ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಚಿವ ಸ್ಥಾನದ ಭಾಗ್ಯ ಬರಲಿದೆ’

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಸಂದರ್ಶನ
Last Updated 11 ಏಪ್ರಿಲ್ 2021, 7:13 IST
ಅಕ್ಷರ ಗಾತ್ರ

2008ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಸ್ಕಿ ವಿಧಾನಸಭೆ ಕ್ಷೇತ್ರವು ಉಪಚುನಾವಣೆ ಮೂಲಕ ರಾಜ್ಯದ ಗಮನ ಸೆಳೆಯುತ್ತಿದೆ. ಸತತ ಮೂರು ಬಾರಿ ಗೆಲುವು ಸಾಧಿಸಿದ್ದ ಪ್ರತಾಪಗೌಡ ಪಾಟೀಲ ಅವರು ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆ ಕಣದಲ್ಲಿದ್ದಾರೆ. ‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನದ ಸಾರ ಇಲ್ಲಿದೆ.

*ಕ್ಷೇತ್ರದ ಮತದಾರರ ಒಲವು?

– ಮೂರು ಬಾರಿ ಶಾಸಕನಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳು ಮತ್ತು ಜನರ ಒಡನಾಟ ಇರುವುದರಿಂದ ಇಡೀ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಕಂಡು ಬರುತ್ತಿದೆ. ಮತದಾರರು ಬೆಂಬಲ ಸೂಚಿಸುತ್ತಿದ್ದಾರೆ.

* ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಜನರಲ್ಲಿ ಅಸಮಾಧಾನವಿದೆಯೇ?

–ಖಂಡಿತವಾಗಿಯೂ ಈ ಬಗ್ಗೆ ಯಾರಿಗೂ ಅಸಮಾಧಾನವಿಲ್ಲ. ರಾಜೀನಾಮೆ ಕೊಡುವ ಮುನ್ನವೇ ಕ್ಷೇತ್ರದಲ್ಲಿ ಎಲ್ಲ ಬೆಂಬಲಿಗರ ಅಭಿಪ್ರಾಯ ಪಡೆದಿದ್ದೆ.

* ಪಕ್ಷಾಂತರ ಅನಿವಾರ್ಯವಾಗಿತ್ತೆ?

–ಹೌದು, ಅನಿವಾರ್ಯವಾಗಿತ್ತು. 2018ರ ಚುನಾವಣೆ ಫಲಿತಾಂಶ ನೋಡಿದಾಗ, ಇಡೀ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹೆಚ್ಚಾಗಿತ್ತು. ಈ ಕಾರಣದಿಂದ ನನ್ನ ಗೆಲುವಿನ ಅಂತರ ಕಡಿಮೆಯಾಗಿತ್ತು. ಮುಂಬರುವ ದಿನಗಳಲ್ಲಿ ಈ ಕ್ಷೇತ್ರದ ಅಭಿವೃದ್ಧಿ ಹಿತದೃಷ್ಟಿಯಿಂದ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು.

* 5ಎ ಕಾಲುವೆ ವಿಷಯ...

– ಈ ಭಾಗದ ಶಾಸಕನಾಗಿ ನನ್ನ ಕ್ಷೇತ್ರಕ್ಕೆ ನೀರಾವರಿ ಮಾಡುವುದನ್ನು ಬೇಡ ಎನ್ನುವ ಸಣ್ಣತನ ನನ್ನಲ್ಲಿ ಇಲ್ಲ. ನೀರಾವರಿ ಮಾಡಿಕೊಡುವುದಕ್ಕೆ 12 ವರ್ಷಗಳಿಂದ ಸರ್ವಪ್ರಯತ್ನ ಮಾಡುತ್ತಿದ್ದೇನೆ. ಆದರೆ, ತಾಂತ್ರಿಕವಾಗಿ ಅದನ್ನು ಮಾಡಲಾಗದು. ನೀರಿನ ಲಭ್ಯತೆ ಇಲ್ಲ ಎಂದು ಹೇಳಿದ್ದಾರೆ. ಜಲಸಂಪನ್ಮೂಲ ಸಚಿವರು ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿದ್ದರು. ಅದರ ವರದಿ ಬಂದ ನಂತರ, ರೈತರಿಗೆ ಅನ್ಯಾಯವಾಗದಿರಲಿ ಎಂಬ ಕಾರಣಕ್ಕೆ ನಂದವಾಡಗಿ ಏತ ನೀರಾವರಿಯಿಂದ ಹರಿನೀರಾವರಿ ಬೇಕೆನ್ನುವ ಬೇಡಿಕೆಗೆ ಸ್ಪಂದಿಸಿ ಕೆಲಸ ಮಾಡಿಸಲಾ ಗುತ್ತಿದೆ ಇನ್ನು ಎರಡು ತಿಂಗಳಲ್ಲಿ ವಟಗಲ್‌ ಏತ ನೀರಾವರಿ ಹರಿ ನೀರಾವರಿಯಾಗಿ ಬದಲಾಗಲಿದೆ.

* ನಿಮ್ಮ ಸಾಧನೆ ಏನು?

– ಇದು ಹೊಸ ವಿಧಾನಸಭೆ ಕ್ಷೇತ್ರ. ಭೌಗೋಳಿಕವಾಗಿ ಬೇರೆ ಬೇರೆ ತಾಲ್ಲೂಕುಗಳನ್ನು ಒಳಗೊಂಡಿದೆ. ಇದು ಅಭಿವೃದ್ಧಿಗೆ ಸವಾಲಾಗಿತ್ತು. ಆದರೆ, ನನ್ನ ಅಧಿಕಾರಾವಧಿಯಲ್ಲಿ ಎಲ್ಲವನ್ನು ಒಗ್ಗೂಡಿಸಿ ಮಸ್ಕಿ ನೂತನ ತಾಲ್ಲೂಕು ಕೇಂದ್ರ ಮತ್ತು ಪುರಸಭೆ ರಚನೆಯಾಗಿದೆ. ಬಳಗಾನೂರು ಮತ್ತು ತುರ್ವಿಹಾಳ ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿವೆ. ನಾಲ್ಕು ಹೊಸ ಗ್ರಾಮ ಪಂಚಾಯಿತಿಗಳು ಆಸ್ತಿತ್ವಕ್ಕೆ ಬಂದಿವೆ. 8 ಹೊಸ ಪ್ರೌಢಶಾಲೆಗಳು, 7 ವಸತಿ ನಿಲಯಗಳು, 5 ಹೊಸ ಮೊರಾರ್ಜಿ ವಸತಿ ಶಾಲೆಗಳು, ಮಸ್ಕಿಯಲ್ಲಿ ಐಟಿಐ, ಪಾಲಿಟೆಕ್ನಿಕ್‌ ಕಾಲೇಜುಗಳು, ತುರ್ವಿಹಾಳದಲ್ಲಿ ಪದವಿ ಕಾಲೇಜು ಮುಂತಾದವು ಅಭಿವೃದ್ಧಿಯಾಗಿವೆ. ಕುಡಿಯುವ ನೀರು, ರಸ್ತೆ ಸೇರಿದಂತೆ ಇತರ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಿರುವೆ.

* ಗೆದ್ದರೆ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ನೀಲನಕ್ಷೆ ಏನು?

–ಈಗಾಗಲೇ ಪ್ರಾರಂಭವಾಗಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ನಂದವಾಡಗಿ ಏತ ನೀರಾವರಿ ಯೋಜನೆಯಿಂದ ಮುಂದಿನ ವರ್ಷ ನಾಲ್ಕು ಗ್ರಾಮ ಪಂಚಾಯಿತಿಗೆ ನೀರು ಒದಗಿಸಲಾಗುವುದು. ಎರಡನೇ ಹಂತದ ವಟಗಲ್‌ ಬಸವೇಶ್ವರ ಏತ ನೀರಾವರಿ ಬೇಗನೇ ಪೂರ್ಣಗೊಳಿಸಲಾಗುವುದು. ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ₹ 457 ಕೋಟಿ ನೀಡಿದೆ. ₹ 82 ಕೋಟಿಗೆ ಟೆಂಡರ್‌ ಆಗಿದೆ.

* ಗೆದ್ದರೆಸಚಿವ ಸ್ಥಾನ ಸಿಗುವುದು ಖಚಿತವೇ?

-ಖಂಡಿತವಾಗಿಯೂ, ಯಡಿಯೂರಪ್ಪ ಅವರು ನೀಡಿದ ಭರವಸೆಯಂತೆ ನನ್ನ ಸ್ನೇಹಿತರಿಗೆ ಸಚಿವ ಸ್ಥಾನ
ನೀಡಿದ್ದಾರೆ. ನನಗೂ ಸಚಿವ ಸ್ಥಾನ ದೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ.

ನನ್ನ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆ. ನಮ್ಮದೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿವೆ. ಪ್ರಧಾನಿ ಮೋದಿ ಅವರ ಬಗ್ಗೆ ಯುವಜನರಲ್ಲಿ ಅಭಿಮಾನವಿದೆ. ಮುಖ್ಯಮಂತ್ರಿ ಅವರ ಬಗ್ಗೆ ಇರುವ ಅಭಿಮಾನದಿಂದ ನಾನು ಗೆಲ್ಲುತ್ತೇನೆ.

*ಕಾಂಗ್ರೆಸ್‌ ಅಭ್ಯರ್ಥಿಗೆ ಜನರೇ ದೇಣಿಗೆ ನೀಡುತ್ತಿದ್ದಾರಲ್ಲ?

-ಇದು ಚುನಾವಣೆಯ ಗಿಮಿಕ್‌. ಕೆಲ ಅಭಿಮಾನಿಗಳು ಕೊಟ್ಟಿರಬಹುದು. ಆದರೆ, ಅವರಿಗೆ
ಹಣ ಕೊಟ್ಟ ಇಬ್ಬರು ತಾಯಂದಿರು ಬಿಜೆಪಿ ಸಭೆಗೂ ಬಂದಿದ್ದರು. ಅರನ್ನು ವಿಚಾರಿಸಿದಾಗ, ಅವರು ಕಾರ್ಯಕರ್ತರು ಕೊಟ್ಟಿರುವುದಾಗಿ ತಿಳಿಸಿದ್ದರು. ಅಭಿಮಾನಿಗಳು ಕೊಟ್ಟಿರಬಹುದು. ಇಲ್ಲ ಎನ್ನುವುದಕ್ಕೆ ಆಗುವುದಿಲ್ಲ. ಕ್ರಾಸ್‌ ಚೆಕ್‌ ಮಾಡಿದಾಗ, ಇದೊಂದು ಗಿಮಿಕ್‌ ಎಂದು ಕಂಡು ಬಂತು.

* ಕೊನೆಯದಾಗಿ ಮತದಾರರಲ್ಲಿ ನಿಮ್ಮ ಮನವಿ?

-ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದೀರಿ. ನಾಲ್ಕನೇ ಬಾರಿಯೂ ಆಯ್ಕೆ ಮಾಡಿದ್ದಲ್ಲಿ,
ಸಚಿವ ಸ್ಥಾನದ ಭಾಗ್ಯ ಒದಗಿ ಬರಲಿದೆ. ಸಚಿವನಾದರೆ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಸಾಧ್ಯವಾಗಲಿದೆ. ಹೆಚ್ಚು ಅನುದಾನ
ತರುವ ಮೂಲಕ ಮಸ್ಕಿ ಕ್ಷೇತ್ರವನ್ನು ಮಾದರಿ ಮಾಡುವ ಕನಸು ಈಡೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT