ಭಾನುವಾರ, ಮೇ 16, 2021
22 °C

ಮತದಾರರಲ್ಲದವರು ಮಸ್ಕಿ ಮತಕ್ಷೇತ್ರದಿಂದ ನಿರ್ಗಮಿಸಬೇಕು: ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯ ಮಸ್ಕಿ ಉಪಚುನಾವಣೆಗೆ ಏ‍ಪ್ರಿಲ್‌ 17ರಂದು ಮತದಾನ ನಡೆಯಲಿದ್ದು, ದಿನಗಣನೆ ಆರಂಭಗೊಂಡಿದೆ. ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಏಪ್ರಿಲ್‌ 15ರ ಸಂಜೆ 7 ಗಂಟೆಯೊಳಗೆ ಮಸ್ಕಿ ವಿಧಾನಸಭಾ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದಿಂದ ನಿರ್ಗಮಿಸಬೇಕು. ಇಲ್ಲದಿದ್ದಲ್ಲೀ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮಸ್ಕಿ ಉಪ ಚುನಾವಣೆಯ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಮಾತನಾಡಿದರು.

ಓದಿ: 

ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲರ ಸಹಕಾರ ಅಗತ್ಯವಿದ್ದು, ಮಸ್ಕಿ ಮತಕ್ಷೇತ್ರಕ್ಕೆ
ಸೇರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೊರ ಹೋಗಬೇಕು. ಅಗತ್ಯ ವಾಹನಗಳನ್ನು ಹೊರತು ಪಡಿಸಿ, ಮತದಾನ ಪೂರ್ವ 72 ಗಂಟೆಗಳ ಅವಧಿಯೊಳಗೆ ಇತರೆ ವಾಹನಗಳಿಗೆ ತೆಗೆದುಕೊಂಡ ಪರವಾನಗಿ ರದ್ದಾಗುತ್ತದೆ. ಈ ವಾಹನಗಳನ್ನು ಪ್ರಚಾರಕ್ಕೆ ಬಳಸಿದ್ದಲ್ಲೀ ಅವುಗಳನ್ನು ಜಪ್ತಿ ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಮತದಾನ ಮುಕ್ತಾಯದ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಅವಧಿಯಲ್ಲಿ ಮನೆ-ಮನೆ ಪ್ರಚಾರವನ್ನು ಮಾತ್ರ ಕೈಗೊಳ್ಳಬಹುದು. ಈ ವೇಳೆ ಐದು ಜನರಿಗಿಂತಲೂ ಹೆಚ್ಚಿನವರು ಇರುವಂತಿಲ್ಲ, ಗುಂಪುಗೂಡುವಂತಿಲ್ಲ, ಅದಕ್ಕೆ ಪೂರಕವಾಗಿ ಸಿಆರ್‌ಪಿಸಿ ಸೆಕ್ಷನ್ 144ರನ್ವಯ ನಿಷೆಧಾಜ್ಞೆ ಜಾರಿಗೊಳಿಸಲಾಗುವುದು.

ಓದಿ: 

ಧ್ವನಿವರ್ಧಕಗಳ ಬಳಕೆ ಇಲ್ಲ, ಮತದಾನದ ದಿನದಂದು ಯಾವುದೇ ರಾಜಕೀಯ ಪಕ್ಷಗಳು ಮತದಾರರನ್ನು ವಾಹನಗಳಲ್ಲಿ ಮತಗಟ್ಟೆಗೆ ಕರೆದುಕೊಂಡು ಬರಬಾರದು. ಇದು ಕಂಡುಬಂದರೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಮತದಾನ ದಿನದಂದು ಮತಗಟ್ಟೆಗಳ ವ್ಯಾಪ್ತಿಯ ಸುತ್ತಲೂ 100 ಮೀಟರ್ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮತದಾನದ ದಿನದಂದು ಸರ್ಕಾರಿ ಹಾಗೂ ಖಾಸಗಿ ಸ್ಥಳದಲ್ಲಿ ಪ್ರಚಾರಕ್ಕೆ ಅವಕಾಶವಿರುವುದಿಲ್ಲ. ಮಸ್ಕಿ, ಲಿಂಗಸೂಗೂರು ಹಾಗೂ ಸಿಂಧನೂರು ತಾಲ್ಲೂಕುಗಳಲ್ಲಿ ಏಪ್ರಿಲ್‌ 13ರಿಂದಲೇ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದರು.

ರಾಯಚೂರು, ಮಾನ್ವಿ, ದೇವದುರ್ಗ ಹಾಗೂ ಸಿರವಾರ ತಾಲ್ಲೂಕುಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗುತ್ತಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್ ಸೇರಿದಂತೆ ಬಿಜೆಪಿ ಮುಖಂಡರಾದ ತಿರುಮಲ ರೆಡ್ಡಿ, ಕೆ. ಈರಣ್ಣ, ಕಾಂಗ್ರೆಸ್
ಮುಖಂಡರಾದ ಅಮರೇಗೌಡ, ಆಂಜನೇಯ ಹಾಗೂ ಇತರರು ಸಭೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು