ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಪ್ರಚಾರ ಚುರುಕುಗೊಳಿಸಲು ಸಜ್ಜು

ಅಸಮಾಧಾನ: ಪ್ರಚಾರದಿಂದ ದೂರ ಉಳಿಯುತ್ತಿರುವ ಮುಖಂಡರು
Published 9 ಏಪ್ರಿಲ್ 2024, 6:56 IST
Last Updated 9 ಏಪ್ರಿಲ್ 2024, 6:56 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾಗಿ ಹತ್ತು ದಿನ ಕಳೆದರೂ ಟಿಕೆಟ್‌ ಆಕಾಂಕ್ಷಿಗಳ ಅಸಮಾಧಾಶಮನಗೊಂಡಿಲ್ಲ. ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕೆ ಉತ್ಸಾಹ ತೋರುತ್ತಿಲ್ಲ. ಇದನ್ನು ಸೂಕ್ಷ್ಮವಾಗಿ ಮನಗಂಡಿರುವ ಬಿಜೆಪಿ ಪ್ರಚಾರಕ್ಕೆ ತಾರಾ ಮೆರುಗು ನೀಡಲು ಮುಂದಾಗಿದೆ.

ಪ್ರಚಾರ ಸಭೆಗಳಲ್ಲಿ ಬಿಜೆಪಿಯ ಮುಖಂಡರೇ ಸೇರುತ್ತಿಲ್ಲ. ಕಾರ್ಯಕರ್ತರ ಸಂಖ್ಯೆಯೂ ಬೆರಳೆಣಿಕೆಯಷ್ಟು ಇದೆ. ಜೆಡಿಎಸ್‌ ಕಾರ್ಯಕರ್ತರಲ್ಲಿನ ಉತ್ಸಾಹ ಬಿಜೆಪಿ ಕಾರ್ಯಕರ್ತರಲ್ಲಿ ಕಾಣಸಿಗುತ್ತಿಲ್ಲ. ಇದು ಪಕ್ಷದ ಮುಖಂಡರಲ್ಲೂ ಆತಂಕ ಸೃಷ್ಟಿಸಿದೆ. ಹೀಗಾಗಿ ಪಕ್ಷದ ವರಿಷ್ಠರು ಚುನಾವಣಾ ತಂತ್ರ ಹೆಣೆಯುತ್ತಿದ್ದಾರೆ.

ಕೊಪ್ಪಳ ಕ್ಷೇತ್ರದಲ್ಲಿ ಸಂಗಣ್ಣ ಕರಡಿ, ರಾಯಚೂರು ಕ್ಷೇತ್ರದಲ್ಲಿ ಬಿ.ವಿ.ನಾಯಕ ಹಾಗೂ ಬೆಂಬಲಿಗರು ಚುನಾವಣೆಯಲ್ಲಿ ಒಳಏಟು ಕೊಟ್ಟರೆ ಕಷ್ಷ ಎನ್ನುವ ಆತಂಕದಲ್ಲಿ ಇದ್ದಾರೆ. ಈ ಎರಡೂ ಕ್ಷೇತ್ರಗಳ ಮತದಾರರ ಮೇಲೆ ಹೆಚ್ಚಿನ ಪ್ರಭಾವ ಬೀರುವ ದಿಸೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರೇ ಬರಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ತೆಲುಗು ಚಲನಚಿತ್ರ ನಟ ಪವನಕಲ್ಯಾಣ ಅವರೂ ಪ್ರಚಾರದ ಪಟ್ಟಿಯಲ್ಲಿದ್ದಾರೆ. ಇವರ ಪ್ರಚಾರ ಸಭೆಯ ದಿನಾಂಕ ನಿಗದಿಯಾಗುವುದೊಂದೇ ಬಾಕಿ ಇದೆ.

‘ಲಿಂಗಸುಗೂರಿನ ಮಾನಪ್ಪ ವಜ್ಜಲ್‌ ಅವರ ಸಹೋದರನ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಅವರು ಶೀಘ್ರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ದೇವದುರ್ಗದ ಜೆಡಿಎಸ್‌ ಶಾಸಕಿ ಕರೆಮ್ಮ ನಾಯಕ ಅವರೂ ಭಾಗವಹಿಸಲಿದ್ದಾರೆ‘ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ತಿಳಿಸಿದರು.

‘ಯಾದಗಿರಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಬಿ.ವಿ.ನಾಯಕ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಹೀಗಾಗಿ ಸ್ವಲ್ಪ ಅಸಮಧಾನ ಇರಬಹುದು. ಒಂದು ವಾರದಲ್ಲಿ ಎಲ್ಲವೂ ಸರಿಯಾಗಿ ಬಿರುಸಿನ ಪ್ರಚಾರ ಆರಂಭವಾಗಲಿದೆ.’ ಎಂದು ಹೇಳಿದರು.

‘ಸಿಂಧನೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಯಚೂರಿಗೆ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ತೆಲುಗು ಚಲನಚಿತ್ರ ನಟ ಪವನಕಲ್ಯಾಣ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲಿದ್ದಾರೆ‘ ಎಂದು ಶಿವರಾಜ ಪಾಟೀಲ ತಿಳಿಸಿದರು.

‘ರಾಯಚೂರು ತಾಲ್ಲೂಕು ಮಟ್ಟದ ಬಿಜೆಪಿ–ಜೆಡಿಎಸ್‌ ಸಮನ್ವಯ ಸಮಿತಿ ಸಭೆ ಮಾತ್ರ ನಡೆದಿದೆ. ಉಳಿದ ತಾಲ್ಲೂಕುಗಳಲ್ಲಿ ಸಮನ್ವಯ ಸಮಿತಿ ಸಭೆ ನಡೆಸುವಂತೆ ಬಿಜೆಪಿ ಮುಖಂಡರಿಗೆ ಸೂಚಿಸಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಮೈತ್ರಿಯಾಗಿರುವ ಕಾರಣ ನಮ್ಮ ಪಕ್ಷದ ವರಿಷ್ಠರು ಸೂಚಿಸಿದಂತೆ ಬಿಜೆಪಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ಮೈತ್ರಿ ಧರ್ಮ ನಿಭಾಯಿಸಲಾಗುತ್ತಿದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ ತಿಳಿಸಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಎದುರಾಳಿಯಾಗಿದ್ದ ದೇವದುರ್ಗ ಹಾಗೂ ಮಾನ್ವಿಯಲ್ಲಿ ಜೆಡಿಎಸ್‌ ಕಾರ್ಯಕರ್ತರಿಗೆ ಸ್ವಲ್ಪ ಮುಜಗರ ಆಗಿರುವುದು ನಿಜ. ದೇವದುರ್ಗದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಅವರು ತಮ್ಮ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ‘ ಎಂದರು.

‘ರಾಯಚೂರಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರಿಗಿಂತಲೂ ಜೆಡಿಎಸ್‌ ಕಾರ್ಯಕರ್ತರೇ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಾಮಪತ್ರ ಸಲ್ಲಿಸಲು ಇನ್ನು ಸಮಯ ಇದೆ. ಒಂದು ವಾರದಲ್ಲಿ ಪ್ರಚಾರ ಬಿರುಸುಕೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ
ಪವನಕಲ್ಯಾಣ
ಪವನಕಲ್ಯಾಣ

ಮನಸ್ಸು ಬಿಚ್ಚಿ ಪ್ರಚಾರದಲ್ಲಿ ತೊಡಗದ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಸಕ್ತೀಯವಾಗಿರುವ ಜೆಡಿಎಸ್‌ ಆರು ತಾಲ್ಲೂಕುಗಳಲ್ಲಿ ನಡೆಯದ ಮೈತ್ರಿ ಸಮನ್ವಯ ಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT