ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಜಿಲ್ಲೆಗೆ ಏಮ್ಸ್ ತರಲು ಪ್ರಯತ್ನ: ಜಿ. ಕುಮಾರ ನಾಯಕ

ಬಿಜೆಪಿಯ 400 ಪಾರ್ ಘೋಷಣೆ ಧೂಳಿಪಟ, ಆಡಳಿತ ವಿರೋಧಿ ಅಲೆಯಿಂದ ಗೆಲುವು
Published 4 ಜೂನ್ 2024, 15:59 IST
Last Updated 4 ಜೂನ್ 2024, 15:59 IST
ಅಕ್ಷರ ಗಾತ್ರ

ರಾಯಚೂರು: ‘ಮತದಾರರು ನನ್ನ ಕೈ ಹಿಡಿದು ಅಭೂತಪೂರ್ವ ಗೆಲುವು ದೊರಕಿಸಿಕೊಟ್ಟಿದ್ದು, ಅವರಿಗೆ ಚಿರಋಣಿ. ರಾಷ್ಟ್ರದ ಸಲುವಾಗಿ ನಡೆದ ಈ ಚುನಾವಣೆಯಲ್ಲಿ ಸ್ಥಳೀಯ, ಹೊರಗಿನವ ಎಂಬ ಬಿಜೆಪಿ ನಾಯಕರ ಪ್ರಚಾರಕ್ಕೆ ಮತದಾರರು ಕಿವಿಗೊಡದೇ ಬಿಜೆಪಿಯ ಆಡಳಿತಕ್ಕೆ ಬೇಸತ್ತು ನನ್ನನ್ನು ಗೆಲ್ಲಿಸಿದ್ದಾರೆ’ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ  ಜಿ.ಕುಮಾರ ನಾಯಕ ತಿಳಿಸಿದರು.

ಕೊನೆಯ ಹಂತದ ಮತ ಎಣಿಕೆಯ ಮಧ್ಯೆಯೇ ಗೆಲುವು ಖಚಿತವಾದ ಬೆನ್ನೆಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನಾನು ರಾಯಚೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಇದು ನನ್ನ ಕರ್ಮಭೂಮಿ. ನನ್ನ ಮಗನೂ ಇಲ್ಲೇ ಹುಟ್ಟಿದ್ದಾನೆ. ನಾನು ಸ್ಥಳೀಯ’ ಎಂದು ಸಮರ್ಥಿಸಿಕೊಂಡರು.

‘ಬಿಜೆಪಿ ನಾಯಕರ ಅಪಪ್ರಚಾರಕ್ಕೆ ಮತದಾರರು ಕಿವಿಗೊಡಲಿಲ್ಲ. ಏಮ್ಸ್ ಆಶ್ವಾಸನೆ ನೀಡಿದ್ದೇನೆ. ಇದನ್ನು ತರಲು ಪ್ರಯತ್ನ ಮಾಡುತ್ತೇನೆ. ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಒಕ್ಕೂಟವನ್ನು ಜನ ಬೆಂಬಲಿಸಿದ್ದು, ಬಿಜೆಪಿ ನಾಯಕರು 400 ಪಾರ್ ಎಂದು ಗಾಳಿಯಲ್ಲಿ ತೇಲಾಡುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಿದ್ದ ಕೋಮುವಾದಿ ಬಿಜೆಪಿಗೆ ಜನ ಬಹುಮತ ನೀಡದೇ ತಕ್ಕ ಉತ್ತರ ನೀಡಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ’ ಎಂದು ಹೇಳಿದರು.

‘ಗ್ಯಾರಂಟಿ ಕೈ ಹಿಡಿದಿದೆ’: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಹಾಗೂ ರಾಜ್ಯದ ಗ್ಯಾರಂಟಿ ಯೋಜನೆಗಳು ನನ್ನ ಕೈ ಹಿಡಿದಿವೆ.  ಕಾರ್ಯಕರ್ತರು, ಹಿರಿಯ ನಾಯಕರು ನನ್ನ ಗೆಲುವಿಗೆ ಶ್ರಮಿಸಿದ್ದು, ಅವರ ಮಾರ್ಗದರ್ಶನದಲ್ಲಿ ಹಿಂದುಳಿದ ಹಣೆಪಟ್ಟಿ ಹೋಗಲಾಡಿಸಲು ಶ್ರಮಿಸುವೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT