ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | ವಾಡಿಕೆಗಿಂತ ಹೆಚ್ಚು ಮಳೆ: ಬಿತ್ತನೆಗೆ ತೊಡಕು

ಜಿಲ್ಲೆಯಲ್ಲಿ ಬಿರುಸು ಪಡೆಯದ ಕೃಷಿ ಚಟುವಟಿಕೆ
Published 17 ಜೂನ್ 2024, 6:00 IST
Last Updated 17 ಜೂನ್ 2024, 6:00 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಲಿಂಗಸುಗೂರು ತಾಲ್ಲೂಕಿನಲ್ಲಿ ಮಾತ್ರ ಜೂನ್‌ನಲ್ಲಿ ಹದವಾಗಿ ಮಳೆಯಾಗಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರಾಯಚೂರು ಹಾಗೂ ಸಿಂಧನೂರು ತಾಲ್ಲೂಕು ಹೊರತುಪಡಿಸಿ ಉಳಿದ ಕಡೆ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿದೆ.

ಬೇಸಿಗೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 46 ಡಿಗ್ರಿ ಸೆಲ್ಸಿಯಸ್‌ ಇತ್ತು. ರೈತರು ಹೊಲಗಳಿಗೆ ಹೋಗಿ ಉಳುಮೆ ಮಾಡಿ ಬಿತ್ತನೆಗೆ ಭೂಮಿ ಹದ ಮಾಡುವಂತಹ ವಾತಾವರಣ ಇರಲಿಲ್ಲ.

ಸಾಮಾನ್ಯವಾಗಿ ಜೂನ್‌ನಲ್ಲಿ 98 ಮಿ.ಮೀ ಮಳೆಯಾದರೆ, ಈ ಬಾರಿ ಸರಾಸರಿ 108 ಮಿ.ಮೀ. ಮಳೆ ಸುರಿದೆ. ಹದಿನೈದು ದಿನಗಳ ಅವಧಿಯಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಮೇ ಅಂತ್ಯದಲ್ಲೇ ಮಳೆ ಆರಂಭವಾಗಿದ್ದರಿಂದ ಜಮೀನಿನಲ್ಲಿ ನೀರು ನಿಂತು ಹಸಿಯಾಗಿದೆ. ನೆಲ ಒಣಗುವವರೆಗೂ ಬಿತ್ತನೆಗೆ ಕಾಯಬೇಕಾಗಿದೆ.

ಲಿಂಗಸುಗೂರು ತಾಲ್ಲೂಕಿನಲ್ಲಿ ಮಾತ್ರ ಸರಾಸರಿ ಅರ್ಧದಷ್ಟು ಪ್ರದೇಶದಲ್ಲಿ ಬಿತ್ತನೆ ಮುಗಿದಿದೆ. ಮಸ್ಕಿ ತಾಲ್ಲೂಕಿನಲ್ಲಿ ಶೇಕಡ 22.06ರಷ್ಟು ಬಿತ್ತನೆಯಾಗಿದೆ. ರಾಯಚೂರು ತಾಲ್ಲೂಕಿನಲ್ಲಿ ನೀರಾವರಿ ಸೌಲಭ್ಯವಿಲ್ಲ. ಮಳೆಯ ಕೊರತೆ ಇರುವ ಕಾರಣ ಇನ್ನೂ ಬಿತ್ತನೆ ಕಾರ್ಯ ಬಿರುಸು ಪಡೆದುಕೊಂಡಿಲ್ಲ.

ಸಿಂಧನೂರು ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ ರೈತರು ಉಳುಮೆ ಮಾಡಿ ಭೂಮಿ ಹದ ಮಾಡಿಕೊಂಡಿದ್ದು, ಮಳೆ ಆಗಾಗ ಕೈಕೊಡುವುದರಿಂದ ರೈತರು ಕಾಲುವೆಗೆ ನೀರು ಬರುವ ನಿರೀಕ್ಷೆಯಲ್ಲಿ ಇದ್ದಾರೆ. ಸಿಂಧನೂರು ತಾಲ್ಲೂಕಿನಲ್ಲಿ ಇನ್ನೂ ಬಿತ್ತನೆಯೇ ಆರಂಭವಾಗಿಲ್ಲ.

ಜಿಲ್ಲೆಯಲ್ಲಿ 3163 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆಯಾಗಿದೆ. 1327 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆಯಾಗಬೇಕಿದೆ. 41991 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಹತ್ತಿಗೆ ಹೆಚ್ಚಿನ ಬೇಡಿಕೆ

ರಾಯಚೂರು ತಾಲ್ಲೂಕಿನಲ್ಲಿ ಒಟ್ಟು 99904 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ 6050 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ, 1080 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ, 670 ಹೆಕ್ಟೇರ್‌ ಪ್ರದೇಶದಲ್ಲಿ ಸಜ್ಜೆ, ಹೆಸರು, ಮೆಕ್ಕೆ ಜೋಳ ಬಿತ್ತನೆ ಮಾಡಲಾಗಿದೆ. ಒಟ್ಟು 7800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಮಾರುಕಟ್ಟೆಯಲ್ಲಿ ಹತ್ತಿ ಬೀಜಗಳಿಗೆ ಹೆಚ್ಚಿನ ಬೇಡಿಕೆ ಇದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ತೊಗರಿ, ಭತ್ತ ಹಾಗೂ ಹೆಸರು ಬೀಜ ಪೂರೈಕೆ ಮಾಡಲಾಗಿದೆ. ಅಗತ್ಯ ರಸಗೊಬ್ಬರದ ದಾಸ್ತಾನು ಇದೆ.

‘ಹತ್ತಿ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಕೆಲಕಡೆ ಹತ್ತಿ ಬಿತ್ತನೆ ಮಾಡಲಾಗಿದೆ. ಕೃಷಿ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಬೆಳವಣಿಗೆ ಹಂತವನ್ನು ಪರಿಶೀಲಿಸಿ ರೈತರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ‘ ಎಂದು ರಾಯಚೂರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕಿ ದೀಪಾ ತಿಳಿಸಿದರು.

ಜಮೀನುಗಳು ಜಲಾವೃತ....

ಕವಿತಾಳ: ಈಚೆಗೆ ಸತತವಾಗಿ ಸುರಿದ ಮಳೆಗೆ ಜಮೀನುಗಳು ಜಲಾವೃತಗೊಂಡಿವೆ, ಜಿಟಿ ಜಿಟಿ ಮಳೆ ಬಿತ್ತನೆಗೆ ಬಿಡುವು ಕೊಟ್ಟಿಲ್ಲ.

ವಟಗಲ್, ಅಮೀನಗಡ, ಹುಸೇನಪುರ, ಸೈದಾಪುರ, ತೊಪ್ಪಲದೊಡ್ಡಿ ಮೊದಲಾದ ಹಳ್ಳಿಗಳ ವ್ಯಾಪ್ತಿಯಲ್ಲಿ ಕೆಲವು ರೈತರು ಬಿತ್ತನೆ ಮಾಡಿದ್ದಾರೆ, ಮತ್ತೆ ಕೆಲವರು ಬಿತ್ತನೆ ಬೀಜ ರಸಗೊಬ್ಬರ ಖರೀದಿಸಿ ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದಾರೆ,

‘ಈಗಾಗಲೇ ಬಿತ್ತನೆ ಮಾಡಿದ ಕೆಲವು ಜಮೀನುಗಳಲ್ಲಿ ನೀರು ನಿಂತಿರುವುದು ಮತ್ತು ರಭಸದ ಮಳೆಗೆ ಕೊಚ್ಚಿಹೋಗಿದ್ದು ಮರು ಬಿತ್ತನೆಗೆ ರೈತರು ಚಿಂತನೆ ನಡೆಸಿದ್ದಾರೆ. ಇನ್ನೂ ಒಂದು ವಾರ ಬಿತ್ತನೆಗೆ ಅವಕಾಶ ಸಿಗುವ ಲಕ್ಷಣ ಕಾಣುತ್ತಿಲ್ಲ ಎಂದು ರೈತರಾದ ಯಂಕಪ್ಪ ಮತ್ತು ರಾಜಾಸಾಬ ಹೇಳುತ್ತಾರೆ.


‘ನಾಲ್ಕು ಎಕರೆ ಜಮೀನಿನಲ್ಲಿ ಹತ್ತಿ ಬಿತ್ತನೆ ಮಾಡಿದ್ದೆ ರಭಸದ ಮಳೆಗೆ ಅಂದಾಜು 3.5 ಎಕರೆ ಕೊಚ್ಚಿ ಹೋಗಿದೆ, ಪ್ರತಿ ಕೆ.ಜಿ. ಹತ್ತಿ ಬಿತ್ತನೆ ಬೀಜ ₹ 930 ರಂತೆ 10 ಪಾಕೆಟ್ ಮತ್ತು ಬಿತ್ತನೆ ಖರ್ಚು ಸೇರಿ ₹ 10 ಸಾವಿರ ನಷ್ಟವಾಗಿದೆ ಈಗ ಮತ್ತೊಮ್ಮೆ ಬೀಜ ಖರೀದಿಸಿ ಬಿತ್ತನೆ ಮಾಡಬೇಕಾಗಿದೆʼ ಎನ್ನುತ್ತಾರೆ ಹುಸೇನಪುರ ಗ್ರಾಮದ ರೈತ ಹನುಮಣ್ಣ.

ಸಿಂಧನೂರು ತಾಲ್ಲೂಕಿನಲ್ಲಿ 30,293 ಹೆಕ್ಟೇರ್ ಪ್ರದೇಶ ಪೈಕಿ 4718 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಜೂನ್ 1 ರಿಂದ 13 ರವರೆಗೆ ವಾಡಿಕೆಯಂತೆ 106 ಮಿ.ಮೀ ಮಳೆ ಸರಿಯಬೇಕಿತ್ತು. ಆದರೆ, 253 ಮಿ.ಮೀ ಮಳೆಯಾಗಿದೆ.

‘ತಾಲ್ಲೂಕಿನಲ್ಲಿ ಶೇ 70 ರಷ್ಟು ನೀರಾವರಿ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಹೀಗಾಗಿ ಭತ್ತದ ಸಸಿಗಳ ಮಡಿ ಮಾಡುವ ಕಾರ್ಯ ಭರದಿಂದ ಸಾಗಿದೆ‘ ಎಂದು ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್ ತಿಳಿಸಿದರು.

ಅರ್ಧದಷ್ಟು ಬಿತ್ತನೆ ಕಾರ್ಯ ಪೂರ್ಣ

ಲಿಂಗಸುಗೂರು: ಬರಗಾಲದಿಂದ ತತ್ತರಿಸಿದ್ದ ರೈತ 2024-25ರ ನಿರೀಕ್ಷೆಗೂ ಮೀರಿ ಮುಂಗಾರು ಮಳೆ ಬಿದ್ದಿರುವುದು ರೈತರಲ್ಲಿ ಹರ್ಷ ತಂದಿದೆ. ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.
ತಾಲ್ಲೂಕಿನಲ್ಲಿ 98.4ಮಿ.ಮೀ ವಾಡಿಕೆ ಮಳೆ ಆಗಬೇಕಿತ್ರು. ಆದರೆ 169.9ಮಿ.ಮೀ ಮಳೆ ಸುರಿದಿದ್ದು ಶೇ 73ರಷ್ಟು ಹೆಚ್ಚುವರಿ ಮಳೆ ಬಂದಿದೆ. ಒಟ್ಟು 61131 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ರೈತರು ಜಮೀನು ಹದ ಮಾಡಿಕೊಂಡಿದ್ದು ತೊಗರಿ, ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ, ಹೆಸರು ಬಿತ್ತನೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಬರಗಾಲದ ಮಧ್ಯೆಯೂ ತೊಗರಿ, ಕಡಲೆ ಬೆಳೆ ಸಾಥ್ ನೀಡಿದ್ದವು. ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆತು ರೈತರ ಜೇಬು ತುಂಬಿಸಿತ್ತು. ಹೀಗಾಗಿ ಈ ವರ್ಷ ಕೂಡ ಹೆಚ್ಚಿನ ರೈತರು ತೊಗರಿ ಬಿತ್ತನೆಗೆ ಮುಂದಾಗಿದ್ದಾರೆ.
'ಲಿಂಗಸುಗೂರು ತಾಲ್ಲೂಕಿನಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಸಂಗ್ರಹಿಸಲಾಗಿದೆ. ಹೆಚ್ಚಿನ ರೈತರು ತೊಗರಿ ಬಿತ್ತನೆಗೆ ಮುಂದಾಗಿದ್ದು ಕೃಷಿ ವಿಜ್ಞಾನಿಗಳಿಂದ ಈಗಾಗಲೇ ಮಾಹಿತಿ ನೀಡಲಾಗಿದೆ' ಎಂದು ಸಹಾಯಕ ಕೃಷಿ ನಿರ್ದೇಶಕಿ ನಾಗರತ್ನ ಎಚ್ ಹುಲಕೋಟೆ ಹೇಳಿದರು.

ಕಾಲುವೆ ನೀರಿಗೆ ಕಾಯುತ್ತಿರುವ ರೈತರು

ಸಿರವಾರ : ಉತ್ತಮ ಮಳೆಯಾಗುತ್ತಿದ್ದರೂ ರೈತರು ತುಂಗಭದ್ರಾ ಕಾಲುವೆ ನೀರಿಗಾಗಿ ಕಾಯುತ್ತಿದ್ದಾರೆ. ಬಯಲು ಸೀಮೆಯ ರೈತರು ಹತ್ತಿ, ತೊಗರಿ, ಮೆಣಸಿಕಾಯಿ, ಜೋಳ ಸೂರ್ಯಕಾಂತಿ ಬಿತ್ತನೆಯಲ್ಲಿ ತೊಡಗಿದ್ದಾರೆ.
ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ಭತ್ತ, ತೊಗರಿ, ಸೂರ್ಯಕಾಂತಿ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ.
ಪಟ್ಟಣದ ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಹತ್ತಿ ಬೀಜಗಳನ್ನು ಮಾರಾಟ ಮಾಡಲಾಗುತ್ತಿದ್ದು, ರೈತರು ಹೆಚ್ಚು ಚೌಕಾಸಿ ಮಾಡದೇ ಬಿತ್ತನೆ ಬೀಜ ಖರೀದಿಸುತ್ತಿದ್ದಾರೆ. ದರದ ಬಗ್ಗೆ ಕೃಷಿ ಅಧಿಕಾರಿಗಳು ಕಂಡು ಕಾಣದಂತೆ ಮೌನ ವಹಿಸಿದ್ದು, ರೈತರಿಗೆ ಅಂಗಡಿಯವರು ಹೇಳಿದ ದರಕ್ಕೆ ಅನಿವಾರ್ಯವಾಗಿ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ

ಭತ್ತ, ತೊಗರಿ ಬಿತ್ತನೆಗೆ ಆದ್ಯತೆ

ದೇವದುರ್ಗ: ತಾಲ್ಲೂಕಿನಾದ್ಯಂತ ಎರಡು ವಾರಗಳಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಬಿತ್ತನೆ ಕಾರ್ಯಕ್ಕೆ ಸ್ವಲ್ಪ ಮಟ್ಟಿಗೆ ತೊಡಕಾಗಿದೆ.

ತಾಲ್ಲೂಕಿನ 1.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. 33,700 ಸಾವಿರ ಖುಷ್ಕಿ ಹಾಗೂ 71,500 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಭತ್ತದ ತಳಿಗಳಾದ ಸೋನಾ ಮಸೂರಿ ಮತ್ತು ಅರ್ನಾರ್ 300 ಕ್ವಿಂಟಲ್, 450 ಕ್ವಿಂಟಲ್ ತೊಗರಿ, 2 ಕ್ವಿಂಟಲ್ ಹೆಸರು ಸೂರ್ಯಕಾಂತಿ ಬೀಜಗಳನ್ನು ಕೃಷಿ ಇಲಾಖೆ ವತಿಯಿಂದ ವಿತರಿಸಲಾಗಿದೆ. ತಾಲ್ಲೂಕಿನ ಹೋಬಳಿ ಕೇಂದ್ರಗಳಾದ ಗಬ್ಬೂರು, ಅರಕೇರಾ, ಜಾಲಹಳ್ಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ನಾಯಕ ತಿಳಿಸಿದ್ದಾರೆ.

ಸಹಕಾರ: ಮಂಜುನಾಥ ಬಳ್ಳಾರಿ, ಬಿ.ಎ.ನಂದಿಕೋಲಮಠ, ಡಿ.ಎಚ್‌.ಕಂಬಳಿ, ಪ್ರಕಾಶ ಮಸ್ಕಿ, ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ.

ಕವಿತಾಳ ಸಮೀಪದ ಹುಸೇನಪುರ ಮಾರ್ಗದ ಹೊಲವೊಂದರಲ್ಲಿ ಬಿತ್ತನೆ ಮಾಡಿದ ಜಮೀನಿನಲ್ಲಿ ಮಳೆ ನೀರು ನಿಂತಿರುವುದು
ಕವಿತಾಳ ಸಮೀಪದ ಹುಸೇನಪುರ ಮಾರ್ಗದ ಹೊಲವೊಂದರಲ್ಲಿ ಬಿತ್ತನೆ ಮಾಡಿದ ಜಮೀನಿನಲ್ಲಿ ಮಳೆ ನೀರು ನಿಂತಿರುವುದು
ಲಿಂಗಸುಗೂರು ತಾಲ್ಲೂಕಿನ ಜಮೀನೊಂದರಲ್ಲಿ ರೈತರು ಬಿತ್ತನೆ ಮಾಡುತ್ತಿರುವುದು
ಲಿಂಗಸುಗೂರು ತಾಲ್ಲೂಕಿನ ಜಮೀನೊಂದರಲ್ಲಿ ರೈತರು ಬಿತ್ತನೆ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT