ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಪ್ರಯಾಣ ಆರೂವರೆ ತಾಸು ವಿಳಂಬ: ಕೈ ತಪ್ಪಿದ ಕೆಪಿಎಸ್‌ಸಿ ಪರೀಕ್ಷೆ

Last Updated 14 ಡಿಸೆಂಬರ್ 2021, 21:46 IST
ಅಕ್ಷರ ಗಾತ್ರ

ಕಲಬುರಗಿ/ ರಾಯಚೂರು: ಹಾಸನ– ಸೊಲ್ಲಾಪುರ ರೈಲು (11312) ಪ್ರಯಾಣ ಮಂಗಳವಾರ ಆರೂವರೆ ತಾಸು ತಡವಾಗಿದ್ದರಿಂದ, ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಬಂದಿದ್ದ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಒಂದು ಪತ್ರಿಕೆ ಬರೆಯುವ ಅವಕಾಶದಿಂದ ವಂಚಿತರಾದರು.

ಬೆಳಿಗ್ಗೆ 7ಕ್ಕೆ ಕಲಬುರಗಿ ನಗರ ತಲುಪಬೇಕಾಗಿದ್ದ ರೈಲು ಮಧ್ಯಾಹ್ನ 1.30ಕ್ಕೆ ತಲುಪಿದೆ. ಇದರಿಂದ ಅಭ್ಯರ್ಥಿಗಳು ಎರಡನೇ ಪತ್ರಿಕೆ ಬರೆಯಲು ಮಾತ್ರ ಸಾಧ್ಯವಾಯಿತು. ಯಶವಂತಪುರ ರೈಲು ನಿಲ್ದಾಣದಿಂದಲೇ ಸೋಮವಾರ ರಾತ್ರಿ ಈ ರೈಲು ಎರಡು ತಾಸು ವಿಳಂಬವಾಗಿ ಹೊರಟಿತ್ತು.ರಾಯಚೂರು ತಲುಪಿದಾಗ ಬೆಳಿಗ್ಗೆ 9 ಗಂಟೆಯಾಗಿತ್ತು.

ಮೊದಲ ಪರೀಕ್ಷೆ ಬರೆಯಲು ಆಗದು ಎಂದರಿತ ಅಭ್ಯರ್ಥಿಗಳು, ರೈಲಿನಿಂದ ಇಳಿದು ಹಳಿಗಳ ಮೇಲೆ ಕುಳಿತು ಧರಣಿ ಆರಂಭಿಸಿದರು. ರೈಲ್ವೆ ಇಲಾಖೆ ಹಾಗೂ ಕೆಪಿಎಸ್‌ಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಮರು ಪರೀಕ್ಷೆ ನಡೆಸಬೇಕು ಎಂದು ಪಟ್ಟು ಹಿಡಿದರು. ಪೊಲೀಸ್‌ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಪ್ರತಿಭಟನಾನಿರತರು ಹಳಿಬಿಟ್ಟು ಕದಲಿಲ್ಲ.

‘ಮೂರು ವರ್ಷ ವಿಳಂಬವಾಗಿ ಸಹಾಯಕ ಎಂಜಿನಿಯಿರ್‌ ಹುದ್ದೆ ಆಯ್ಕೆ ಪರೀಕ್ಷೆ ನಡೆಸಲಾಗುತ್ತಿದೆ. ಇದು ನನಗೆ ಕೊನೆಯ ಅವಕಾಶ. ವಯೋಮಿತಿ ಮೀರಲಿದೆ. ಸರಿಯಾದ ಸಮಯಕ್ಕೆ ನಮ್ಮನ್ನು ತಲುಪಿಸಲಿಲ್ಲ. ಯಾರೋಮಾಡಿದ ತಪ್ಪಿಗೆ ನನಗೆ ಅನ್ಯಾಯವಾಗಿದೆ’ ಎಂದು ಚಿಕ್ಕಬಳ್ಳಾಪುರದ ಪವಿತ್ರಾ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ಸ್ಥಳಕ್ಕೆ ಬಂದ ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಕೆಪಿಎಸ್‌ಸಿ ಕಾರ್ಯದರ್ಶಿಗೆ ಕರೆಮಾಡಿ ಮಾತನಾಡಿದರು. ‘ಮೊದಲ ಅವಧಿಯ ಪರೀಕ್ಷೆಯನ್ನು ಮತ್ತೆ ನಡೆಸುವ ಬಗ್ಗೆ ನಂತರ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ, ಎಲ್ಲರೂ ತಕ್ಷಣಕ್ಕೆ ಕಲಬುರಗಿಗೆ ಹೊರಟು ಎರಡನೇ ಪರೀಕ್ಷೆಗೆ ಹಾಜರಾಗಿ’ ಎಂದು ಕೋರಿದರು.‌

ಇದಕ್ಕೆ ಒಪ್ಪಿದ ಅಭ್ಯರ್ಥಿಗಳೆಲ್ಲ ರೈಲು ಏರಿದರು. ಬೆಳಿಗ್ಗೆ 11.15ಕ್ಕೆ ರಾಯಚೂರಿನಿಂದ ಹೊರಟ ರೈಲು ಕಲಬುರಗಿ ತಲುಪಿದಾಗ ಮಧ್ಯಾಹ್ನ 1.30 ಆಗಿತ್ತು.

ಬಸ್‌ ವ್ಯವಸ್ಥೆ: ಅಭ್ಯರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾಡಳಿತ ತ್ವರಿತವಾಗಿ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸಿತ್ತು.

ಮತ್ತೆ ಅವಕಾಶ:‘ಡಿ.14ರಂದು ಪರೀಕ್ಷೆಗೆ ಸಂಚಾರ ಸಮಸ್ಯೆಯಿಂದ ಹಾಜರಾಗದವರಿಗೆ ನೆರವಾಗಲು ಕರ್ನಾಟಕ ಲೋಕಸೇವಾ ಆಯೋಗ ಸೂಕ್ತ ನಿರ್ಣಯ ಕೈಗೊಳ್ಳಲಿದೆ’ ಎಂದು ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಈ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಒಂದು ವಾರ ಮೊದಲೇ ನೀಡಿದೆ. ಹಿಂದಿನ ದಿನವೇ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿಕೊಳ್ಳಲು ಸೂಚಿಸಲಾಗಿತ್ತು. ಅಭ್ಯರ್ಥಿಗಳು ಪರೀಕ್ಷೆಯ ದಿನವೇ ಪ್ರಯಾಣ ಬೆಳೆಸಿದ್ದರಿಂದ ಈ ಗೊಂದಲ ಉಂಟಾಗಿದೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ವಿಷಯವನ್ನು ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಹಲವು ಸದಸ್ಯರು ಪ್ರಸ್ತಾಪಿಸಿದಾಗ ಉತ್ತರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಅಭ್ಯರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದರು.

ಎಂಟು ಮಂದಿಗೆ ಎರಡೂ ಪರೀಕ್ಷೆ ಇಲ್ಲ:‘ಪರೀಕ್ಷಾ ಕೇಂದ್ರಗಳನ್ನು ಗುರುತಿಸುವ ಧಾವಂತದಲ್ಲಿ ಎಂಟು ಅಭ್ಯರ್ಥಿಗಳು ಮಧ್ಯಾಹ್ನ 3.13ಕ್ಕೆ ಪರೀಕ್ಞಾ ಕೇಂದ್ರ ತಲುಪಿದರು. ಸಮಯ ಮೀರಿದ್ದರಿಂದ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ. ಉಳಿದಂತೆ ಸಂಚಾರ ದಟ್ಟಣೆ ಇಲ್ಲದೇ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕೊಠಡಿಗೆ ತಲುಪಿಸಿದ್ದೇವೆ‍’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ದುರ್ಗೇಶ್‌ ರುದ್ರಾಕ್ಷಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT