ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಹಣ ಹಂಚುವುದು ಕಾಂಗ್ರೆಸ್ ಸಂಸ್ಕೃತಿ: ರವಿಕುಮಾರ

Last Updated 15 ಏಪ್ರಿಲ್ 2021, 11:41 IST
ಅಕ್ಷರ ಗಾತ್ರ

ಮಸ್ಕಿ: ‘ಚುನಾವಣೆ ಪ್ರಚಾರ ಮುಗಿಯುವ ಕೊನೆಯ ಕ್ಷಣದಲ್ಲಿ ಸೂಟಕೇಸ್‌ನೊಂದಿಗೆ ಮಸ್ಕಿಗೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಮತದಾರರಿಗೆ ಹಣ‌ ಹಂಚಿ‌ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಕೊನೆ ಕ್ಷಣದ ಪ್ರಯತ್ನ ನಡೆಸಿದ್ದಾರೆ‘ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಆರೋಪಿಸಿದರು.

ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಹಣ ಹಂಚಿ ಚುನಾವಣೆಯಲ್ಲಿ ಗೆಲ್ಲುವುದು ಕಾಂಗ್ರೆಸ್ ಸಂಸ್ಕೃತಿಯೇ ಹೊರತು ಬಿಜೆಪಿ ಸಂಸ್ಕೃತಿ ಅಲ್ಲ. ಈಚೆಗೆ ಬಿಜೆಪಿಯವರು‌ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಕಾಂಗ್ರೆಸ್ ಕಾರ್ಯಕರ್ತರೇ ಹಣ ಹಂಚಿ‌ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ನಡೆದ ಅನೇಕ ವಿಧಾನಸಭಾ ಉಪ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಇದನ್ನೇ ಮಾಡಿ ಗೆದ್ದಿದೆ’ ಎಂದು ಆರೋಪಿಸಿದರು.

’ನಾವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇವೆ. ಡಿ.ಕೆ.ಶಿವಕುಮಾರ ಎಂದರೆ ಸುಳ್ಳು ಶಿವಕುಮಾರ ಎಂದೇ ಖ್ಯಾತಿ ಹೊಂದಿದವರು. ಮಸ್ಕಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ. ಮತದಾನಕ್ಕೆ ಕೆಲವೇ ಕ್ಷಣಗಳಲ್ಲಿ ಅಡ್ಡದಾರಿ ಮೂಲಕ ಗೆಲ್ಲಲು ಇಲ್ಲಿಗೆ ಆಗಮಿಸಿದ್ದಾರೆ ಎಂಬುದಕ್ಕೆ ಇವತ್ತು ಮಸ್ಕಿ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಹೋಗಿ ಹಣ ಹಂಚುತ್ತಿರುವ ವಿಡಿಯೊಗಳೇ ಅವರ ಬಣ್ಣ ಬಯಲು ಮಾಡುತ್ತಿವೆ. ಈ ಬಗ್ಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಕಾಂಗ್ರೆಸ್ ಹಣ ಹಂಚಿಕೆ ವಿರುದ್ಧ ದೂರು ನೀಡಲಾಗುವುದು’ ಎಂದು ತಿಳಿಸಿದರು.

ಮಾಜಿ ಶಾಸಕ ನೇಮಿರಾಜ ನಾಯಕ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಮಾನಂದ ಯಾದವ್, ಮಂಡಲ ಜಿಲ್ಲಾ ಕಾರ್ಯದರ್ಶಿ ಪ್ರಾಣೇಶ, ಸಿದ್ದೇಶ ಯಾದವ್, ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಶರಣಬಸವ ವಕೀಲ, ಮಲ್ಲು ಯಾದವ್ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT