ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಬಿಸಿಲೂರಲ್ಲಿ ರಾಜಾರೋಷವಾಗಿ ಮರಗಳ ಲೂಟಿ

Published 23 ಮಾರ್ಚ್ 2024, 4:51 IST
Last Updated 23 ಮಾರ್ಚ್ 2024, 4:51 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ಈಗಾಗಲೇ ಬೆಂಕಿಯಂತೆ ಸುಡುವ ಬಿಸಿಲು ಇದೆ. ಗಿಡಮರಗಳ ಕೊರತೆ ಇರುವ ಕಾರಣ ರಾತ್ರಿಯಾದರೂ ಸೆಖೆ ಕಡಿಮೆಯಾಗುವುದಿಲ್ಲ. ಇದರ ನಡುವೆಯೇ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ನಗರದಲ್ಲಿ ಮರಗಳ್ಳರು ಸಕ್ರಿರಾಗಿದ್ದಾರೆ. ಹಗಲಿನಲ್ಲೇ ರಾಜಾರೋಷವಾಗಿ ಡಿಸೇಲ್ ಎಂಜಿನ್‌ ಗರಗಸಗಳನ್ನು ತಂದು ಮರಗಳನ್ನು ಕಡಿದು, ಅಲ್ಲಲ್ಲಿ ಸಂಗ್ರಹಿಸಿ ಮಾರಾಟ ಮಾಡತೊಡಗಿದ್ದಾರೆ.

ನಾಲ್ಕೈದು ತಂಡ ನಗರದಲ್ಲಿ ಹಾಡಗಲೇ ಮರಗಳ ಲೂಟಿ ಮಾಡುವಲ್ಲಿ ಸಕ್ರಿಯವಾಗಿದೆ. ಬಡಾವಣೆಗಳನ್ನೇ ಆಯ್ಕೆ ಮಾಡಿಕೊಂಡು ಮರಗಳನ್ನು ಉರುಳಿಸತೊಡಿದ್ದಾರೆ. ಡ್ಯಾಡಿ ಕಾಲೊನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 10ಕ್ಕೂ ಮರಗಳನ್ನು ಕಡಿದು ಸಾಗಿಸಿದ್ದಾರೆ.

ಎಷ್ಟು ದೊಡ್ಡ ಮರವಿದ್ದರೂ ಅದನ್ನು ಅರ್ಧಗಂಟೆಯಲ್ಲೇ ಕಡಿದು ಹಾಕಿ ಎಲ್ಲವನ್ನೂ ಸಾಗಿಸುತ್ತಾರೆ. ಅಲ್ಲೊಂದು ಮರ ಇತ್ತು ಎನ್ನುವ ಕುರುಹು ಸಹ ಬಿಡುತ್ತಿಲ್ಲ. ಕೆಲ ಕಡೆ ಜೆಸಿಬಿ ಬಳಸಿ ಬೇರು ಸಮೇತ ಮರಗಳನ್ನು ಕಿತ್ತು ಹಾಕಿದ್ದಾರೆ.

ಮರಗಳ್ಳರು ಬೆಳಿಗ್ಗೆ ನಗರದಲ್ಲಿ ಒಂದು ಸುತ್ತು ಹಾಕಿ ಮರಗಳನ್ನು ಗುರುತಿಸುತ್ತಾರೆ. ಮಾರ್ಕ್‌ ಮಾಡಿ ಹೋಗಿ ಮರುದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಡಿಸೇಲ್ ಎಂಜಿನ್‌ ಗರಗಸಗಳನ್ನು ತಂದು ಮರಗಳನ್ನು ಕೆಡುವುತ್ತಾರೆ. ನಂತರ ತಕ್ಷಣ ತುಂಡು ತುಂಡು ಮಾಡಿ ಇಡುತ್ತಾರೆ. ಕೆಲ ಹೊತ್ತಿನಲ್ಲೇ ಬರುವ ಟ್ರ್ಯಾಕ್ಟರ್‌ನಲ್ಲಿ ಅವುಗಳನ್ನು ಸಾಗಿಸಿ ಬಿಡುತ್ತಾರೆ.

ಅಕ್ರಮ ಕೆಲಸಕ್ಕೆ ಜೆಸ್ಕಾಂ ಸಿಬ್ಬಂದಿ ಹಾಗೂ ಲೈನ್‌ಮನ್‌ಗಳು ಸಾಥ್ ನೀಡುತ್ತಿದ್ದಾರೆ. ಇವರಿಗೆ ₹ 500, ₹ 2 ಸಾವಿರ ಮಾಮೂಲು ಕೊಟ್ಟು ಬಳಸಿಕೊಳ್ಳುತ್ತಿದ್ದಾರೆ. ಮರ ಇರುವಲ್ಲಿ ವಿದ್ಯುತ್ ತಂತಿ ಇದ್ದರೆ ಅದನ್ನು ಟೊಂಗೆಗಳನ್ನು ಕಡಿದಂತೆ ಮಾಡಿ ಮರವನ್ನೇ ಕಡಿಯುತ್ತಿದ್ದಾರೆ. ಲೈನ್‌ಮನ್‌ ಸಹ ಅರ್ಧಗಂಟೆ ಕರೆಂಟ್‌ ಬಂದ್‌ ಮಾಡಿ ಸಹಕರಿಸುತ್ತಿದ್ದಾರೆ. ಒಂದೂವರೆ ಗಂಟೆಯಲ್ಲಿ ಎಲ್ಲವೂ ಮುಗಿದು ಬಿಡುತ್ತದೆ.

ನೆರಳು ಕೊಡುವ ಮರಗಳನ್ನು ಕಡಿಯುವುದನ್ನು ನೋಡಲಾಗದೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್‌ ಮಾಡಿ ತಿಳಿಸಿದರೂ, ಸಾಗವಾನಿ ಮರಗಳು ಇದ್ದರೆ ಕ್ರಮ ಕೈಗೊಳ್ಳಬಹುದು. ಉಳಿದ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಬೇಕಿಲ್ಲ. ಮರಗಳ ರಕ್ಷಣೆ ಮಾಡುವುದು ನಗರಸಭೆಗೆ ಸಂಬಂಧಿಸಿದ್ದು ಎಂದು ಹೇಳಿ ಫೋನ್‌ ಕಟ್‌ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ನಗರಸಭೆ ಅಧಿಕಾರಿಗಳು ಸ್ವಚ್ಛ ಸುಂದರ ನಗರದ ಅಭಿಯಾನದ ಅಡಿಯಲ್ಲಿ ರೈಲು ನಿಲ್ದಾಣ ರಸ್ತೆಯಲ್ಲಿ ವಿಭಜಕಗಳ ಮಧ್ಯೆ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಆದರೆ, ಹಳೆಯದಾದ ಮರಗಳನ್ನು ಕಡಿದು ಉರುಳಿಸುತ್ತಿರುವ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಗರದ ನಿವಾಸಿ ವಿಜಯಕುಮಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಂತಿಗೆ ತಗುಲುತ್ತಿದೆ ಎನ್ನುವ ನೆಪ ಹೇಳಿ ಜೆಸ್ಕಾ ಸಿಬ್ಬಂದಿ ಬುಡ ಸಮೇತ ಮರಗಳನ್ನು ಕಡಿದು ಕೆಇಬಿ ಕಾಲೊನಿಯಲ್ಲೇ ಸಂಗ್ರಹಿಸಿ ನಗರದ ಹೊರ ವಲಯದಲ್ಲಿರುವ ಡಾಬಾಗಳು ಹಾಗೂ ಇಟ್ಟಿಗೆ ಭಟ್ಟಿಗಳ ಮಾಲೀಕರಿಗೆ ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿ ಲೂಟಿಕೋರರ ವ್ಯವಸ್ಥಿತ ಜಾಲವೇ ಇದೆ. ಜಿಲ್ಲಾ ಆಡಳಿತ ಇಂತಹ ಅಕ್ರಮಗಳಿಗೆ ಮಟ್ಟ ಹಾಕಬೇಕು. ನಗರದಲ್ಲಿ ಮರಗಳನ್ನು ಉಳಿಸಲು ಕಠಿಣ ಕ್ರಮಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ರಾಯಚೂರಿನ ಡ್ಯಾಡಿ ಕಾಲೊನಿಯ ನಾಲ್ಕನೇ ಕ್ರಾಸ್‌ನಲ್ಲಿ ಗಟಾರನಲ್ಲೇ ಬೆಳೆದಿದ್ದ ದೊಡ್ಡ ಮರವನ್ನು ಬುಡ ಸಮೇತ ಕಡಿಯಲಾಗಿದೆ
ರಾಯಚೂರಿನ ಡ್ಯಾಡಿ ಕಾಲೊನಿಯ ನಾಲ್ಕನೇ ಕ್ರಾಸ್‌ನಲ್ಲಿ ಗಟಾರನಲ್ಲೇ ಬೆಳೆದಿದ್ದ ದೊಡ್ಡ ಮರವನ್ನು ಬುಡ ಸಮೇತ ಕಡಿಯಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT