ಗುರುವಾರ , ಡಿಸೆಂಬರ್ 5, 2019
24 °C
ಡೆಂಗಿ ಜ್ವರದಿಂದ ಬಳಲುತ್ತಿರುವ ಸುತ್ತಮುತ್ತಲಿನ ಬಡಾವಣೆಗಳು

ರಾಯಚೂರು: ನಗರದಲ್ಲೊಂದು ಸೊಳ್ಳೆ ಉತ್ಪತ್ತಿ ಕೆರೆ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಕೊಳೆಗೇರಿಗಳಲ್ಲಿ ವಾಸಿಸುವ ಬಡವರು ಡೆಂಗಿ ಜ್ವರ ಹಾಗೂ ಇತರೆ ರೋಗ ರುಜಿನಗಳಿಂದ ಬಳಲುವಂತಾಗಿದೆ.

ರಿಮ್ಸ್‌ ಸೇರಿದಂತೆ ಯಾವುದೇ ಖಾಸಗಿ ಆಸ್ಪತ್ರೆಗೆ ಹೋಗಿ ಪರಿಶೀಲಿಸಿದರೆ ಚಳಿ, ಜ್ವರದ ಬಾಧೆ ಸಹಿಸದೆ ದಾಖಲಾಗಿರುವ ರೋಗಿಗಳಿದ್ದಾರೆ. ಮಳೆಗಾಲ ಮುಗಿಯುತ್ತಿದ್ದಂತೆ ನಗರದ ಸಂದಿಗೊಂದಿಗಳಲ್ಲಿ ಸಂಗ್ರಹವಾದ ನೀರಿನಲ್ಲಿ, ಚಲನೆಯಿಲ್ಲದೆ ಚರಂಡಿಗಳಲ್ಲಿ ಸೊಳ್ಳೆಗಳ ಸಂತತಿ ದ್ವಿಗುಣ ಆಗುತ್ತಿದೆ.

‘ಡೆಂಗಿ ಜ್ವರದ ಶಂಕೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೀವಕ್ಕೆ ಅಪಾಯ ಬರಬಹುದು ಎಂದು ಮೊದಲೇ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಒಬ್ಬರಾದ ಮೇಲೆ ಒಬ್ಬರು ಆಸ್ಪತ್ರೆಗೆ ಹೋಗಿ ಬರುತ್ತಿದ್ದೇವೆ. ಮನೆಮಂದಿಗೆಲ್ಲ ಜ್ವರ ಬರುತ್ತಿವೆ. ದುಡಿದು ಕೂಡಿಹಾಕಿದ್ದ ಹಣವೆಲ್ಲ ಆಸ್ಪತ್ರೆಗೆ ಹಾಕಿದ್ದೇವೆ. ನಗರಸಭೆಯವರು ಕಳೆದ ವರ್ಷ ಎಲ್ಲ ಕಡೆಗೂ ಹೊಗೆ ಹಾಕಿ ಹೋಗುತ್ತಿದ್ದರು. ಈಗ ಆಯ್ಕೆಯಾದ ವಾರ್ಡ್‌ ಸದಸ್ಯರು ಏನೂ ಕೆಲಸ ಮಾಡಿಸುತ್ತಿಲ್ಲ’ ಎಂದು ಪ್ರತಿಯೊಂದು ಕೊಳೆಗೇರಿಗಳಲ್ಲಿರುವ ಬಡವರು ಶಾಪ ಹಾಕುತ್ತಿದ್ದಾರೆ.

ನಗರದ ಮಧ್ಯೆಭಾಗದಲ್ಲಿರುವ ಮಾವಿನಕೆರೆಯು ಸೊಳ್ಳೆ ಸಂತತಿಯ ಉತ್ಪತ್ತಿ, ಪಾಲನೆ ಹಾಗೂ ಪೋಷಣೆಯ ಕೇಂದ್ರವಾಗಿ ಕುಖ್ಯಾತಿ ಪಡೆದಿದೆ. ಕಲ್ಮಶ ನೀರಿನಲ್ಲಿ ಬೇರೆಬೇರೆ ಕ್ರಿಮಿಗಳು ಸಹ ಹುಟ್ಟುಕೊಂಡಿದ್ದು, ಸಂಜೆಯಾದರೆ ಸುತ್ತಮುತ್ತಲಿನ ಬಡಾವಣೆಗಳ ಮೇಲೆ ದಾಳಿ ಮಾಡುತ್ತವೆ. ಸೂರ್ಯಾಸ್ತದ ಬಳಿಕ ಕೆರೆ ಆಸುಪಾಸು ಸಂಚರಿಸುವವರ ಮುಖಕ್ಕೆ ಕ್ರಿಮಿಗಳು ಮುತ್ತಿಕೊಳ್ಳುತ್ತವೆ.

ಇಂದಿರಾನಗರ, ಜಹೀರಾಬಾದ್‌, ಸತ್ಯನಾಥ ಕಾಲೋನಿ, ಗಂಗಾನಿವಾಸ, ಆಶೋಕ ಡಿಪೋ ಸುತ್ತಲಿನ ಜನರು ಕಲ್ಮಶಗೊಂಡ ಕೆರೆ ನೀರಿನ ಮೇಲಿಂದ ಸೂಸಿಬರುವ ಗಾಳಿಯನ್ನೇ ಉಸಿರಾಡುತ್ತಾರೆ. ಇದೇ ಗಾಳಿಯಲ್ಲಿ ಬರುವ ಸೊಳ್ಳೆ ಮತ್ತು ಇತರೆ ಕೀಟಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮಕ್ಕಳು ಮತ್ತು ವಯೋವೃದ್ಧರು ಅತಿಹೆಚ್ಚಿನ ಸಂಖ್ಯೆಯಲ್ಲಿ ಜ್ವರದಿಂದ ಬಳಲುತ್ತಿದ್ದು, ಕೊಳೆಗೇರಿಯ ಜನರು ಶೀತ, ಚಳಿ ಹಾಗೂ ಜ್ವರದಿಂದ ಮುಕ್ತರಾಗಲು ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಉಪಜೀವನಕ್ಕಾಗಿ ಹಣ ಕೂಡಿಟ್ಟವರು ಮಾತ್ರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜೀವ ಸಾಗಿಸಲು ಕಷ್ಟಪಡುತ್ತಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು