ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ನೀಡಲು ಬ್ಯಾಂಕುಗಳಿಗೆ ಶಾಸಕ ಸೂಚನೆ

ರಾಯಚೂರು ತಾಲ್ಲೂಕು ಪಂಚಾಯಿತಿ ತ್ರೈ ಮಾಸಿಕ ಕೆಡಿಪಿ ಸಭೆ
Last Updated 27 ಸೆಪ್ಟೆಂಬರ್ 2019, 14:27 IST
ಅಕ್ಷರ ಗಾತ್ರ

ರಾಯಚೂರು: ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಲು ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಮಂಜೂರಾದ ಸಾಲವನ್ನು ಬ್ಯಾಂಕುಗಳು ಒದಗಿಸಬೇಕು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಲೀಡ್ ಬ್ಯಾಂಕ್‌ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯ ಜಲನಿರ್ಮಲ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಪಂಚಾಯಿತಿಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ವಿವಿಧ ಯೋಜನೆಗಳಡಿ ನೂರಾರು ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಿದ್ದರೂ, ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಇದರಿಂದ ಸರ್ಕಾರದ ಯೋಜನೆಗಳಿಂದ ಜನರಿಗೆ ಲಾಭವಾಗದಂತಾಗಿದೆ. ಆದ್ದರಿಂದ ಬ್ಯಾಂಕುಗಳಿಗೆ ಸರಿಯಾಗಿ ನಿರ್ದೇಶನ ಮಾಡಬೇಕು ಎಂದರು.

ಲೀಡ್‌ ಬ್ಯಾಂಕ್‌ ಮುಖ್ಯ ಪ್ರಬಂಧಕ ಪಿ.ಎಸ್.ಕುಲಕರ್ಣಿ ಮಾತನಾಡಿ, ಸರ್ಕಾರದ ಯೋಜನೆಗಳಡಿ ಫಲಾನುಭವಿಗಳಿಗೆ ಸಾಲ ನೀಡಲಾಗುತ್ತಿದ್ದು, ನೀಡದಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರೆ ಸಾಲ ದೊರಕಿಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ನಿರ್ಮಿತಿ ಕೇಂದ್ರ ಪ್ರಗತಿ ಮಂಡಿಸಲು ಕಂಪ್ಯೂಟರ್ ಆಪರೇಟರ್‌ ಮುಂದಾದಾಗ, ಶಾಸಕ ಮಾತನಾಡಿ, ಸಂಬಂಧಿಸಿದ ಅಧಿಕಾರಿ ಬರದೇ ಮಾಹಿತಿ ನೀಡುವುದು ಅಗತ್ಯವಿಲ್ಲ ಎಂದು ಆಪರೇಟರ್‌ನನ್ನು ಸಭೆಯಿಂದ ಹೊರ ಕಳುಹಿಸಿದರು. ಸಭೆಗೆ ಬಾರದ ಅಧಿಕಾರಿಗಳಿಗೆ ಕಾರಣ ಕೇಳಜಿ ನೋಟಿಸ್‌ ಜಾರಿ ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಗಣಪತಿ ಸಾಕ್ರೆ ಮಾತನಾಡಿ, ಎಸ್‌ಡಿಪಿ ಯೋಜನೆಯಡಿ 92 ಯೋಜನೆಗೆ ಅನುಮತಿ ಸಿಕ್ಕಿದ್ದು, ಕಲ್ಮಲಾ ಮತ್ತು ತುಂಗಭದ್ರಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಅನುಮತಿ ದೊರೆತಿದೆ. 57 ಕಾಮಗಾರಿಗಳ ನಿರ್ವಹಣೆಗೆ ₹ 2.59 ಕೋಟಿ ಅನುದಾನ ನೀಡಲಾಗಿದೆ. ಜಲಧಾರೆ ಯೋಜನೆಗೆ ಬಜೆಟ್‌ ಅನುಮೋದನೆ ಸಿಕ್ಕಿರುವುದರಿಂದ ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಶಾಸಕ ಮಾತನಾಡಿ, ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿದ್ದರಿಂದ ಹಿಂಗಾರು ಬೀಜ ವಿತರಣೆಗೆ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು. ನಿಜವಾಗಿ ಅಗತ್ಯವಿರುವ ರೈತರಿಗೆ ಬೀಜ ನೀಡಬೇಕು. ಕಳೆದಬಾರಿ ಮಾರಾಟ ಮಾಡುವವರಿಗೆ ನೀಡಿದಂತೆ ಈ ಬಾರಿ ನೀಡಿ ಸಮಸ್ಯೆ ಮಾಡಬಾರದು ಎಂದರು.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ರೈತರಿಗೆ ಬಂದಿರುವ ಪರಿಹಾರ ದೊರೆತಿಲ್ಲ ಎಂದು ಬಹಳಷ್ಟು ರೈತರು ದೂರುತ್ತಿದ್ದಾರೆ. ವಿಮೆ ಮಾಡಿಸಿಕೊಂಡಿರುವ ರೈತರಿಗೆ ಸಮರ್ಪಕವಾಗಿ ಪರಿಹಾರ ದೊರಕಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ, ಕೆಡಿಪಿ ಸದಸ್ಯ ಜಯವಂತರಾವ್‌ ಪತಂಗೆ, ಜಿಲ್ಲಾ ಪಂಚಾಯಿತಿ ಸದಸ್ಯ ಖಾಸಿಂನಾಯಕ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT