ಮಸ್ಕಿ: ತಾಲ್ಲೂಕಿನ ಮಾರಲದಿನ್ನಿ ಬಳಿಯ ಮಸ್ಕಿ ಜಲಾಶಯ ಭರ್ತಿಗೆ ಕ್ಷಣಗಣನೆ ಶುರುವಾಗಿದ್ದು, ಆ.5ರಂದು ಜಲಾಶಯ ಪ್ರದೇಶದಲ್ಲಿ ಯೋಜನೆಯ ನೀವಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲಾಗಿದೆ ಎಂದು ಯೋಜನೆಯ ಎಂಜಿನಿಯರ್ ದಾವುದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಸಮಿತಿ ಅಧ್ಯಕ್ಷರೂ ಆಗಿರುವ ಲಿಂಗಸುಗೂರು ಉಪ ವಿಭಾಗಾಧಿಕಾರಿ ಬಸವಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಆರ್.ಬಸನಗೌಡ ತುರುವಿಹಾಳ ಸೇರಿದಂತೆ ಸಲಹಾ ಸಮಿತಿ ಸದಸ್ಯರು, ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
29 ಅಡಿ ನೀರು ಸಂಗ್ರಹದ (0.5 ಟಿಎಂಸಿ) ಜಲಾಶಯದಲ್ಲಿ 26 ಅಡಿ ನೀರು ಈಗಾಗಲೇ ಸಂಗ್ರಹವಾಗಿದ್ದು, ಸಭೆಯಲ್ಲಿ ಮುಂಗಾರು ಬೆಳೆಗೆ ನೀರು ಬಿಡುವ ಸಂಬಂಧ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.