಂದ್‍ ಸೇರಿದಂತೆ ಯಾವೊಂದು ದಾಖಲೆ ಲಭ್ಯವಿಲ್ಲ.

‘ಜಮೀನುಗಳ ಮಾರಾಟದ ಭರಾಟೆಯಲ್ಲಿ ಕೋಟೆ, ಕಿಲ್ಲಾ ಪ್ರದೇಶ ಹಂಚಿನಾಳ ಗ್ರಾಮದ ನಕ್ಷೆಗೆ ಸೇರ್ಪಡೆ ಮಾಡಿದ್ದಾರೆ. 1966ರಲ್ಲಿ ಈ ಪ್ರದೇಶವನ್ನು ₹16ಸಾವಿರಕ್ಕೆ ಮಾರಾಟ ಮಾಡಿಕೊಂಡು ದೇವಧೀನ ಹೊರಟು ಹೋಗಿದ್ದಾರೆ. ಬಳಿಕ ಬಂದವರು ಹಣದ ಆಸೆಗೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಸಿದ್ದಾರೆ. ಖರೀದಿದಾರ ಪಟ್ಟಣದಲ್ಲಿ, ಉಳಿಮೆದಾರ ಕಬ್ಜಾದಲ್ಲಿ ಎಂಬಂತಾಗಿದೆ’ ಎಂದು ಅಮರಣ್ಣ ಚಿಗರಿ(ಮುತ್ಯಾ) ಸತ್ಯ ಸಂಗತಿ ಬಿಚ್ಚಿಟ್ಟಿದ್ದಾರೆ.

‘ಮೂಲ ಮಾಲೀಕರಾದ ಭೀಮಶೆಪ್ಪ ಸಾಹುಕಾರ ಕುಟುಂಬಸ್ಥರ ಹೆಸರಲ್ಲಿ ಸಾಕಷ್ಟು ದಾಖಲೆಗಳಿವೆ. ವಾಸ್ತವವಾಗಿ ಕಬ್ಜಾ ಉಳಿದಿಲ್ಲ. ಕುಟುಂಬಸ್ಥರು ಟ್ರಂಕ್‍ಗಟ್ಟಲೆ ದಾಖಲೆ ಹೊತ್ತು ಕಚೇರಿಗಳಿಗೆ ಅಲೆದಾಡುತ್ತಿದ್ದೇವೆ. ಯಾರ ಜಮೀನು ಯಾರಿಗೆ ಮಾರಾಟ, ಜಮೀನುಗಳು ಎಲ್ಲಿವೆ ಎಂಬ ಮಾಹಿತಿ ಸಿಗದಂತೆ ಆಗಿದೆ’ ಎಂದು ಭೀಮಶೆಪ್ಪ ಸಾಹುಕಾರ ಪುತ್ರ ಪರಪ್ಪ ಸಾಹುಕಾರ ಅಳಲು ತೋಡಿಕೊಂಡಿದ್ದಾರೆ.

ರಾಜಕಾರಣಿಗಳ ಜೊತೆ ಕಂದಾಯ ಇಲಾಖೆ ಮತ್ತು ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಸೇರಿ ದಾಖಲೆ ಸೃಷ್ಟಿಸಿದ್ದಾರೆ. ಕಂದಾಯ, ಸರ್ವೇ, ಉಪ ನೋಂದಣಿ ಇಲಾಖೆ ಮಧ್ಯೆ ಹೊಂದಾಣಿಕೆ ಇಲ್ಲದೆ ನೋಂದಣಿ ದಾಖಲೆ ಹೊರ ಬಂದಿವೆ. ಕಂದಾಯ ಮತ್ತು ನೋಂದಣಿ ಕಚೇರಿ ಅಧಿಕಾರಿಗಳು ಶ್ಯಾಮೀಲಾಗಿ ದಾಖಲೆ ಸೃಷ್ಟಿಸಿದ್ದು ಸಾಬೀತಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಕಂದಾಯ ಅಧಿಕಾರಿ ಸತ್ಯ ಬಹಿರಂಗಗೊಳಿಸಿದ್ದಾರೆ.

‘ಜಲದುರ್ಗದ ಪಟ್ಟಾ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿ 2,263.29 ಎಕರೆ ಬದಲು ದುಪ್ಪಟ್ಟು ಪ್ರದೇಶ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬಹುತೇಕ ರೈತರು ನೋಂದಣಿ ಪತ್ರ ಹಿಡಿದು ಜಮೀನು ಹುಡುಕಾಟ ನಡೆಸಿದ್ದಾರೆ. ಈ ಕುರಿತಂತೆ ರಾಜ್ಯ ಸರ್ಕಾರ ನಕಲಿ ದಾಖಲೆ ಸೃಷ್ಟಿಸಿದ ಜಾಲ ಪತ್ತೆ ಹಚ್ಚಿ ಕಠಿಣ ಕ್ರಮಕ್ಕೆ ಮುಂದಾಗಿ ನೈಜ ರೈತರಿಗೆ ನ್ಯಾಯ ಒದಗಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸದಸ್ಯ ಪ್ರಭುಲಿಂಗ ಮೇಗಳಮನಿ ಒತ್ತಾಯಿಸಿದ್ದಾರೆ.

ಲಿಂಗಸುಗೂರು ತಾಲ್ಲೂಕು ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದಲ್ಲಿನ ಕಂದಾಯ ಜಮೀನಿನ ಮೂಲ ನಕ್ಷೆ ಯಥಾವತ್ತಾಗಿರುವುದು
ಲಿಂಗಸುಗೂರು ತಾಲ್ಲೂಕು ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದಲ್ಲಿನ ಕಂದಾಯ ಜಮೀನಿನ ಮೂಲ ನಕ್ಷೆ ಯಥಾವತ್ತಾಗಿರುವುದು
ಪರಪ್ಪ ಸಾಹುಕಾರ
ಪರಪ್ಪ ಸಾಹುಕಾರ
ಅಮರಣ್ಣ ಚಿಗರಿ (ಮುತ್ಯಾ)
ಅಮರಣ್ಣ ಚಿಗರಿ (ಮುತ್ಯಾ)

ದೇವದೀನ ಜಹಗೀರದಾರ್ ಮೂಲಕ ಜಮೀನು ಪಡೆದುಕೊಂಡ ನಮ್ಮ ಕುಟುಂಬಸ್ಥರಿಗೆ ಕೆಲ ಪ್ರತಿಷ್ಠಿತರಿಂದ ಅನ್ಯಾಯ ಆಗಿದೆ. ದಾಖಲೆಗಳಿದ್ದರೂ ಜಮೀನು ಇಲ್ಲದಂತಾಗಿದೆ

-ಪರಪ್ಪ ಸಾಹುಕಾರ ಜಮೀನು ಮಾಲೀಕ ಜಲದುರ್ಗ

ದೇವದೀನ ಜಹಗೀರದಾರ್ ಭಟ್ಟಿ ಸಾರಾಯಿ ಕುಡಿದು ಗುಡ್ಡ ಮಾರಾಟ ಮಾಡಿಕೊಂಡು ಹೋಗಿದ್ದಾರೆ. ದೊಡ್ಡ ವ್ಯಕ್ತಿಗಳು ತಮಗೆ ಬೇಕಾದಂತೆ ದಾಖಲೆ ಸೃಷ್ಟಿಸಿ ಹಣ ದೋಚಿದ್ದು ರೈತರು ಹಾಳಾಗಿದ್ದಾರೆ

-ಅಮರಣ್ಣ ಚಿಗರಿ (ಮುತ್ಯಾ) ಜಹಗೀರದಾರ ಒಡನಾಡಿ ಜಲದುರ್ಗ

ಮಾರಾಟ ಜಮೀನು ಭೂಮಿ ತಂತ್ರಾಂಶದ ಮೂಲಕ ಕಾವೇರಿ–2 ತಂತ್ರಾಂಶದಲ್ಲಿ ಬರುತ್ತದೆ. ಅಲ್ಲಿಂದ ಬಂದರೆ ನೋಂದಣಿ ಮಾಡುತ್ತೆವೆ. ಸರ್ವೇ ಇಲಾಖೆ ದಾಖಲೆ ಪರಿಶೀಲನೆ ನಮಗೆ ಸಂಬಂಧಿಸಿದ್ದಲ್ಲ

-ಪಧ್ಮನಾಭ ಗುಡಿ ಉಪ ನೋಂದಣಾಧಿಕಾರಿ ಲಿಂಗಸುಗೂರು

ದೇವದೀನರಿಂದ ಪಟ್ಟಾ ಪಡೆದಿದ್ದ ಬಸಲಿಂಗಪ್ಪ ಭೀಮಶೇಪ್ಪ 

ಜಲದುರ್ಗದಲ್ಲಿ 1 ರಿಂದ 15 ಸರ್ವೆ ನಂಬರ್‌ನಲ್ಲಿ ಒಟ್ಟು 2263.29 ಎಕರೆ ಜಮೀನು ಇದೆ. 1955ರ ದಾಖಲೆ ಪ್ರಕಾರ ಜಮೀನು ದೇವದೀನ ನಾಥೂರಾಮ್‍ ಎಂಬ ವ್ಯಕ್ತಿ ಹೆಸರಲ್ಲಿದೆ. ದೇವದೀನ ಎಂಬುವವರು ಈಗಿನ ಕಲಬುರಗಿ ಜಿಲ್ಲೆಯ ಚಿತ್ತಾಪುರ (ದಂಡೋಳಿ) ಗ್ರಾಮದವರಾಗಿದ್ದರು. ದೇವದೀನ ಜಾಹಗೀರದಾರಿಕೆ ಆಧಾರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಈ ಜಮೀನುಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು ಎಂಬುದು ಸ್ಥಳೀಯರ ಮಾತು. ಸ್ವಾತಂತ್ರ್ಯಪೂರ್ವದಲ್ಲಿಯೇ ಈಗಿನ ವಿಜಯಪುರ ಜಿಲ್ಲೆ ಠಕ್ಕಳಕಿ ಬಸಲಿಂಗಪ್ಪ ಮತ್ತು ಭೀಮಶೇಪ್ಪ ಸಾಹುಕಾರ ಬಂದು ನೆಲೆಸಿದ್ದರು. ಜಹಗೀರದಾರ ದೇವದೀನ ಅವರೊಂದಿಗೆ ಸಂಪರ್ಕ ಸಾಧಿಸಿ ಜಮೀನು ಮಾಲೀಕತ್ವದ ಪಟ್ಟ ಪಡೆದಿದ್ದರು. 1964ರಲ್ಲಿ ಜಲದುರ್ಗದಲ್ಲಿ ಮೊಟ್ಟಮೊದಲ ಗಚ್ಚಿನ ಮನೆ ನಿರ್ಮಿಸಿಕೊಂಡಿದ್ದು ಸಾಹುಕಾರ ಕುಟುಂಬಸ್ಥರು. ಈ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಕುಟುಂಬಸ್ಥರು ಬಂದು ನೆಲೆಸಿದ್ದರು ಎನ್ನುವುದು ಐತಿಹ್ಯ. ದೇವದೀನ ನಾಥೂರಾಮ್‍ ಮತ್ತು ಜಮುನಾಬಾಯಿ ಎಂಬುವವರಿಂದ 1966ರಲ್ಲಿ ಠಕ್ಕಳಿಕಿ ಢವಳಗಿ ಆದಾಪುರ ಹಾಲಭಾವಿ ನಾಲತವಾಡ ಲಿಂಗಸುಗೂರು ಸೇರಿದಂತೆ ಇತರೆ ಪ್ರಮುಖರಿಗೆ ನೋಂದಣಿ ಮಾಡಿಸಿಕೊಂಡ ದಾಖಲೆ ಲಭ್ಯವಾಗಿದೆ. ಯಾವ ಜಮೀನಿಗೂ ಚಕಬಂದಿ ಇಲ್ಲ. ಎಲ್ಲಿಯೋ ಸರ್ವೆ ನಂಬರ್ ಇನ್ನೆಲ್ಲಿಯೋ ಪ್ರದೇಶದಲ್ಲಿ ಕಬ್ಜಾ ಮಾಡಿಕೊಂಡಿದ್ದಾರೆ. ಇಲ್ಲಿಂದ ಮನಸೋ ಇಚ್ಚೆ ಪಹಣಿಗಳನ್ನು ಸೃಷ್ಟಿಗೊಂಡಿದ್ದು ಕಂಡು ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT